ರೇಣುಕಾ ಸ್ವಾಮಿ ಅವರ ಕೊಲೆ ಆರೋಪಿ ನಟ ದರ್ಶನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆತನನ್ನು ಚಿತ್ರರಂಗದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ವೀರಶೈವ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಅತ್ಯಂತ ಹೀನವಾಗಿ ಕೊಲೆಯಾದ ರೇಣುಕಾ ಸ್ವಾಮಿಯವರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಮೃಗದ ರೀತಿಯಲ್ಲಿ ಆತನ ಮೇಲೆ ಹಲ್ಲೆ ಮಾಡಿ, ಅತ್ಯಂತ ಹೀನ ರೀತಿಯಲ್ಲಿ ಕೊಲೆ ಮಾಡಿರುವ ದರ್ಶನ್ ಮತ್ತು ಅವನ ಗೆಳತಿ ಹಾಗೂ ಸಹಚರರಿಗೆ ಕಾನೂನಿನ ಪ್ರಕಾರ ಶಿಕ್ಷೆ ಕೊಡಿಸಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ರವಿ ಬಲ್ಲೂರ್, “ವೀರಶೈವ ಸಮಾಜದ ರೇಣುಕಾ ಸ್ವಾಮಿ ಅತ್ಯಂತ ಮುಗ್ದ ವ್ಯಕ್ತಿಯಾಗಿದ್ದರು. ಆತ ತನ್ನ ಗೆಳತಿಗೆ ಕೆಟ್ಟ ಸಂದೇಶ ಕಳಿಸಿದ ಎನ್ನುವ ಕಾರಣಕ್ಕೆ ಆತನನ್ನು ಅಪಹರಿಸಿ ಗೋಡೌನ್‌ನಲ್ಲಿ ಕೊಡಿ ಹಾಕಿಕೊಂಡು ಹಲ್ಲೆ ಮಾಡಿದ್ದಾರೆ. ಆತನನ್ನು ಕೊಲೆಗೈದಿರುವ ದರ್ಶನ್ ಒಬ್ಬ ಕೊಲೆಗಡುಕ. ಇಂತಹವರಿಂದ ಸಮಾಜಕ್ಕೆ ಯಾವ ಸಂದೇಶ ನೀಡಲು ಸಾಧ್ಯವಿಲ್ಲ. ಆತನನ್ನು ಚಿತ್ರರಂಗ ಉಚ್ಛಾಟಿಸಬೇಕು. ಅವರ ಚಿತ್ರಗಳು ಯಾವ ಚಿತ್ರಮಂದಿರದಲ್ಲೂ ಬಿಡುಗಡೆಯಾಗಬಾರದು. ಚಿತ್ರಮಂದಿರಗಳಲ್ಲಿ ಆತನ ಸಿನಿಮಾ ಪ್ರದರ್ಶಿಸಿದರೆ ಸಮಾಜದಿಂದ ತಕ್ಕ ಶಾಸ್ತಿ ಮಾಡಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
“ಪ್ರಕರಣದಲ್ಲಿ ಸರ್ಕಾರ ಮೌನವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಮೌನವಾಗಿದ್ದಾರೆ. ಪ್ರಕರಣದಲ್ಲಿ ಅಗತ್ಯ ಕಾನೂನು ಕ್ರಮ ಕೈಗೊಂಡು ಆರೋಪಿಗಳಿಗೆ ಶಿಕ್ಷೆ ನೀಡಬೇಕು. ಆರೋಪಿಗಳನ್ನು ಬಚಾವ್ ಮಾಡುವ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ, ಆ ರೀತಿ ಅದಲ್ಲಿ ತೀವ್ರ ಹೋರಾಟ ರೂಪಿಸಲಾಗುತ್ತದೆ” ಎಂದರು.
“ಕೊಲೆಯಾದ ರೇಣುಕಾ ಸ್ವಾಮಿ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಆತನ ಪತ್ನಿ ಗರ್ಭಿಣಿಯದ್ದು, ಮುಂದಿನ ಜೀವನಕ್ಕೆ ಅನುಕೂಲವಾಗುವಂತೆ ಸರ್ಕಾರ ಪರಿಹಾರ ನೀಡಬೇಕು. ಉದ್ಯೋಗಕ್ಕೆ ವ್ಯವಸ್ಥೆ ಮಾಡಿಕೊಡಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಿದ್ದಲಿಂಗಯ್ಯ, ವೀರಭದ್ರಯ್ಯ, ಮುಖಂಡರು ಹಾಗೂ ನೂರಾರು ಜನರು ಭಾಗವಹಿಸಿದ್ದರು.