ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಖಾಸಗಿ ಮತ್ತು ಅನುದಾನಿತ ಶಾಲಾ, ಕಾಲೇಜುಗಳಲ್ಲಿ ಡೊನೇಶನ್ ಹಾವಳಿ ಜೋರಾಗಿದೆ. ಇದನ್ನು ತಡೆಗಟ್ಟುವಂತೆ ಆಗ್ರಹಿಸಿ ವಾರದ ಹಿಂದಷ್ಟೇ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ಮಾಡಲಾಗಿತ್ತು.
ಸಂಭಂದಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಕೊಟ್ಟೂರು ಪಟ್ಟಣ ಬಂದ್ ಮಾಡಲು ಹೋರಾಟಗಾರರು ಕರೆ ನೀಡಿದ್ದರು, ಹೀಗಾಗಿ ಎಚ್ಚೆತ್ತ ತಾಲ್ಲೂಕು ದಂಡಾಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಎಲ್ಲಾ ಖಾಸಗಿ ಮತ್ತು ಅನುದಾನಿತ ಶಾಲಾ, ಕಾಲೇಜುಗಳ ಪ್ರಾಂಶುಪಾಲರು ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರ ಜೊತೆ ಸಭೆ ನಡೆಸಲಾಯಿತು.
ಈ ವೇಳೆ ಸಂಬಂಧಪಟ್ಟ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಶುಲ್ಕ ನಿಗದಿ ಮಾಡುವುದು ಆಡಳಿತ ಮಂಡಳಿಗೆ ಬಿಟ್ಟ ವಿಚಾರವೆಂದು ತಾಲ್ಲೂಕು ದಂಡಾಧಿಕಾರಿಗಳು ಹೇಳಿದ್ದರು. ಇತ್ತ ಹೋರಾಟಗಾರರು ಕೂಡ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಹೀಗಾಗಿ ತಹಶೀಲ್ದಾರ್ ಮುಂದಿನ ಸಭೆಯಲ್ಲಿ ಆಡಳಿತ ಮಂಡಳಿಯವರು ಭಾಗವಹಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.





