ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು ಹವಾಮಾನ ಬದಲಾವಣೆಯಿಂದಾಗುವ ಸಮಸ್ಯೆಗಳನ್ನು ಸೂಕ್ತವಾಗಿ ಅರಿತುಕೊಳ್ಳುವುದು ಅವಶ್ಯಕವಾಗಿದೆ ಎಂದು ಹವಾಮಾನ ವೈಪರೀತ್ಯ ನಿರ್ವಹಣೆ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಛೇರಿಯ ಆವರಣದಲ್ಲಿರುವ ನೌಕರರ ಭವನದಲ್ಲಿ ಪಾಲಿಕೆಯ ಹವಾಮಾನ ಕ್ರಿಯಾ ಕೋಶವು ಆಯೋಜಿಸಿದ್ದ ಮಕ್ಕಳೊಂದಿಗಿನ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ದಿನ ನಿತ್ಯದ ಜೀವನದಲ್ಲಿ ಮಿತವಾದ ನೀರಿನ ಬಳಕೆ, ಎ.ಸಿ ಬಳಕೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಂತಹ ಚಿಕ್ಕ ಪುಟ್ಟ ಹೊಂದಾಣಿಕೆಗಳನ್ನು ದೀರ್ಘಕಾಲದವರೆಗೆ ನಡೆಸಿದಾಗ ಹವಾಮಾನ ಬದಲಾವಣೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರಬಹುದು. ಪರಿಸರ, ಹವಾಮಾನಕ್ಕೆ ಹಾನಿಕಾರಕವಾಗುವ ವಸ್ತುಗಳ ಬದಲಾಗಿ ಪರಿಸರ ಸ್ನೇಹಿ ಪರ್ಯಾಯಗಳನ್ನು ಬಳಸಬೇಕಿದೆ ಹಾಗೂ ಬಳಸುವಂತೆ ಎಲ್ಲರನ್ನೂ ಉತ್ತೇಜಿಸಬೇಕಿದೆ ಎಂದು ಅವರು ತಿಳಿಸಿದರು.
ಶಾಲಾ ಕಾಲೇಜುಗಳಲ್ಲಿನ ಹವಾಮಾನ ಕ್ರಿಯಾಬಳಗದ ಚಟುವಟಿಕೆಯಲ್ಲಿನ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಮಕ್ಕಳ ಹವಾಮಾನ ಬದಲಾವಣೆಯೆಡೆಗಿನ ವಿಚಾರಗಳು, ವಿಕಸನಗೊಳ್ಳುತ್ತದೆ, ಹೆಚ್ಚಿನ ಮಕ್ಕಳು ಚಟುವಟಿಕೆಗಳ ಭಾಗವಾಗುತ್ತಾರೆ. ಈಗಾಗಲೇ 770 ಕ್ಕೂ ಹೆಚ್ಚಿನ ಶಾಲಾ ಕಾಲೇಜುಗಳು ಹವಾಮಾನ ಕ್ರಿಯಾಬಳಗಗಳ ರಚನೆಗಾಗಿ ನೋಂದಣಿ ಮಾಡಿಕೊಂಡಿವೆ. ನೋಂದಣಿಯಾಗದ ಶಾಲಾ ಕಾಲೇಜುಗಳು ನೋಂದಣಿ ಮಾಡಿಕೊಳ್ಳುವಂತೆ ವಿನಂತಿಸಿದರು.

ಹವಾಮಾನ ಬದಲಾವಣೆಗೆ ಕಾರಣವಾಗುವ ಮುಖ್ಯ 4 ಅಂಶಗಳಾದ ನೀರು, ತ್ಯಾಜ್ಯ, ಶಕ್ತಿ ಹಾಗೂ ಹಸಿರೀಕರಣ ಸಂಬಂಧಿತ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಾಗಿರುವ ಹಾಗೂ ಹವಾಮಾನ ಪ್ರಜ್ಞೆಯುಳ್ಳ ಚಟುವಟಿಕೆಗಳತ್ತ ಅವರು ತೋರಿದ ಬದ್ಧತೆಗಾಗಿ 12 ಶಾಲಾ ಕಾಲೇಜುಗಳನ್ನು ಗೌರವಿಸಲಿದ್ದು, ಇಂದು 6 ಶಾಲಾ ಕಾಲೇಜುಗಳಿಗೆ ಪ್ರಮಾಣ ಪತ್ರವನ್ನು ನೀಡಿ, ಮಕ್ಕಳನ್ನು ಪ್ರೋತ್ಸಾಹಿಸಲಾಯಿತು.
ಈ ವರ್ಷದ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಶಾಲಾ ಕಾಲೇಜುಗಳು ತಮ್ಮ ಚಟುವಟಿಕೆಗಳನ್ನು ಯೋಜಿಸಬಹುದಾದ ರೀತಿಯಲ್ಲಿ ಅಂತಿಮಗೊಳಿಸಲಾಗಿದೆ. ಅದನ್ನು ಶೀಘ್ರದಲ್ಲೇ ಹವಾಮಾನ ಕ್ರಿಯಾ ಬಳಗಗಳ ವೆಬಸೈಟ್ ಆದ https://bengaluruclimateactionclubs.in/ ರಲ್ಲಿ ಪ್ರಕಟಿಸುವುದಾಗಿ ಅವರು ಮಾಹಿತಿ ನೀಡಿದರು.
ಮಕ್ಕಳೊಂದಿಗೆ ಸಂವಾದ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳು ತಂಡವಾಗಿ ಹವಾಮಾನ ಬದಲಾವಣೆಗೆ ಕಾರಣವಾಗುವ 4 ಮುಖ್ಯ ಅಂಶಗಳಾದ ನೀರು, ತ್ಯಾಜ್ಯ, ಶಕ್ತಿ ಹಾಗೂ ಹಸಿರೀಕರಣಕ್ಕೆ ಸಂಬಂಧಿಸಿದಂತೆ ಚರ್ಚಿಸಿ, ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಇದನ್ನು ಓದಿದ್ದೀರಾ? ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದ ಕರ್ನಾಟಕ ಸರ್ಕಾರದ ‘ಶಕ್ತಿ ಯೋಜನೆ’
ಮುಂದುವರೆದಂತೆ, ಮಕ್ಕಳು ಸಮೀಕ್ಷಾ ಪ್ರಕ್ರಿಯೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು, ತಾವು ಎದುರಿಸಿದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು ಮತ್ತು ತಮ್ಮ ಕಲಿಕೆಯನ್ನು ಪ್ರತಿಬಿಂಬಿಸಿದರು.


https://shorturl.fm/b19oD