ಅನಾವೃಷ್ಟಿಯಿಂದ ನೀರಿಲ್ಲದೆ ಬೆಳೆದು ನಿಂತಿರುವ ಮೆಣಸಿನಕಾಯಿ ಬೆಳೆ ಬಾಡುತ್ತಿರುವುದನ್ನು ಸಂರಕ್ಷಣೆಗೆ ಜಲಾಶಯದಿಂದ ರೈತರು ಕಾಲುವೆಗೆ ನೀರು ಹರಿಸಬೇಕು ಎಂಬುದಾಗಿ ಪಟ್ಟು ಹಿಡಿದು ಕಳೆದ 22 ದಿನಗಳಿಂದ ಹೋರಾಟ ನಡೆಸಿದ ಅನ್ನದಾತರ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದು 2.75 ಟಿಎಂಸಿ ನೀರು ಬಿಡಲು ಸೂಚಿಸಿದೆ.
ಶಹಾಪುರ ತಾಲೂಕಿನ ಭೀಮರಾಯನ ಗುಡಿ ಕೃಷ್ಣಭಾಗ್ಯ ಜಲ ನಿಗಮದ ಆಡಳಿತ ಕಚೇರಿ ಮುಂದೆ ನಡೆಯುತ್ತಿರುವ ಧರಣಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪೊಲೀಸರು, ಮಾಧ್ಯಮ ಮಿತ್ರರಿಗೂ, ರೈತ ಮುಖಂಡರಿಗೂ ಸನ್ಮಾನಿಸಿ, ಸಿಹಿಹಂಚಿ ಸಂಭ್ರಮಿಸಿ ಧರಣಿ ಅಂತ್ಯಗೊಳಿಸಿದರು.
ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತ ಬೆಳೆಗಳ ರಕ್ಷಣೆಗಾಗಿ ರೈತರು ಕೈಗೊಂಡ ಸುದೀರ್ಘ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ, ಕಾಲುವೆಗೆ ನೀರು ಹರಿಸಲು ಕಾರಣವಾದ ಸರ್ಕಾರ, ಸಚಿವರು, ಶಾಸಕರು, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕೃಷ್ಣ ಭಾಗ್ಯ ಜಲ ನಿಗಮ ಹಾಗೂ ಮಾಧ್ಯಮ ಬಳಗಕ್ಕೂ ರೈತರ ಪರವಾಗಿ ಅನಂತ ಕೃತಜ್ಞತೆ ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟೆ ಸಲ್ಲಿಸಿದ್ದಾರೆ.
“ಈ ಹೋರಾಟ ನಮ್ಮ ಬದುಕಿನ ಪ್ರಶ್ನೆಯಾಗಿರುವುದರಿಂದ ನಾವು ಅನಿವಾರ್ಯವಾಗಿ ಗಟ್ಟಿಯಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿತ್ತು. ಈ ವೇಳೆ ಸರ್ಕಾರಕ್ಕೂ, ಸಚಿವರಿಗೂ, ಜಿಲ್ಲಾಡಳಿತಕ್ಕೂ, ಪೊಲೀಸರಿಗೂ ಹಾಗೂ ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಸಿಟ್ಟಿನ ಭರಾಟೆಯಲ್ಲಿ ಮಾತನಾಡಿರಬಹುದು. ಧಿಕ್ಕಾರ ಕೂಗಿರಬಹುದು. ಆದರೆ, ಇದು ಯಾವುದೇ ವೈಯಕ್ತಿಕ ದ್ವೇಷದಿಂದಲ್ಲ, ಯಾವ ದ್ವೇಷವೂ ಇಲ್ಲ, ಅಧಿಕಾರಿಗಳು ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳು ನಮ್ಮ ಜೊತೆ ಸಂಯಮದಿಂದ ವರ್ತಿಸಿರುವದನ್ನು ನಾವು ಕೃತಜ್ಞತೆ ಸಲ್ಲಿಸುತ್ತೇವೆ” ಎಂದು ತಿಳಿಸಿದರು.

ಮಳೆ ಕೊರತೆ ಹಾಗೂ ಭೀಕರ ಬರಗಾಲದಿಂದಾಗಿ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಿದ್ದರೂ, ಡ್ಯಾಮಿನಲ್ಲಿ ನೀರಿನ ಕೊರತೆ ಇದ್ದರೂ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರಿಗೆ ಈ ಭಾಗದ ರೈತರ ಸಮಸ್ಯೆ, ಪರಿಸ್ಥಿತಿ, ಅವರ ಸಂಕಷ್ಟದ ಬದುಕಿನ ಬಗ್ಗೆ ವಿವರವಾಗಿ ತಿಳಿಸಿ. ನೀರು ಬಿಟ್ಟರೆ ಈ ಭಾಗದ ರೈತರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಮಾಡಿಕೊಂಡಿದ್ದೆವು. ಮನವಿಗೆ ಪುರಸ್ಕರಿಸಿದ ಅವರು ತುರ್ತು ಸಭೆ ನಡೆಸಿ, ರೈತರ ಸಮಸ್ಯೆಗೆ ಸ್ಪಂದಿಸಿ 2.75 ಟಿಎಂಸಿ ನೀರು ಬಿಡಲು ಆದೇಶಿಸಿದ್ದು, ಈ ಭಾಗದ ಸಾವಿರಾರು ರೈತರಿಗೆ ಅನುಕೂಲವಾಗಿದೆ. ಸಮಸ್ಯೆಗೆ ಸ್ಪಂದಿಸಿದ ಸಿಎಂ ಹಾಗೂ ಜಲಸಂಪನ್ಮೂಲ ಸಚಿವರಿಗೂ ಮತ್ತು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಿಗೂ ಮತ್ತು ಶಾಂತಿಯುತವಾಗಿ ಹೋರಾಟ ನಡೆಸಿದ ರೈತರಿಗೂ ಅಭಿನಂದನೆಗಳನ್ನು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಡವರ ಭೂಮಿ ಮತ್ತು ನೈಸ್ ರಾಜಕಾರಣ
ಕಳೆದ 21 ದಿನಗಳ ಕಾಲ ಸತತ ಅಹೋರಾತ್ರಿ ಧರಣಿ ನಡೆಸಿ, ಸರ್ಕಾರ ನಮ್ಮ ಮನವಿಗೆ ವಿಳಂಬ ನೀತಿ ಅನುಸರಿಸಿತು. ಕುಣಿತೋಡಿ ಜೀವಂತ ಸಮಾಧಿಯಾಗಲು ಸಿದ್ಧರಾಗಿದ್ದೆವು. ತಪ್ಪಿದ್ದರೆ ವಿಷ ಕುಡಿಯಲಿಕ್ಕೂ ಸಿದ್ದರಾಗಿರುವ ರೈತರ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದು 2.75 ಟಿಎಂಸಿ ನೀರು ಬಿಡಲು ಒಪ್ಪಿ ಆದೇಶಿಸಿದೆ. ರೈತರ ಹೋರಾಟದೊಂದಿಗೆ ಸಹಕರಿಸಿದ ಸಚಿವರಿಗೂ ಜಿಲ್ಲಾಧಿಕಾರಿಯವರಿಗೂ ಶಾಸಕರಿಗೂ ಅಧಿಕಾರಿಗಳಿಗೂ, ಸೂಕ್ತ ರಕ್ಷಣೆ ನೀಡಿದ ಪೊಲೀಸ್ ಇಲಾಖೆಗೂ ಮಾಧ್ಯಮದವರಿಗೂ ರೈತ ಸಂಘ ಕೃತಜ್ಞತೆ ಸಲ್ಲಿಸುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶರಣು ಮಂದಾರವಾಡ ತಿಳಿಸಿದರು.