‘ಹಾಸ್ಯ ಚಕ್ರವರ್ತಿ’ ಶತಮಾನೋತ್ಸವ | ಕನ್ನಡಿಗರ ಆಯಸ್ಸು ಹೆಚ್ಚಿಸಿದ ನರಸಿಂಹರಾಜು ಬದುಕಿದ್ದು ಕೇವಲ 56 ವರ್ಷ!

Date:

‘ನಗುವುದು ಒಂದು ಭೋಗ. ನಗಿಸುವುದು ಒಂದು ಯೋಗ. ನಗದೇ ಇರುವುದು ಒಂದು ರೋಗ’ ಎನ್ನುವುದು ಹಾಸ್ಯಗಾರನ ಬದುಕಿನ ಸಾರ್ಥಕತೆಗೆ ಸಂಬಂಧಿಸಿದ ಒಂದು ಉಕ್ತಿ. ಕನ್ನಡದ ಪ್ರಸಿದ್ಧ ಹಾಸ್ಯ ನಟ ನರಸಿಂಹರಾಜು ಅವರ ಜೀವನ ಈ ಉಕ್ತಿಗೆ ಅನ್ವರ್ಥವಾಗಿತ್ತು. ತಮ್ಮ 25 ವರ್ಷಗಳ ಬಣ್ಣದ ಬದುಕಿನಿಂದ ಕನ್ನಡ ಸಿನಿಮಾ ರಂಗದ ಅವಿಭಾಜ್ಯ ಅಂಗವಾಗಿ, ಚಿತ್ರರಂಗದ ಬೆಳವಣಿಗೆಯ ಭಾಗವಾಗಿ, ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದವರು ನರಸಿಂಹರಾಜು. ಒಬ್ಬ ಕಾನ್ಸ್‌ಟೆಬಲ್ ಮಗ, ಉಬ್ಬು ಹಲ್ಲಿನ, ಸಣಕಲು ದೇಹದ ನಟ ಕನ್ನಡ ಚಿತ್ರರಂಗದಲ್ಲಿ ದೊಡ್ಡ ತಾರೆಯಾಗಿ ಬೆಳೆದದ್ದು ಒಂದು ಪವಾಡದಂತಿದೆ.         

ತಿಪಟೂರಿನ ತೆಲುಗು ಮನೆಮಾತಿನ ರಾಜು ಕ್ಷತ್ರಿಯ ಸಮುದಾಯದ ರಾಮರಾಜು ಅವರ ಮಗ ನರಸಿಂಹರಾಜು. ಅವರ ಚಿಕ್ಕಪ್ಪ ಲಕ್ಷ್ಮೀಪತಿ ರಾಜು ನಾಟಕ ಕಂಪನಿಯಲ್ಲಿದ್ದರು. ಅವರ ಒತ್ತಾಯದೊಂದಿಗೆ, ಮಕ್ಕಳು ಶಾಲೆ ಸೇರುವ ವಯಸ್ಸಿಗೆ ನಾಟಕ ರಂಗ ಸೇರಿದವರು ನರಸಿಂಹರಾಜು. ಅಂದಿನಿಂದ ನಾಟಕ ಕಂಪನಿಯೇ ಅವರ ಬದುಕಾಯಿತು. ಹಲವು ನಾಟಕ ಕಂಪನಿಗಳ ಸುತ್ತಾಟದ ನಂತರ ತಮ್ಮ ಹದಿನಾರನೇ ವಯಸ್ಸಿನಲ್ಲಿ ಕರ್ನಾಟಕ ನಾಟಕ ಸಭಾ ಎನ್ನುವ ಸ್ವಂತ ನಾಟಕ ಕಂಪನಿ ಕಟ್ಟಿದರು. ಅದರಿಂದ ನಷ್ಟವಾದಾಗ ಸ್ವಂತ ಕಂಪನಿ ಮುಚ್ಚಿ ಎಡತೊರೆ ನಾಟಕ ಕಂಪನಿ ಸೇರಿಕೊಂಡರು. ಮೊದಮೊದಲು ರಾಮ, ರಾವಣ, ಭರತ, ಲಕ್ಷ್ಮಣರ ಪಾತ್ರಗಳನ್ನು ಮಾಡುತ್ತಿದ್ದ ನರಸಿಂಹರಾಜು ಬರಬರುತ್ತಾ, ಹಾಸ್ಯ ಪಾತ್ರಗಳನ್ನು ಮಾಡತೊಡಗಿದರು. ಉಬ್ಬು ಹಲ್ಲು, ಸಣಕಲು ಶರೀರ ಕಿಚಾಯಿಸುವ ಕಣ್ಣುಗಳು ಹಾಸ್ಯ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದವು.     

ನರಸಿಂಹರಾಜು ಅವರಿಗೆ ಬ್ರೇಕ್ ನೀಡಿದ್ದು, ‘ಬೇಡರ ಕಣ್ಣಪ್ಪ’ ನಾಟಕದ ಕಾಶಿ ಪಾತ್ರ. ಆ ನಾಟಕದ ನೂರಾರು ಪ್ರದರ್ಶನಗಳಲ್ಲಿ ರಾಜು ಅವರು ಕಾಶಿ ಪಾತ್ರ ಮಾಡಿದರು. ಅದರ ಜನಪ್ರಿಯತೆ ಗುಬ್ಬಿ ವೀರಣ್ಣನವರೆಗೆ ಮುಟ್ಟಿ, ಅವರು ನರಸಿಂಹರಾಜು ಅವರನ್ನು ತಮ್ಮ ಕಂಪನಿಗೆ ಆಹ್ವಾನಿಸಿದರು. ಹಾಗೆ ಗುಬ್ಬಿ ನಾಟಕ ಕಂಪನಿ ಸೇರಿದ ಅವರಿಗೆ ಅಲ್ಲಿ ರಾಜ್‌ಕುಮಾರ್, ಟಿ ಎನ್ ಬಾಲಕೃಷ್ಣ, ಜಿ ವಿ ಅಯ್ಯರ್ ಪರಿಚಯವಾದರು. ಈ ನಾಲ್ವರು ಜೊತೆಗೂಡಿ ಕನ್ನಡ ನಾಟಕ ಹಾಗೂ ಸಿನಿಮಾ ರಂಗದಲ್ಲಿ ಮಾಡಿದ ಸಾಧನೆ, ಸಾಹಸಗಳು ಕನ್ನಡ ಸಾಂಸ್ಕೃತಿಕ ಚರಿತ್ರೆಯ ಬಹುಮುಖ್ಯ ಭಾಗವಾದವು.      

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ನಾಟಕವಾಗಿ ಜನಪ್ರಿಯವಾಗಿದ್ದ ಬೇಡರ ಕಣ್ಣಪ್ಪ ಕಥೆಯನ್ನು ಎಚ್‌ಎಲ್‌ಎನ್ ಸಿಂಹ ಅವರು ಸಿನಿಮಾ ಮಾಡಲು ಹೋದಾಗ ಕಾಶಿ ಪಾತ್ರಕ್ಕೆ ಸಹಜವಾಗಿಯೇ ನರಸಿಂಹರಾಜು ಆಯ್ಕೆಯಾದರು. ಚಿತ್ರದ ನಾಯಕ, ಅಂದರೆ ಕಣ್ಣಪ್ಪನ ಪಾತ್ರಕ್ಕೆ, ಆಗ ಸುಬ್ಬಯ್ಯ ನಾಯ್ಡು ಕಂಪನಿಯಲ್ಲಿದ್ದ ರಾಜ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಬಹುತೇಕ ನಾಟಕ ರಂಗದವರೇ ತುಂಬಿದ್ದ, 1954ರಲ್ಲಿ ತೆರೆ ಕಂಡ ‘ಬೇಡರ ಕಣ್ಣಪ್ಪ’ ಚಿತ್ರ ಇತಿಹಾಸ ಸೃಷ್ಟಿಸಿತು. ಆ ಚಿತ್ರದ ಮೂಲಕ ರಾಜ್‌ಕುಮಾರ್ ಮತ್ತು ನರಸಿಂಹರಾಜು ನಾಟಕ ರಂಗದಿಂದ ಸಿನಿಮಾ ರಂಗದತ್ತ ಬಂದರು.         

ತಮ್ಮ ಅಸಾಧಾರಣ ಪ್ರತಿಭೆಯಿಂದ ಕನ್ನಡಿಗರ ಕಣ್ಮಣಿಯಾಗಿ ಬೆಳೆದವರು ರಾಜ್‌ಕುಮಾರ್. ಅವರೊಂದಿಗೆ ನರಸಿಂಹರಾಜು ಕೂಡ ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಲೇ ಹೋದರು. ಜೊತೆ ಜೊತೆಗೆ ನಟಿಸುತ್ತಲೇ ಇಬ್ಬರೂ ಅನ್ಯೋನ್ಯ ಮಿತ್ರರಾದರು. ಅತ್ಯುತ್ತಮ ನಟರೂ ಆದರು. ಸಿನಿಮಾಗಳಲ್ಲಿ ಹೀರೋ ಹೀರೋಯಿನ್ ಜೋಡಿಯಂತೆ ರಾಜ್‌-ರಾಜು ಜೋಡಿಯೂ ಜನಪ್ರಿಯವಾಯಿತು.

ರಾಜ್-ರಾಜು

ರಾಜ್‌ಕುಮಾರ್ ಅವರು ಕಾಲ್‌ಶೀಟ್‌ಗಾಗಿ ತಮ್ಮ ಬಳಿಗೆ ಬಂದವರನ್ನು ನರಸಿಂಹರಾಜು ಅವರ ಬಳಿಗೆ ಕಳಿಸುತ್ತಿದ್ದರು. ನಾಯಕ ಪಾತ್ರಕ್ಕೆ ಸರಿಸಮನಾಗಿ ವಿನೋದ ನಾಯಕ ನಟನಾಗಿ ನರಸಿಂಹರಾಜು ರೂಪುಗೊಂಡರು. 60ರ ದಶಕದಲ್ಲೇ ಅವರು ನಟಿಸುತ್ತಿದ್ದ ಚಿತ್ರಗಳಲ್ಲಿ ನಾಯಕನಿಗಿದ್ದಂತೆ ಅವರಿಗೂ ಹಾಡು ಇರುತ್ತಿತ್ತು ನರಸಿಂಹರಾಜು ಅವರಿಗೆ ಎಂ ಎನ್ ಲಕ್ಷ್ಮಿದೇವಿ, ರಮಾದೇವಿ, ಮೈನಾವತಿ, ಕುಳ್ಳಿ ಜಯ, ಪಾಪಮ್ಮ ಮುಂತಾದವರು ಜೋಡಿಗಳಾಗಿ ಕಾಣಿಸಿಕೊಳ್ಳುತ್ತಿದ್ದರು.

ಬಿ ಆರ್ ಪಂತುಲು ಅವರಿಗೆ ನರಸಿಂಹರಾಜು ಅವರೆಂದರೆ ಬಹಳ ಇಷ್ಟ. ಅವರ ನಿರ್ದೇಶನದ ‘ರತ್ನಗಿರಿ ರಹಸ್ಯ’ ಚಿತ್ರದ ‘ಯಾರು ಯಾರು ನೀ ಯಾರು..’ ಹಾಗೂ ‘ಸ್ಕೂಲ್ ಮಾಸ್ಟರ್’ ಚಿತ್ರದ ‘ಭಾಮೆಯ ನೋಡಲು ತಾ ಬಂದ..’ ಇಂಥ ಅನೇಕ ಹಾಡುಗಳು ಜನರ ನೆಚ್ಚಿನ ಹಾಡುಗಳಾದವು. ‘ಭಾಮೆಯ ನೋಡಲು ತಾ ಬಂದ..’ ಹಾಡಿನಲ್ಲಿ ನರಸಿಂಹರಾಜು ಎಕ್ಸ್‌ಪ್ರೆಷನ್ ಅದ್ಭುತ. ವಿಶೇಷ ಅಂದರೆ, ಆ ಹಾಡಿನ ಯಥಾವತ್ ದೃಶ್ಯ ಆ ಸಿನಿಮಾ ನಿರ್ಮಾಣವಾಗುವ ಎಷ್ಟೋ ವರ್ಷಗಳ ಮುಂಚೆಯೇ ತಮ್ಮ ನಿಜ ಬದುಕಿನಲ್ಲಿ ಘಟಿಸಿತ್ತು ಎಂದು ನರಸಿಂಹರಾಜು ಅವರ ಪತ್ನಿ ಶಾರದಮ್ಮ ಒಂದೆಡೆ ಹೇಳಿಕೊಂಡಿದ್ದಾರೆ. ಹೀಗೆ ತಮ್ಮ ನಟನೆ, ಹಾಡು, ಕುಣಿತ ಇತ್ಯಾದಿಗಳಿಂದ ಹಾಸ್ಯಕ್ಕೆ ಸ್ಟಾರ್ ಸ್ಟೇಟಸ್ ತಂದುಕೊಟ್ಟ ಕನ್ನಡದ ಮೊದಲ ನಟ ನರಸಿಂಹರಾಜು.

ಸ್ಕೂಲ್ ಮಾಸ್ಟರ್, ಕಿತ್ತೂರು ಚನ್ನಮ್ಮ, ಲಗ್ನಪತ್ರಿಕೆ, ಸಂಧ್ಯಾರಾಗ, ಬೀದಿ ಬಸವಣ್ಣ, ಚಿನ್ನಾರಿ ಪುಟ್ಟಣ್ಣ, ದೇವರು ಕೊಟ್ಟ ತಂಗಿ, ನ್ಯಾಯವೇ ದೇವರು, ಶ್ರೀಕೃಷ್ಣದೇವರಾಯ, ಜೇಡರ ಬಲೆ, ಗೋವಾದಲ್ಲಿ ಸಿಐಡಿ 999, ಸತ್ಯ ಹರಿಶ್ಚಂದ್ರ.. ಒಂದೊಂದು ಚಿತ್ರದ್ದು ಒಂದೊಂದು ವಿಭಿನ್ನ ಪಾತ್ರ, ವಿಶಿಷ್ಟ ನಟನೆ. ನರಸಿಂಹರಾಜು ಅವರನ್ನು ತೆರೆಯ ಮೇಲೆ ನೋಡಲು ಪ್ರೇಕ್ಷಕರು ಕಾತರಿಸುತ್ತಿದ್ದರು. ಬಿಡುಗಡೆಯಾಗುವ ಬಹುತೇಕ ಎಲ್ಲ ಚಿತ್ರಗಳಲ್ಲೂ ನರಸಿಂಹರಾಜು ಇರಲೇಬೇಕಿತ್ತು. ಉದಯ್‌ಕುಮಾರ್, ಕಲ್ಯಾಣ್‌ಕುಮಾರ್, ರಾಜೇಶ್, ಗಂಗಾಧರ್, ಉಮೇಶ್ ಮುಂತಾದವರ ಚಿತ್ರಗಳಲ್ಲಿಯೂ ನರಸಿಂಹರಾಜು ನಟಿಸಿದ್ದಾರೆ. ನಂತರದ ತಲೆಮಾರಿನ ವಿಷ್ಣುವರ್ಧನ್, ಅಂಬರಿಶ್, ಶ್ರೀನಾಥ್ ಅವರ ಜೊತೆಗೂ ನಟಿಸಿದರು. ಒಂದು ಕಾಲದಲ್ಲಿ ದಿನಕ್ಕೆ ನಾಲ್ಕು ನಗರಗಳನ್ನು ಸುತ್ತುತ್ತಾ, ನಾಲ್ಕು ಶಿಫ್ಟ್‌ಗಳಲ್ಲಿ ಕೆಲಸ ಮಾಡಿದವರು ಅವರು. ರಾಜ್‌ಕುಮಾರ್ ಅವರಿಗಿಂತ ಬೇಗ ನೂರು ಚಿತ್ರಗಳನ್ನು ಪೂರೈಸಿದವರು ನರಸಿಂಹರಾಜು.

ರಾಜ್‌ಕುಮಾರ್, ಬಾಲಕೃಷ್ಣ, ನರಸಿಂಹರಾಜು, ಜಿ ವಿ ಅಯ್ಯರ್ ಇವರದ್ದು ಆಪ್ತ ಕೂಟ. ಸಿನಿಮಾಗಳಲ್ಲಿ ಒಟ್ಟಿಗೆ ನಟಿಸುತ್ತ, ಮದ್ರಾಸ್‌ನಲ್ಲಿ ಒಟ್ಟಿಗೆ ಜೀವಿಸುತ್ತ, ಸುಖ ದುಃಖ ಹಂಚಿಕೊಂಡು ಬದುಕಿದವರು. ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದಾಗ ನಾಲ್ವರೂ ಸೇರಿಕೊಂಡು ಕನ್ನಡ ಚಲನಚಿತ್ರ ಕಲಾವಿದರ ಸಂಘ ಸ್ಥಾಪಿಸಿ, ಅದರಡಿಯಲ್ಲಿ ರಾಜ್ಯದ ನಾನಾ ಭಾಗ ಸುತ್ತಿ ನಾಟಕಗಳನ್ನು ಮಾಡಿದರು. ತಲಾ ಐದೈದು ಸಾವಿರ ರೂಪಾಯಿ ಹಾಕಿ ʼರಣಧೀರ ಕಂಠೀರವʼ ಸಿನಿಮಾ ನಿರ್ಮಾಣ ಮಾಡಿದರು. ಆದರೆ, ಆಗ ಎಂಥ ಪರಿಸ್ಥಿತಿ ಇತ್ತೆಂದರೆ, ಕನ್ನಡದ ಕಲಾವಿದರು ಕಷ್ಟಪಟ್ಟು ತಯಾರಿಸಿದ ಆ ಚಿತ್ರದ ಬಿಡುಗಡೆಗೆ ಬೆಂಗಳೂರಿನಲ್ಲಿ ಒಂದು ಥಿಯೇಟರ್ ಸಿಗಲಿಲ್ಲ. ಕೊನೆಗೆ ಹಿಮಾಲಯದಂಥ ಕಳಪೆ ಥಿಯೇಟರ್‌ನಲ್ಲಿ ಬಿಡುಗಡೆಯಾಗಬೇಕಾಗಿ ಬಂತು. ಆದರೂ ಸಿನಿಮಾ ಜನರ ಮನಸ್ಸನ್ನು ಗೆದ್ದಿತು. 

ರಾಜು ಬಳಗನರಸಿಂಹರಾಜು ಅವರು ತಮ್ಮ ದೈಹಿಕ ಚಹರೆಯನ್ನು ಹಾಸ್ಯಕ್ಕೆ ಒಗ್ಗಿಸಿಕೊಂಡ ಪರಿ ಅದ್ಭುತವಾಗಿತ್ತು. ಅವರ ಹಾಸ್ಯ ವಿಡಂಬನೆಯ ಶೈಲಿಯದ್ದು. ಹಾಸ್ಯದ ಹಿಂದೆ ವಿಷಾದ ಭಾವ ಇರುತ್ತಿತ್ತು. ಸಮಾಜದ ಬಗ್ಗೆ ವಕ್ರನೋಟ ಇರುತ್ತಿತ್ತು. ಈ ದೃಷ್ಟಿಯಿಂದ ಅವರ ನೂರನೇ ಚಿತ್ರ ‘ನಕ್ಕರದೇ ಸ್ವರ್ಗ’ ಹಾಗೂ ಅವರೇ ನಿರ್ಮಸಿ, ನಟಿಸಿದ ʼಪ್ರೊ.ಹುಚ್ಚೂರಾಯʼ ಚಿತ್ರಗಳು ಅವರ ವೃತ್ತಿಜೀವನದಲ್ಲಿ ಗಮನಾರ್ಹವಾದವು. ಕಮೆಡಿಯನ್ ಆಗಿ, ಹೀರೋ ಆಗಿ, ನಿರ್ಮಾಪಕನಾಗಿ ಚಿತ್ರರಂಗದಲ್ಲಿ ನರಸಿಂಹರಾಜು ಅವರದ್ದು ಬಹುರೂಪ. 1954ರಿಂದ 1979ರವರೆಗಿನ 25 ವರ್ಷಗಳ ಚಿತ್ರಜೀವನದಲ್ಲಿ ಅವರು 256 ಚಿತ್ರಗಳಲ್ಲಿ ನಟಿಸಿದರು.    

ನರಸಿಂಹರಾಜು ಒಬ್ಬ ಅಪ್ಪಟ ಕಲಾವಿದನಾಗಿದ್ದಂತೆಯೇ ಅಪ್ಪಟ ಸಂಸಾರಿಯೂ ಆಗಿದ್ದರು. ಹೆಂಡತಿ, ಮಕ್ಕಳನ್ನು ಅಪಾರ ಇಷ್ಟಪಡುತ್ತಿದ್ದ ಅವರು ಬಿಡುವಿದ್ದಾಗಲೆಲ್ಲ ಮಕ್ಕಳನ್ನು ಹೊರಗಡೆ ಕರೆದೊಯ್ಯುತ್ತಿದ್ದರು. ಅವರ ಜೊತೆ ಆಟ ಆಡುತ್ತಿದ್ದರು. ಒಳ್ಳೆ ಊಟ ತಿಂಡಿಗಾಗಿ ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ದೂರದ ಪ್ರದೇಶಗಳಿಗೆ ಹೋಗುತ್ತಿದ್ದ ಜೀವನಪ್ರೇಮಿಯಾಗಿದ್ದರು. ತಮ್ಮ ಹಿರಿಯ ಮಗ ಶ್ರೀಕಾಂತ ಅಂದರೆ ನರಸಿಂಹರಾಜು ಅವರಿಗೆ ತುಂಬಾ ಇಷ್ಟ. ಒಮ್ಮೆ ಸಾಗರದಲ್ಲಿ ‘ಬೇಡರ ಕಣ್ಣಪ್ಪ’ ನಾಟಕ ಮಾಡುವಾಗ ಆಗ ಆರೇಳು ವರ್ಷದ ಶ್ರೀಕಾಂತ ಆಡಲು ಹೋಗಿ ಬೆಂಕಿ ಕೆಂಡದ ರಾಶಿಯಲ್ಲಿ ಕೈ ಇಟ್ಟು, ಆತನ ಎರಡೂ ಕೈಗಳು ಅರ್ಧ ಸುಟ್ಟು ಹೋಗಿದ್ದವು. ತಮ್ಮ ಪ್ರೀತಿಯ ಮಗನಿಗೊದಗಿದ ಪರಿಸ್ಥಿತಿ ಕಂಡು ನರಸಿಂಹರಾಜು ಎದೆ ಬಡಿದುಕೊಂಡು ಅತ್ತಿದ್ದರು. ಮಗನ ಕೈ ಸರಿ ಮಾಡಿಸಲು ಪ್ಲಾಸ್ಟಿಕ್ ಸರ್ಜರಿ ಇತ್ಯಾದಿಗಳಿಗಾಗಿ ಅಪಾರ ಮೊತ್ತದ ಹಣ ಖರ್ಚು ಮಾಡಿದ್ದರು. ಆದರೂ ಸರಿಹೋಗದೇ ಇದ್ದಾಗ ಕೊನೆಯಿಲ್ಲದ ವೇದನೆ ಅನುಭವಿಸಿದರು. ಕೊನೆಗೂ ಶ್ರೀಕಾಂತ ಉಳಿಯಲಿಲ್ಲ. 1971ರಲ್ಲಿ ಆತ ಅಪಘಾತದಲ್ಲಿ ತೀರಿಹೋದ. ಆಗ ಆತನ ವಯಸ್ಸು ಹದಿನಾರು.

ಈ ಸುದ್ದಿ ಓದಿದ್ದೀರಾ: ನೂರರ ನೆನಪು | ವಿಷಾದ ಗೀತೆಗಳ ವಿಶಿಷ್ಟ ಗಾಯಕ ಮುಖೇಶ್ 

ನರಸಿಂಹರಾಜು ಮಗನ ಸಾವಿನ ದುಃಖದಿಂದ ಹೊರಗೆ ಬರಲೇ ಇಲ್ಲ. ಮಗನ ವೇದನೆ, ದುರಂತ ಅಂತ್ಯ ಅವರನ್ನು ಹಿಂಡಿ ಹಿಪ್ಪೆ ಮಾಡಿತು. ಜೊತೆಗೆ ತಪ್ಪು ತಿಳಿವಳಿಕೆಯಿಂದ ಕೊನೆಯ ದಿನಗಳಲ್ಲಿ ರಾಜ್ ಅವರಿಂದ ದೂರವಾದದ್ದೂ ಅವರನ್ನು ತೀವ್ರವಾಗಿ ಘಾಸಿಗೊಳಿಸಿತು. ಜನರನ್ನು ನಗಿಸುತ್ತಿದ್ದ ಕಲಾವಿದನ ಬದುಕು ನೋವಿನಿಂದ ತುಂಬಿಹೋಗಿತ್ತು. 

ಕನ್ನಡ ಚಿತ್ರರಂಗದಲ್ಲಿ ಹಲವು ಮೊದಲುಗಳ ಸರದಾರ ನರಸಿಂಹರಾಜು. ಮದರಾಸಿನಲ್ಲಿ ಮನೆ ಮಾಡಿದ ಮೊದಲ ಕನ್ನಡ ನಟ ನರಸಿಂಹರಾಜು. ಕನ್ನಡ ನಟರ ಪೈಕಿ ಮೊದಲು ಕಾರು ಖರೀದಿಸಿದ್ದು ನರಸಿಂಹರಾಜು. ಕನ್ನಡದ ಕಲಾವಿದರ ಪೈಕಿ ಮೊದಲು ತೆರಿಗೆ ಕಟ್ಟಿದ ನಟ ಕೂಡ ಅವರೇ. ಆದರೆ, ಅವರು ಸಾವಿನಲ್ಲೂ ತಮ್ಮ ಜೊತೆಯಲ್ಲಿದ್ದವರಿಗಿಂತ ಮೊದಲಿನವರಾಗಿದ್ದು ಅತ್ಯಂತ ನೋವಿನ ವಿಚಾರ. 1979, ಜುಲೈ ತಿಂಗಳ 20ರಂದು ನರಸಿಂಹರಾಜು ತೀರಿಹೋದಾಗ ಅವರ ವಯಸ್ಸು ಕೇವಲ 56 ವರ್ಷ. ತಮ್ಮ ವಿನೋದ ನಟನೆಯಿಂದ ಕನ್ನಡಿಗರನ್ನು ಅಪಾರವಾಗಿ ನಗಿಸಿ, ಜನರ ಆಯಸ್ಸನ್ನು ಹೆಚ್ಚಿಸಿದ ‘ಹಾಸ್ಯ ಚಕ್ರವರ್ತಿ’ ಬದುಕಿನ ಅನಿರೀಕ್ಷಿತಗಳಿಗೆ ಕತ್ತು ಕೊಟ್ಟು ಅರ್ಧ ವಯಸ್ಸಿಗೇ ಅಸ್ತಂಗತರಾದರು. ಅವರ ಜೀವದ ಗೆಳೆಯರಾಗಿದ್ದ ರಾಜ್‌ಕುಮಾರ್ ಕೂಡ ತಾವು ಹುಟ್ಟಿದ ತಿಂಗಳಲ್ಲಿಯೇ ತೀರಿಕೊಂಡಿದ್ದು ಕಾಕತಾಳೀಯ.

ಈ ಸುದ್ದಿ ಓದಿದ್ದೀರಾ: ನಾಸಿರುದ್ದೀನ್ ಶಾ: ಅಭಿಮಾನಿಗಳ ಎದೆ ತುಂಬುವ ಬೆಳಕು

ನರಸಿಂಹರಾಜು ತಮ್ಮ 25 ವರ್ಷಗಳ ಚಿತ್ರಜೀವನದಲ್ಲಿ ಸುಮಾರು 256 ಚಿತ್ರಗಳಲ್ಲಿ ನಟಿಸಿದರೂ ಅವರಿಗೆ ರಾಜ್ಯದಿಂದಾಗಲಿ, ಕೇಂದ್ರದಿಂದಾಗಲಿ, ಒಂದೂ ಪ್ರಶಸ್ತಿ ಸಿಕ್ಕಿರಲಿಲ್ಲ. ಜನ ‘ಹಾಸ್ಯ ಚಕ್ರವರ್ತಿ’ ಎಂದು ಅಭಿಮಾನದಿಂದ ಕೊಂಡಾಡುತ್ತಿದ್ದ ನಟನ ಬಗ್ಗೆ ಸರ್ಕಾರಗಳು ನಿರ್ಲಕ್ಷ್ಯ ತಾಳಿದ್ದವು. ಅವರ ಸಾವಿನ ನಂತರವೂ ಕೂಡ ನರಸಿಂಹರಾಜು ವಿಚಾರದಲ್ಲಿ ಸರ್ಕಾರ ಅದೇ ಧೋರಣೆ ಮುಂದುವರೆಸುತ್ತಿದೆ.

ನರಸಿಂಹರಾಜು ಇದ್ದಿದ್ದರೆ ಇಂದಿಗೆ (ಜುಲೈ 24, 2003) ಅವರಿಗೆ ನೂರು ವರ್ಷ ಆಗುತ್ತಿತ್ತು. ಇದು ಅವರ ಶತಮಾನೋತ್ಸವದ ವರ್ಷ. ಇದು ಕನ್ನಡಿಗರು ಸಂಭ್ರಮಿಸುವ ವರ್ಷವಾಗಬೇಕಿತ್ತು. ಆದರೆ, ಸರ್ಕಾರಕ್ಕೆ, ಆಡಳಿತಶಾಹಿಗೆ ಕಲೆಯ, ಕಲಾವಿದನ ಮಹತ್ವ ಗೊತ್ತಾಗುವುದು ಸಾಧ್ಯವಿಲ್ಲ. ನರಸಿಂಹರಾಜು ಮನೆಯವರು, ಅವರ ಮೊಮ್ಮಕ್ಕಳಾದ ನಿರ್ದೇಶಕ ಎಸ್‌.ಡಿ.ಅರವಿಂದ್, ನಟ ಅವಿನಾಶ್ ಮುಂತಾದವರು ಶತಮಾನೋತ್ಸವದ ಪ್ರಯುಕ್ತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಆದರೆ, ಸರ್ಕಾರಕ್ಕಾಗಲಿ, ಅದರ ಅಂಗವಾದ ಚಲನಚಿತ್ರ ಅಕಾಡೆಮಿಗಾಗಲಿ ನರಸಿಂಹರಾಜು ಅವರ ನೆನಪೇ ಇದ್ದಂತಿಲ್ಲ. ಇದು ನಿಜಕ್ಕೂ ವಿಪರ್ಯಾಸ.  

+ posts

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಬೆಳ್ಳಿ ಪರದೆಯಲ್ಲಿ ಎಲ್ಲರನ್ನೂ ನಗಿಸುತ್ತಾ ಅಂತರಂಗದಲ್ಲಿ ನೋವನ್ನು ಅನಭವಿಸುತ್ತಾ ಇಂದಿಗೂ ಕಲಾರಸಿಕರ ಮನದಲ್ಲಿ ಸ್ಥಿರವಾಗಿರುವ ಆ ಶಾಂತಮೂರ್ತಿ(ನರಸಿಂಹರಾಜು ) ಮತ್ತೊಮ್ಮೆ ಹುಟ್ಟಿ ಬರಲಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್ – ಇರಾನ್ ಯುದ್ಧ ಛಾಯೆ ಬಾಪುವಿನ ನಾಡಿನಿಂದ ಕಾಣುವುದು ಹೀಗೆ…

ಹಿಟ್ಲರನ ಜರ್ಮನಿಯಲ್ಲಿ ಯಹೂದಿಗಳ ಮಾರಣಹೋಮವನ್ನು ಸಮರ್ಥಿಸಿಕೊಂಡ ಜನ, ಬಾಪುವಿನ ಹತ್ಯೆಯನ್ನು ಸಮರ್ಥಿಸಿಕೊಳ್ಳುವ...

ಮಿಥುನ್ ಚಕ್ರವರ್ತಿಗೆ ಫಾಲ್ಕೆ | ಕ್ರಾಂತಿಕಾರಿ ದಿನಗಳಿಂದ ಬಾಲಿವುಡ್ ಸ್ಟಾರ್ ಪಟ್ಟದವರೆಗೆ…

ವ್ಯವಸ್ಥೆ ವಿರುದ್ಧ ಬಂಡೆದ್ದು ನಕ್ಸಲ್‌ ಚಳವಳಿಗಳಿಂದ ಗುರುತಿಸಿಕೊಂಡು ಭೂಗತನಾಗಿದ್ದ ಸಾಮಾನ್ಯ ವ್ಯಕ್ತಿಯೊಬ್ಬ...

‘ಗಾಂಧೀಜಿಯ ಹಂತಕ’ | ಗೋಡ್ಸೆ ಎಂಬ ಸರಳ ಮನಸ್ಸಿನ ಹಂತಕ

'ಗಾಂಧೀಜಿಯ ಹಂತಕ' ಪುಸ್ತಕವು ವರ್ತಮಾನದಲ್ಲಿ ಭಾರತದ ಸಮಾಜ ಅನುಭವಿಸುತ್ತಿರುವ ಹಲವಾರು ಆತಂಕಕಾರಿ...