ಉತ್ತರ ಕನ್ನಡದ ಸಂಸದರಾಗಿದ್ದ ಅನಂತ ಕುಮಾರ ಹೆಗಡೆಯವರನ್ನು ಬದಲಾಯಿಸಿ ಕಾಗೇರಿ ವಿಶ್ವೇಶ್ವರ ಹೆಗಡೆಯವರಿಗೆ ಸೀಟು ಕೊಡಲಾಗಿದೆ. ಅದಕ್ಕೆ ಕಾರಣ ಒಂದು ಅನಂತ ಕುಮಾರ್ ಹೆಗಡೆ ಏನೂ ಕೆಲಸ ಮಾಡಿಲ್ಲ. ಎರಡನೆಯದು ಅನಂತ ಕುಮಾರ್ ಹೆಗಡೆ ಮತೀಯವಾದದ ಮಾತುಗಳನ್ನೇ ಆಡುತ್ತಾರೆ ಎಂಬುದು.
ಇಲ್ಲಿ ಅನಂತ ಕುಮಾರ ಮೊದಲ ಬಾರಿ ಎಂಪಿಯಾದಾಗ, ಅಥವಾ ಎರಡನೇ ಬಾರಿ ಆಯ್ಕೆಯಾದಾಗ ಬಿಜೆಪಿ ಹೈ ಕಮಾಂಡ್ ಅವರ ಬಳಿ ಸರಿಯಾಗಿ ಕೆಲಸ ಮಾಡುವಂತೆ ಯಾಕೆ ಸೂಚಿಸಲಿಲ್ಲ. ಇದೇ ರೀತಿ ಕೆಲಸ ಮಾಡದ ನೂರು ಎಂಪಿಗಳನ್ನು ಬಿಜೆಪಿ ಬದಲಾಯಿಸಿದೆಯಂತೆ. good, ಹಾಗಾದರೆ ಪ್ರಧಾನಿ ತನ್ನ ಕೈ ಕೆಳಗಿನ ಎಂಪಿ ಗಳನ್ನು ದುಡಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದೇ ಅರ್ಥ. ಮೋದಿ ನೋಡಿ ವೋಟು ಕೊಟ್ಟದ್ದಲ್ಲವಾ? ಕೆಲಸ ಮಾಡಿಸಬೇಕಾದ ಪ್ರಧಾನಿಯೇ ಫೇಲ್ ಆದ ಮೇಲೆ ಮೋದಿಯನ್ನೇ ಬದಲಾಯಿಸಿ ಎನ್ನುವುದರಲ್ಲಿ ತಪ್ಪೇನಿದೆ?ಕಾಗೇರಿ ಹೆಗಡೆಯವರು ಶಾಸಕರಾಗಿ, ಮಂತ್ರಿಯಾಗಿ ಅಂತಹ ಮಹಾ ಕೆಲಸ ಮಾಡಿದ್ದು ಯಾವುದು? ಅಂಕೋಲ ಕ್ಷೇತ್ರದಲ್ಲಿ ಶಾಸಕರಾಗಿದ್ದ ಇವರು ಅಲ್ಲಿ ಜನರ ಭೇಟಿಗೆ ಒಂದು ಕಚೇರಿಯನ್ನೂ ಮಾಡಿದವರಲ್ಲ. ಹಾಗಾದ ಮೇಲೆ ಇವರಿಗೆ ಯಾಕೆ ವೋಟು ಕೊಡಬೇಕು ಅನ್ನುವುದು ಸ್ಥಳೀಯರ ವಾದ.
ಮೂರನೇ ವಿಷಯ- ಸಂವಿಧಾನ ಬದಲು ಮಾಡುತ್ತೇವೆ, ಅಥವಾ ಹಿಂದೂ ರಾಷ್ಟ್ರ ಇತ್ಯಾದಿ ವಿಷಯ ಅನಂತ ಹೆಗಡೆಯ ಸ್ವಂತ ಮಾತುಗಳಲ್ಲ. ಅದು ಸಂಘ ಪರಿವಾರದ ಮೀಟಿಂಗ್‌ನಲ್ಲಿ ಬಂದಿರುವ ಮತ್ತು ದೇಶದಾದ್ಯಂತ ಬಿಜೆಪಿ ನಾಯಕರು ಹೇಳಿದ ಮಾತುಗಳೇ. ಇದೀಗ ಸ್ವತಃ ಮೋದಿಯವರೇ ಕಮ್ಯೂನಲ್ ಭಾಷಣ ಮಾಡುತ್ತಿದ್ದಾರಲ್ಲವೆ? ಹಾಗಾದರೆ ಅನಂತ ಹೆಗಡೆ, ನಳಿನ್, ಪ್ರತಾಪ ಸಿಂಹ, ಸಿ ಟಿ ರವಿ ಅವರುಗಳ ತಪ್ಪೇನಿದೆ!
ಇಲ್ಲಿ ಅನಂತ ಕುಮಾರ್ ತನ್ನ ಸ್ವಂತ ಶಕ್ತಿ ಬೆಳೆಸಿಕೊಂಡರು. ಇದನ್ನು ಸಹಿಸಲಾಗಲಿಲ್ಲ. ಕಮ್ಯುನಲ್ ಬೇಕಾದಾಗ ಮಾತ್ರ ಮಾತನಾಡಬೇಕು. ಅದು ಜಾರಿಗೆ ತರುವ ಸಂಗತಿ ಈಗ ಹೇಳಬಾರದು. ಇದು ಬಿಜೆಪಿ ಪರಿವಾರದ ತಂತ್ರ. ಬಿಜೆಪಿ ಅಧಿಕಾರಕ್ಕೆ ಹೊಡೆತ ಬಂತು ಎಂದಾದರೆ ಮುಲಾಜಿಲ್ಲದೇ ಮೂಲೆಗೆ ತಳ್ಳುತ್ತಾರೆ. ಮಹೇಂದ್ರ ಕುಮಾರ್, ಸತ್ಯಜಿತ್ ಸುರತ್ಕಲ್, ಡಾ ಪ್ರವೀಣ ತೊಗಾಡಿಯಾ, ನೂಪೂರ್ ಶರ್ಮಾ ಇವರಂತಹ ನೂರಾರು ನಾಯಕರ ಕಥೆಯೂ ಹೀಗೇ ಆದದ್ದು.
ಅನಂತ ಹೆಗಡೆಯವರ ತೀವ್ರವಾದ ಹಿಂದುತ್ವದಿಂದಲೇ ಹಿಂದೂ ಯುವಕರು ಸಂಘಟಿತರಾಗಿದ್ದು. ಅವರ ತಲೆಯಲ್ಲೂ ಹಿಂದೂ ತೀವ್ರವಾದದ ಕನಸುಗಳನ್ನೇ ಬಿತ್ತಲಾಗಿತ್ತು. ಈಗ ಅದನ್ನೆಲ್ಲ ಬಿಡಿ ಎಂದರೆ ಹೇಗೆ ಸಾಧ್ಯ ಅನ್ನುವುದು ಕಾರ್ಯಕರ್ತರ ವಾದ. ಹಿಂದೂ ಹುಲಿ, ಮುಂದಿನ ಮುಖ್ಯಮಂತ್ರಿ, ಯೋಗಿ ಮಾದರಿ ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಅನಂತ ಹೆಗಡೆಯವರ ಬಗ್ಗೆ ಬರೆಯುತ್ತಿದ್ದ ಉಗ್ರವಾದಿ ಹಿಂದುತ್ವದ ಜನಗಳಿಗೆ ಈಗ ಅಸಹಾಯಕ ಪರಿಸ್ಥಿತಿ ಬಂದಿದೆ. ಗೊಂದಲವಿದೆ. ಬಿಜೆಪಿಯ ನಿಲುವುಗಳೇ ಅರ್ಥವಾಗುತ್ತಿಲ್ಲ. ಹೀಗಾಗಿ ಆ ಗುಂಪು ಈಗಲೂ ಅನಂತ, ನಳಿನ, ಪ್ರತಾಪರ ಪರ ನಿಂತಿದೆ.
ಇಲ್ಲಿ ಬಿಜೆಪಿಯ ಹೈ ಕಮಾಂಡ್ ನ ದ್ವಂದ್ವ ನೀತಿಯೇ ಇದಕ್ಕೆಲ್ಲ ಕಾರಣ ಎಂಬ ಆಕ್ರೋಶವಿದೆ. ಬಿಜೆಪಿಯಲ್ಲಿ ಒಮ್ಮೆ ಮೂಲೆಗೆ ತಳ್ಳಿದರೆ ರಾಜಕೀಯವೇ ಫುಲ್‌ಸ್ಟಾಪ್. ಅದು ಅಡ್ವಾಣಿ, ತೊಗಾಡಿಯಾ, ನೂಪುರ್ ಶರ್ಮಾರ ಉದಾಹರಣೆ ಇದೆ. ಈ ಎಲ್ಲಾ ಕಾರಣಕ್ಕೆ ಬಿಜೆಪಿ ಸಂಪೂರ್ಣ ಗೊಂದಲದ ಗೂಡಾಗಿ ಕಾಣುತ್ತಿದೆ.
ಇದನ್ನು ಕಾಂಗ್ರೆಸ್ ಹೇಗೆ ಬಳಸುತ್ತದೋ ಗೊತ್ತಿಲ್ಲ. ದೇಶಪಾಂಡೆ ಮತ್ತು ಕಾಗೇರಿ ಗಳಸ್ಯ ಕಂಠಸ್ಯ ಸ್ನೇಹ. ಅಂಕೋಲಾ ಕ್ಷೇತ್ರದಲ್ಲಿ ದೇಶಪಾಂಡೆ ಬಿಜೆಪಿಗೆ ಹೈ ಲೀಡ್ ಕೊಡಿಸುತ್ತಾರೆ ಅನ್ನುವ ಮಾತು ಜಗಜ್ಜಾಹೀರು ಆಗಿದೆ. ಹಾಗಾಗಿ ಇಲ್ಲಿನ ಕದನ ಕುತೂಹಲಕಾರಿಯಾಗಿದೆ.
-ನಾರಾಯಣ ನಾಯ್ಕ, ಕುಮಟಾ
