ಕರಾವಳಿಯಲ್ಲಿ ಮೀನಿನ ಕಲಬೆರಕೆಯನ್ನು ತಡೆಯಲು ಹಾಗೂ ಆಹಾರ ಸುರಕ್ಷತೆಯ ಬಗ್ಗೆ ಆರೋಗ್ಯ ಇಲಾಖೆ ಹೆಚ್ಚಿನ ಕ್ರಮಕ್ಕೆ ಮುಂದಾಗಬೇಕು ಎಂದು ಆಮ್ ಆದ್ಮಿ ಪಾರ್ಟಿ (ಆಪ್) ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಸರಕಾರವನ್ನು ಆಗ್ರಹಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೈರ್ಮಲ್ಯವಿಲ್ಲದ ಉಪಹಾರ ಗೃಹಗಳು ಹಾಗೂ ಆಹಾರ ಕಲಬೆರಕೆಯ ವಿರುದ್ಧ ಆರೋಗ್ಯ ಇಲಾಖೆಯು ಇತ್ತೀಚೆಗೆ ನಡೆಸಿದ ಸರಣಿ ದಾಳಿ ಹಾಗೂ ತಪಾಸಣೆಗಳನ್ನು ಆಮ್ ಆದಿ ಪಾರ್ಟಿ (ಆಪ್)ದ.ಕ. ಘಟಕ ಸ್ವಾಗತಿಸಿದೆ ಎಂದರು.
ಮೀನನ್ನು ತಾಜಾವಾಗಿ ಕಾಣುವಂತೆ ಮಾಡಲು ಫಾರ್ಮಾಲಿನ್ (ಫಾರ್ಮಾಲ್ಡಿಹೈಡ್) ಮತ್ತು ಅಮೋನಿಯಾ ರಾಸಾಯನಿಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂದು ಇತ್ತೀಚಿನ ವರದಿಗಳು ತಿಳಿಸುತ್ತವೆ. ವೈಜ್ಞಾನಿಕ ತಜ್ಞರ ಪ್ರಕಾರ, ಈ ರಾಸಾಯನಿಕಗಳ ದೀರ್ಘಕಾಲದ ಸೇವನೆಯು ಹೊಟ್ಟೆ ಮತ್ತು ಗಂಟಲಿಗೆ ತೀವ್ರ ಹಾನಿಯನ್ನುಂಟುಮಾಡುತ್ತದೆ ಹಾಗೂ ಕ್ಯಾನ್ಸರ್ ಬರುವ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂದು ಮಾಹಿತಿ ನೀಡಿದರು.
ದುರದೃಷ್ಟವಶಾತ್, ರಾಜ್ಯ ಸರಕಾರವಾಗಲಿ ಅಥವಾ ಆರೋಗ್ಯ ಇಲಾಖೆಯಾಗಲಿ ಈ ಗಂಭೀರ ಆರೋಗ್ಯ ಸಮಸ್ಯೆಯ ಬಗ್ಗೆ ಸೂಕ್ತ ಗಮನ ಹರಿಸುತ್ತಿಲ್ಲ.ಇದನ್ನು ತಡೆಗಟ್ಟಲು, ಫಿಶರೀಸ್ ಟೆಕ್ನಾಲಜಿಯ ಕೇಂದ್ರ ಸಂಸ್ಥೆ ಕ್ಷಿಪ್ರ ತಪಾಸಣಾ ಕಿಟ್ನ್ನು ಅಭಿವೃದ್ಧಿಪಡಿಸಿದೆ. 25 ಸ್ಟ್ರೀಪ್ ಪರೀಕ್ಷೆಗಳನ್ನು ಒಳಗೊಂಡಿರುವ ಈ ಕಿಟ್, 2 ರಿಂದ 3 ನಿಮಿಷಗಳಲ್ಲಿ ರಾಸಾಯನಿಕ ಮಾಲಿನ್ಯವನ್ನು ಪತ್ತೆಹಚ್ಚಬಲ್ಲದು. ಫಾರ್ಮಾಲಿನ್ ಪ್ರತಿ ಕೆಜಿಗೆ 20-100 ಮಿ.ಗ್ರಾಂ.ಗಿಂತ ಹೆಚ್ಚಿದ್ದರೆ, ಆ ಮೀನು ಮಾನವನ ಬಳಕೆಗೆ ಸುರಕ್ಷಿತವಲ್ಲ. ಅಮೋನಿಯಾ ಸಾಂದ್ರತೆಯು 100-300 ಮಿ.ಗ್ರಾಂ ಅಥವಾ ಕೆಜಿ ದಾಟಿದರೆ ಅದು ಗಂಭೀರ ಆರೋಗ್ಯ ಅಪಾಯವನ್ನುಂಟುಮಾಡುತ್ತದೆ ಎಂದು ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ನುಡಿದರು.
ಸ್ಥಳೀಯ ಮೀನು ಮಾರುಕಟ್ಟೆಗಳಲ್ಲಿ ಸೂಕ್ತ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳ ಕೊರತೆಯೇ ಈ ಕಲಬೆರಕೆಗೆ ಮುಖ್ಯ ಕಾರಣವಾಗಿದೆ. ಇದಲ್ಲದೆ, ಅನೇಕ ಮೀನು ಮಾರುಕಟ್ಟೆಗಳು ಅತ್ಯಂತ ಅಸ್ವಚ್ಛ ವಾತಾವರಣದಲ್ಲಿ ಕಾರ್ಯಾಚರಿಸು ತ್ತಿದ್ದು, ತಕ್ಷಣದ ಆಧುನಿಕೀಕರಣ ಮತ್ತು ಸುಧಾರಣೆಯ ಅಗತ್ಯವಿದೆ. ಇದರ ಜತೆಗೆ ತೆಂಗಿನ ಎಣ್ಣೆ ಕೂಡ ತೀವ್ರವಾಗಿ ಕಲಬೆರಕೆಯಾಗುತ್ತಿದೆ. ಲಾಭದ ದುರಾಸೆಯಿಂದ ಕೆಲ ವ್ಯಾಪಾರಿಗಳು ತೆಂಗಿನ ಎಣ್ಣೆಗೆ ಪ್ಯಾರಾಫಿನ್ ಎಣ್ಣೆ ಮತ್ತು ಪಾಮ್ ಕರ್ನಲ್ ಎಣ್ಣೆಯನ್ನು ಬೆರೆಸುತ್ತಿದ್ದಾರೆ. ಪ್ಯಾರಾಫಿನ್ ಎನ್ನುವುದು ಬಣ್ಣವಿಲ್ಲದ ಪೆಟ್ರೋಲಿಯಂ ಉಪಉತ್ಪನ್ನ ವಾಗಿದ್ದು, ಇದನ್ನು ಸೇವಿಸುವುದರಿಂದ ಮಾನವ ದೇಹಕ್ಕೆ ದೀರ್ಘಕಾಲದ ತೀವ್ರ ಹಾನಿಯಾಗುತ್ತದೆ. ಈ ಎಲ್ಲದರ ವಿರುದ್ಧ ಕಠಿಣ ತಪಾಸಣೆ ಮತ್ತು ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಆಪ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎಲ್.ಪಿಂಟೊ, ಮಹಿಳಾ ಘಟಕ ಅಧ್ಯಕ್ಷೆ ಸೀಮಾ ಮಡಿವಾಳ, ಜಿಲ್ಲಾ ಕಾರ್ಯದರ್ಶಿ ವಾಸುದೇವ್, ವಾಸುದೇವ್, ಹಬೀಬ್ ಖಾದರ್, ಲೆಸ್ಲಿ ಫರ್ನಾಂಡಿಸ್ ಉಪಸ್ಥಿತರಿದ್ದರು.





