ಅ: 19ರಂದು ನಡೆಯಲಿರುವ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ಕರೆಯಲಾದ ಮತಹಕ್ಕಿನ ಠರಾವು ಸಭೆಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ತಾಲ್ಲೂಕಿನ ಹುಲಿಕಟ್ಟಿ, ಅಂಬಡಗಟ್ಟಿಯ ಸಂಘಗಳಲ್ಲಿ ಕೂಗಾಟ, ಗಲಾಟೆ, ಪೊಲೀಸರ ವಿರುದ್ಧ ಧಿಕ್ಕಾರ ಘೋಷಣೆಗಳು ಮೊಳಗಿದವು. ಕಿತ್ತೂರಿನ ಸಭೆ ಮಾತ್ರ ಶಾಂತಿಯುತವಾಗಿ ಮುಕ್ತಾಯವಾಯಿತು.
ಅಂಬಡಗಟ್ಟಿಯ ಸಂಘದಲ್ಲಿ ಒಟ್ಟು 12 ನಿರ್ದೇಶಕರಲ್ಲಿ 6 ಕಾಂಗ್ರೆಸ್ ಪರ ನಿರ್ದೇಶಕರು ಮಾತ್ರ ಹಾಜರಿದ್ದರು. ಸಭೆಗೆ ಏಳು ಕೋರಂ ಅಗತ್ಯವಿದ್ದರೂ ಮುಖ್ಯ ಕಾರ್ಯನಿರ್ವಾಹಕರ ಮೇಲೆ ಒತ್ತಡ ತಂದು ಸಭೆ ನಡೆಸಿ ಮತಹಕ್ಕಿನ ಠರಾವು ತೆಗೆದುಕೊಂಡರು ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು. ಸ್ಥಳದಲ್ಲೇ ಲಘು ಲಾಠಿ ಪ್ರಹಾರ ನಡೆಯಿತು.
ಹುಲಿಕಟ್ಟಿಯ ಸಂಘದಲ್ಲಿ ಬಿಜೆಪಿ ಪರ ನಿರ್ದೇಶಕರು ಏಳು ಮಂದಿ ಇದ್ದರೂ, ಎಸ್‌ಐ ಪ್ರವೀಣ ಗಂಗೋಳ ಒಬ್ಬ ನಿರ್ದೇಶಕರಿಗೆ ಬೆದರಿಕೆ ಹಾಕಿ ಕಾಂಗ್ರೆಸ್ ಪರವಾಗಿ ವಾಲುವಂತೆ ಒತ್ತಾಯಿಸಿದರೆಂದು ಸಂಘದ ಅಧ್ಯಕ್ಷ ಭರತ ಸಂಪಗಾಂವ ಆರೋಪಿಸಿದರು. ಇದರಿಂದ ಕೋಪಗೊಂಡ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿದ್ದ ಡಿವೈಎಸ್‌ಪಿ ವೀರಯ್ಯ ಹಿರೇಮಠ ಅವರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕಿತ್ತೂರಿನ ಸಂಘದಲ್ಲಿ ಯಾವುದೇ ಗಲಾಟೆಯಿಲ್ಲದೆ, 8-4 ಅಂತರದಲ್ಲಿ ಬಿಜೆಪಿ ಪರ ಅಭ್ಯರ್ಥಿಗೆ ಮತ ಹಾಕುವ ಠರಾವು ಪಾಸಾಯಿತು ಎಂದು ಮೂಲಗಳು ತಿಳಿಸಿವೆ.
ಸಭೆ ಮುಗಿದ ನಂತರ ಹುಲಿಕಟ್ಟಿ ಹಾಗೂ ಅಂಬಡಗಟ್ಟಿಯ ಸಂಘದ ಮುಖ್ಯ ಕಾರ್ಯನಿರ್ವಾಹಕರು ಮತ್ತು ನಿರ್ದೇಶಕರನ್ನು ಕಾಂಗ್ರೆಸ್ ಬೆಂಬಲಿತರು ಎನ್ನಲಾದವರು ವಾಹನದಲ್ಲಿ ಕರೆದುಕೊಂಡು ಹೋದರು. ಮೂರೂ ಕಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.