ವಿಜಯನಗರ ಜಿಲ್ಲೆ ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ಎರಡು ದಿನಗಳ ಹೂಳೆತ್ತುವ ಅಭಿಯಾನ ನಡೆಯುತ್ತಿದೆ. ರೈತರು ತಾವೇ ಟ್ರ್ಯಾಕ್ಟರ್, ಜೆಸಿಬಿ ತಂದು ಹೂಳು ತೆಗೆಯುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ.
ತುಂಗಭದ್ರಾ ರೈತ ಸಂಘದ ರಾಜ್ಯಾಧ್ಯಕ್ಷ ಪುರುಷೋತ್ತಮ್ ಗೌಡ ನೇತೃತ್ವದಲ್ಲಿ ಸಾಂಕೇತಿಕವಾಗಿ ಹೂಳೆತ್ತುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಬಸವಲಿಂಗ ಮಹಾ ಸ್ವಾಮೀಜಿ, ನಿರಂಜನ ಪ್ರಭುದೇವ್ ಮಹಾ ಸ್ವಾಮಿಗಳು, ನಾಗನಾಥ ಮಹಾ ಸ್ವಾಮಿಗಳು, ಕೊಟ್ಟೂರು ಸ್ವಾಮೀಜಿಗಳು ಡ್ಯಾಮ್ ಹಿನ್ನೀರಿನಲ್ಲಿ ಗಂಗೆ ಪೂಜೆ ನೆರವೇರಿಸುವ ಮೂಲಕ ಹೂಳೆತ್ತುವ ಕಾರ್ಯಕ್ಕೆ ಗ್ರೀನ್ ಸಿಗ್ನಲ್ ನೀಡಿದರು.

ಕಂಪ್ಲಿ, ಕುರುಗೋಡು, ಸಿರುಗುಪ್ಪ ಸೇರಿದಂತೆ ವಿಜಯನಗರ ಜಿಲ್ಲೆಯ ವಿವಿಧೆಡೆಯಿಂದ ರೈತರು, 105 ಟ್ರ್ಯಾಕ್ಟರ್ ತಂದು ಹೂಳು ತುಂಬಿಕೊಂಡು ತಮ್ಮ ಹೊಲಕ್ಕೆ ಸಾಗಿಸಿದರು. ಇದೇ ವೇಳೆ ಮಾತನಾಡಿದ ತುಂಗಭದ್ರಾ ರೈತ ಸಂಘದ ರಾಜ್ಯಾಧ್ಯಕ್ಷ ಪುರುಷೋತ್ತಮ್, “ಹಲವು ಬಾರಿ ಸರ್ಕಾರಕ್ಕೆ ಹೂಳೆತ್ತಲು ಮನವಿ ಮಾಡಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸರ್ಕಾರವನ್ನು ಎಚ್ಚರಿಸಲು ಹೂಳೆತ್ತುವ ಕಾರ್ಯಕ್ಕೆ ಕೈ ಹಾಕಿದ್ದೇವೆ” ಎಂದರು.

ಮತ್ತೊಬ್ಬ ರೈತ ಮುಖಂಡ ಗಾದಿಲಿಂಗಪ್ಪ ಮಾತನಾಡಿ, “133 ಟಿಎಂಸಿ ಸಾಮರ್ಥ್ಯ ಹೊಂದಿರುವ ಟಿಬಿ ಡ್ಯಾಂನಲ್ಲಿ 30 ಟಿಎಂಸಿ ಹೂಳು ತುಂಬಿಕೊಂಡಿದೆ. ಉಳಿದ 100 ಟಿಎಂಸಿ ನೀರು ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಸಾಕಾಗುವುದಿಲ್ಲ. ಸರ್ಕಾರ ಹೂಳೆತ್ತುವ ಕಾರ್ಯ ನಡೆಸದಿದ್ರೆ ಕೃಷಿ, ಜಾನುವಾರುಗಳಿಗೆ ನೀರಿನ ಅಭಾವ ತಲೆದೋರಲಿದೆ. ಹೀಗಾಗಿ, ಸರ್ಕಾರ ಬೇಗನೇ ಎಚ್ಚೆತ್ತುಕೊಂಡು, ಹೂಳೆತ್ತದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.




