ಉತ್ತರ ಕನ್ನಡ: ಸ್ಥಳೀಯ ಯುವಕರಲ್ಲಿ ತಾಂತ್ರಿಕ ಕೌಶಲ್ಯವನ್ನು ಹೆಚ್ಚಿಸುವುದರ ಜತೆಗೆ ಉದ್ಯೋಗಾವಕಾಶಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕಾರವಾರ ನೌಕಾ ಡಾಕ್ಯಾರ್ಡ್ ಹಾಗೂ ಜಿಲ್ಲೆಯ ನಾಲ್ಕು ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ನಡುವೆ ಮಹತ್ವದ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಗುರುವಾರ ಸಹಿ ಹಾಕಲಾಯಿತು.
ನೌಕಾ ಡಾಕ್ಯಾರ್ಡ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರವಾರದ ಶ್ರೀ ಸೋಮನಾಥ ಐಟಿಐ, ಬಿಣಗಾ, ಸರ್ಕಾರಿ ಐಟಿಐ ಬಾಡ್, ಮಲ್ಲಿಕಾರ್ಜುನ ಐಟಿಐ, ಸಿದ್ದರ ಹಾಗೂ ಸರ್ಕಾರಿ ಐಟಿಐ, ಅಂಕೋಲಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ನೌಕಾ ಡಾಕ್ಯಾರ್ಡ್ನ ಅಡ್ಮಿರಲ್ ಸೂಪರಿಂಟೆಂಡೆಂಟ್ ರಿಯರ್ ಅಡ್ಮಿರಲ್ ರವ್ನೀಶ್ ಸೇಠ್, ವಿ.ಎಸ್.ಎಂ. ಹಾಗೂ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೇಶ್ ಸಸಿ ಉಪಸ್ಥಿತರಿದ್ದರು.
ಕರ್ನಾಟಕ ನೌಕಾ ಪ್ರದೇಶದ (ಕೆಎನ್ಎ) ನಾಗರಿಕ–ಸೇನಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದ ಭಾಗವಾಗಿ ಈ ಉಪಕ್ರಮ ಕೈಗೊಳ್ಳಲಾಗಿದೆ. ಎಂಒಯು ಅನ್ವಯ ಸ್ಥಳೀಯ ಐಟಿಐ ವಿದ್ಯಾರ್ಥಿಗಳಿಗೆ ನೌಕಾ ಡಾಕ್ಯಾರ್ಡ್ನ ಅತ್ಯಾಧುನಿಕ ನಿರ್ವಹಣಾ ವ್ಯವಸ್ಥೆಗಳು, ಸಹಾಯಕ ವ್ಯವಸ್ಥೆಗಳು, ಆಧುನಿಕ ತಂತ್ರಜ್ಞಾನಗಳು ಹಾಗೂ ಕೈಗಾರಿಕಾ ಕಾರ್ಯವಿಧಾನಗಳ ಕುರಿತು ನೇರ ಪರಿಚಯ ದೊರೆಯಲಿದೆ.
ಈ ಸುದ್ದಿ ಓದಿದ್ದೀರಾ? ಹಳಿಯಾಳ | ಅರ್ಹ ಫಲಾನುಭವಿಗಳಿಗೆ ಗೃಹಜ್ಯೋತಿ ಸೌಲಭ್ಯ ತಪ್ಪದಂತೆ ಕ್ರಮವಹಿಸಿ: ಸತೀಶ್ ನಾಯ್ಕ
ಇದರ ಜತೆಗೆ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಪ್ರಾಯೋಗಿಕ ತರಬೇತಿ ಹಾಗೂ ಕಾರ್ಯಸ್ಥಳದಲ್ಲಿಯೇ ಕಲಿಯುವ ಅವಕಾಶಗಳನ್ನು ಕಲ್ಪಿಸುವ ಮೂಲಕ ಕೈಗಾರಿಕಾ ಕ್ಷೇತ್ರದ ವಾಸ್ತವಿಕ ಕಾರ್ಯವಿಧಾನಗಳ ಬಗ್ಗೆ ಅನುಭವ ಪಡೆಯಲು ನೆರವಾಗಲಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ರಿಯರ್ ಅಡ್ಮಿರಲ್ ರವ್ನೀಶ್ ಸೇಠ್, ಇಂದಿನ ಕೈಗಾರಿಕಾ ಕ್ಷೇತ್ರದ ಅಗತ್ಯಗಳಿಗೆ ತಕ್ಕಂತೆ ಕೌಶಲ್ಯಯುತ ಮಾನವ ಸಂಪನ್ಮೂಲವನ್ನು ರೂಪಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಎಂಒಯು ಮೂಲಕ ಐಟಿಐ ವಿದ್ಯಾರ್ಥಿಗಳಿಗೆ ದೊರೆಯಲಿರುವ ಉನ್ನತ ಮಟ್ಟದ ತರಬೇತಿ ಹಾಗೂ ಕಲಿಕಾ ಅವಕಾಶಗಳನ್ನು ಸಂಸ್ಥೆಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ತರಗತಿಯಲ್ಲಿ ಪಡೆಯುವ ಸೈದ್ಧಾಂತಿಕ ಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ದೊರೆಯುವ ಪ್ರಾಯೋಗಿಕ ಅನುಭವದ ನಡುವಿನ ಅಂತರವನ್ನು ಇಂತಹ ಸಹಯೋಗಗಳು ಕಡಿಮೆ ಮಾಡಲಿವೆ.
ಸ್ಥಳೀಯ ಯುವಕರಿಗೆ ನೌಕಾ ಡಾಕ್ಯಾರ್ಡ್ನಂತಹ ಸ್ಥಳದಲ್ಲಿ ಕಲಿಕೆಯ ಅವಕಾಶ ದೊರೆಯುತ್ತಿರುವುದು ಕೌಶಲ್ಯಾಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಈ ಸಹಯೋಗದ ಮೂಲಕ ಯುವಕರ ಕೌಶಲ್ಯಾಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಜಿಲ್ಲೆಯ ತಾಂತ್ರಿಕ ಮಾನವ ಸಂಪನ್ಮೂಲದ ಗುಣಮಟ್ಟ ಸುಧಾರಿಸಲು ನೆರವಾಗಲಿದೆ. ಜತೆಗೆ ಕೇಂದ್ರ ಸರ್ಕಾರದ ‘ಸ್ಕಿಲ್ ಇಂಡಿಯಾ’ ಅಭಿಯಾನದ ಆಶಯಗಳಿಗೆ ಹಾಗೂ ನಾಗರಿಕ–ಸೇನಾ ಸಹಕಾರದ ಉದ್ದೇಶಗಳಿಗೆ ಈ ಉಪಕ್ರಮ ಮತ್ತಷ್ಟು ಬಲ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





