ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರೂರು ಗುಡ್ಡ ಕುಸಿತ ಪ್ರಕರಣ, ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಆ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಪೈಕಿ ಮೂವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ. ಇಂತಹ ಸಂದರ್ಭದಲ್ಲಿಯೇ, ಜಿಲ್ಲೆಯ ಕಾರವಾರ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಡಿಭಾಗ್ ಸೇತುವೆ ಕುಸಿದು ಬಿದ್ದಿದೆ. ಕಾಳಿ ನದಿಯ ಮೇಲೆ ಕಟ್ಟಲಾಗಿದ್ದ ಕೋಡಿಭಾಗ್ ಸೇತುವೆ ಕುಸಿದು ಬಿದ್ದಿದ್ದು, ತಮಿಳುನಾಡು ಮೂಲದ ಲಾರಿ ನದಿಗೆ ಉರುಳಿದೆ. ಲಾರಿ ಚಾಲಕನನ್ನು ಸ್ಥಳೀಯರು ಮತ್ತು ಪೊಲೀಸರು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕರಾವಳಿ-ಮಲೆನಾಡು ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಭಾರೀ ಮಳೆಯಾಗುತ್ತಿದೆ. ಕಾಳಿ ನದಿ ತುಂಬಿ ಹರಿಯುತ್ತಿದ್ದು, ನದಿ ತಟದಲ್ಲಿನ ಗ್ರಾಮಗಳ ಜನಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ, ಕಾರವಾರ ಬಳಿ ಸೇತುವೆ ಕುಸಿದು ಬಿದ್ದಿದೆ.
ಘಟನಾ ಸ್ಥಳಕ್ಕೆ ಉತ್ತರ ಕನ್ನಡ ಎಸ್‌ಪಿ ನಾರಾಯಣ ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದಾರೆ. “ಘಟನಾ ಸ್ಥಳದಲ್ಲಿ ಕರವಾಳಿ ಕಾವಲು ಪಡೆ, ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಲಾರಿ ಚಾಲಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.
“ಮಧ್ಯರಾತ್ರಿ ಸೇತುವೆ ಕುಸಿದು ಬಿದ್ದಿದೆ. ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ಕಾರ್ಯ ಪಡೆಗಳು ಸ್ಥಳಕ್ಕೆ ಭೇಟಿ ನೀಡಿ, ಕಾರ್ಯಾಚರಣೆ ಆರಂಭಿಸಿವೆ. ನದಿಗೆ ಲಾರಿಯಲ್ಲದೆ ಬೇರೆ ಯಾವುದಾದರೂ ವಾಹನಗಳು ಬಿದ್ದಿವೆಯೇ ಎಂಬ ಬಗ್ಗೆ ಶೋಧ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ.
ಕುಸಿದು ಬಿದ್ದಿರುವ ಸೇತುವೆಯನ್ನು 41 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಇತ್ತೀಚೆಗೆ ಹೆದ್ದಾರಿಗಾಗಿ ಅದರ ಪಕ್ಕದಲ್ಲಿಯೇ ಮತ್ತೊಂದು ಸೇತುವೆಯನ್ನೂ ನಿರ್ಮಾಣ ಮಾಡಲಾಗಿತ್ತು. ಆದರೆ, ಒಂದು ಬದಿಯ ಸಂಚಾರಕ್ಕೆ ಹೊಸ ಸೇತುವೆಯನ್ನು, ಮತ್ತೊಂದು ಬದಿಯ ಸಂಚಾರಕ್ಕೆ ಹಳೆಯ ಸೇತುವೆಯನ್ನೂ ಬಳಸಲಾಗುತ್ತಿತ್ತು. ಇದೀಗ, ಸೇತುವೆ ಕುಸಿದು ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್ಬಿ ಕಂಪನಿ ವಿರುದ್ಧ ಕಾರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.