ಕೇಂದ್ರ ಸರ್ಕಾರದ ವಿಶೇಷ ಅನುದಾನದ ಅಡಿಯಲ್ಲಿ ರಾಜ್ಯಕ್ಕೆ ಗ್ರಾಮ ಗ್ರಂಥಾಲಯಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಶಾಲಾ ವಿದ್ಯಾರ್ಥಿಗಳ ಓದುವಿಕೆ ಮತ್ತು ಡಿಜಿಟಲ್ ಮೂಲಸೌಕರ್ಯ ಕಾರ್ಯಕ್ರಮದ ಅಡಿಯಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲು ನಿರ್ದೇಶಿಸಲಾಗಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಯ ಆಯ್ದ ಗ್ರಾಮಗಳ ಶಾಲೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ತಿಳಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು.
“ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ, ಕಿತ್ತೂರು ಮತ್ತು ಖಾನಾಪುರ ಸೇರಿದಂತೆ ಒಟ್ಟು 330 ಗ್ರಂಥಾಲಯಗಳು ಮಂಜೂರಾಗಿರುವುದು ಅತ್ಯಂತ ಸಂತಸದ ವಿಷಯ. ಈ ಗ್ರಂಥಾಲಯಗಳಿಗೆ ಅಗತ್ಯವಿರುವ ಪುಸ್ತಕಗಳು, ಪೀಠೋಪಕರಣಗಳು ಮತ್ತು ಇತರೆ ಸಾಮಗ್ರಿಗಳು ಈಗಾಗಲೇ ತಲುಪಿರುವುದು ಯೋಜನೆಯ ಸಕಾಲಿಕ ಅನುಷ್ಠಾನಕ್ಕೆ ಸಹಕಾರಿಯಾಗಿದೆ.
ಈ ಯೋಜನೆಯು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಬೌದ್ಧಿಕ ವಿಕಸನಕ್ಕೆ ಗಣನೀಯವಾಗಿ ಸಹಾಯಕವಾಗಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದು ಪ್ರಧಾನ ಮಂತ್ರಿಗಳ “ವಿಕಸಿತ ಭಾರತ” ಕಲ್ಪನೆಯ ಸಾಕಾರಕ್ಕೆ ಒಂದು ಪ್ರಮುಖ ಹೆಜ್ಜೆಯಾಗಿದೆ. ನಮ್ಮ ಕ್ಷೇತ್ರಕ್ಕೆ ಈ ಮಹತ್ವದ ಯೋಜನೆಯನ್ನು ನೀಡಿರುವ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಧನ್ಯವಾದಗಳು” ಎಂದರು.
ಇದನ್ನೂ ಓದಿ: ಉತ್ತರ ಕನ್ನಡ | ಮುಂಡಗೋಡದಲ್ಲಿ ಧರ್ಮಗುರು ದಲೈಲಾಮಾರ 90ನೇ ವರ್ಷದ ಜನ್ಮ ದಿನಾಚರಣೆ
ಇದು ಸಮುದಾಯದಲ್ಲಿ ಜ್ಞಾನ ಪ್ರಸಾರಕ್ಕೆ ಮತ್ತು ಶೈಕ್ಷಣಿಕ ಪ್ರಗತಿಗೆ ಉತ್ತಮ ಅವಕಾಶ ಒದಗಿಸುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಮತ್ತು ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲೂ ಕೂಡ ಇದನ್ನ ಅನುಷ್ಠಾನ ಗೊಳಿಸಬೇಕು ಎಂದರು.