ಮಂಗಳೂರು ನಗರದ ಹೊರವಲಯದ ತೊಕ್ಕೊಟ್ಟು ಚೆಂಬುಗುಡ್ಡೆ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಮಹಿಳೆಯು ದಾರುಣವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಡಿವೈಎಫ್ಐ ಉಳ್ಳಾಲ ತಾಲೂಕು ಸಮಿತಿಯ ವತಿಯಿಂದ ಶನಿವಾರ ತಡರಾತ್ರಿ ಚೆಂಬುಗುಡ್ಡೆಯಲ್ಲಿ ನಾಗರಿಕರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ಉಳ್ಳಾಲ ತಾಲೂಕು ಸಮಿತಿ ಅಧ್ಯಕ್ಷ ನ್ಯಾಯವಾದಿ ನಿತಿನ್ ಕುತ್ತಾರ್, “ಉಳ್ಳಾಲದ ಶಾಸಕರಾದ ಸ್ಪೀಕರ್ ಯು.ಟಿ.ಖಾದರ್ ಈ ರಸ್ತೆಯನ್ನು ಟೋಲ್ ಮುಕ್ತ ರಸ್ತೆ ಎಂದು ಜಂಭ ಕೊಚ್ಚಿಕೊಳ್ಳುತ್ತಾರೆ. ಇವತ್ತು ಇಲ್ಲಿ ಅಪಘಾತ ಸಂಭವಿಸಿ ಒಂದು ಮಹಿಳೆಯ ಪ್ರಾಣವೇ ಹೋಗಿದೆ. ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗದ ಇವರು ಯಾವ ಸೀಮೆಯ ಅಭಿವೃದ್ದಿಯ ಹರಿಕಾರ” ಎಂದು ಹರಿಹಾಯ್ದರು.ಇನ್ನೊಂದು ವಾರದಲ್ಲಿ ಈ ರಸ್ತೆಯನ್ನು ಸರಿಪಡಿಸದೇ ಇದ್ದಲ್ಲಿ ಶಾಸಕರ ಕಛೇರಿಗೆ ತೆರಳಿ ಕಪ್ಪು ಬಾವುಟ ಹಿಡಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷರಾದ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಸುಂದರವಾಗಿದ್ದ ತೊಕ್ಕೊಟ್ಟು ಪೇಟೆಯನ್ನು ಹಾಳು ಮಾಡಿದ್ದಾರೆ. ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ದಾಟಲು ಪರದಾಟುತ್ತಿದ್ದಾರೆ. ರಸ್ತೆಗಳೆಲ್ಲವೂ ಮರಣ ಗುಂಡಿಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಉಳ್ಳಾಲ ಉಪಾಧ್ಯಕ್ಷರಾದ ರಝಾಕ್ ಮುಡಿಪು,ಅಶ್ರಫ್ ಹರೇಕಳ ಕೋಶಾಧಿಕಾರಿ ಅಶ್ಫಾಕ್ ಅಲೇಕಳ, ಮುಖಂಡರಾದ ರಝಾಕ್ ಮೊಂಟೆಪದವು, ವಿಕಾಸ್ ಕುತ್ತಾರ್, ಅಲ್ತಾಫ್ ಮುಡಿಪು, ಸಿರಾಜ್ ಮೊಂಟೆಪದವು, ಅಕ್ಷಿತ್ ಕುತ್ತಾರ್,ಇಕ್ಬಾಲ್ ಹರೇಕಳ,ಹೈದರ್ ಆಲಡ್ಕ,ಬಶೀರ್ ಲಚ್ಚಿಲ್,ನೌಫಲ್ ಅಲೇಕಳ,ಸರ್ಫರಾಜ್ ಗಂಡಿ,ಅನ್ಸಾರ್ ಖಂಡಿಗ,ಶಾಫಿ ಮುಡಿಪು,ದಿವ್ಯರಾಜ್ ಕುತ್ತಾರ್,ರಫೀಕ್ ಹರೇಕಳ,ಇಬ್ರಾಹಿಂ ಮದಕ ಉಪಸ್ಥಿತರಿದ್ದರು. ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ಸ್ವಾಗತಿಸಿ ವಂದಿಸಿದರು.

