ಉತ್ತರ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಹಲವಾರು ಗ್ರಾಮಗಳು ಜಲಾವೃತಗೊಂಡಿದ್ದು, ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಗ್ರಾಮಗಳಿಗೆ ವಾಹನ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಜಿಲ್ಲೆಯ ಕುಂದಾಲ್ ಗ್ರಾಮದಲ್ಲಿ ಉಸಿರಾಟದ ತೊಂದರೆಯ ಕಾಯಿಲೆಗೆ ತುತ್ತಾಗಿದ್ದ ಇಬ್ಬರು ವ್ಯಕ್ತಿಗಳನ್ನು ತೆಪ್ಪದಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಕನೇರಿ ಜಲಾಶಯದ ಹಿನ್ನೀರಿನಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ರಸ್ತೆಗಳು ನದಿಗಳಾಗಿ ಮಾರ್ಪಟ್ಟಿವೆ. ಕುಂದಾಲ್ ಗ್ರಾಮದ ಬಳಿ ಸೇತುವೆಯೂ ಮುಳುಗಡೆಯಾಗಿದೆ. ಪರಿಣಾಮ ಗ್ರಾಮಸ್ಥರಿಗೆ ರಸ್ತೆ ಸಂಪರ್ಕವಿಲ್ಲದಂತಾಗಿದೆ.
ಗ್ರಾಮ ರಸ್ತೆ ಸಂಪರ್ಕ ಕಳೆದುಕೊಂಡಿರುವ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ಬಸವರಾಜ ಚಿನ್ನಳ್ಳಿ ಮತ್ತು ಕಂದಾಯ ನಿರೀಕ್ಷಕ ಗಣಪತಿ ಮೇತ್ರಿ, ಆ ಇಬ್ಬರು ರೋಗಿಗಳ ರಕ್ಷಣೆಗಾಗಿ ರಕ್ಷಣಾ ತಂಡವನ್ನು ಕಳಿಸಿದ್ದಾರೆ.
ಬೋಟ್ ಮೂಲಕ ಗ್ರಾಮದಿಂದ ರೋಗಿಗಳನ್ನು ಕರೆತರಲಾಗಿದೆ. ಬಳಿಕ, ಸುರಕ್ಷಿತ ಸ್ಥಳದಲ್ಲಿ ಆಂಬ್ಯುಲೆನ್ಸ್‌ಗೆ ಹತ್ತಿಸಿ, ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕುಂದಾಲ್ ಗ್ರಾಮ ಮಾತ್ರವಲ್ಲದೆ, ಸುತ್ತಮುತ್ತಲ ಕುರವಳಿ, ನಾವರ, ಅಂಬಲಿ, ಕತೇಲಿ ಸೇರಿದಂತೆ ಹಲವಾರು ಗ್ರಾಮಗಳು ರಸ್ತೆ ಸಂಪರ್ಕ ಕಳೆದುಕೊಂಡಿವೆ.