ಅಧಿಕಾರ ಹಸ್ತಾಂತರ ಚರಿತ್ರೆ: ಸಿದ್ದರಾಮಯ್ಯ ಬಿಟ್ಟು ಹೋದ ಆ ಮುತ್ಸದ್ದಿತನ… (ಭಾಗ-1)

Date:

ಕುರ್ಚಿ ಬಿಡುವ ಕೊನೆಯ ದಿನ ಸಿದ್ದರಾಮಯ್ಯನವರ ಮುಖದಲ್ಲಿ ಯಾವುದೇ ದುಗಡ ಇರಲಿಲ್ಲ. ನಾಟಕೀಯತೆಯೂ ಇರಲಿಲ್ಲ. ಸಹಜವಾಗಿ ಕಂಗೊಳಿಸುತ್ತಿದ್ದರು. ಮಾಗಿದ ರಾಜಕಾರಣಿಯಷ್ಟೇ ಅವರಲ್ಲಿ ಕಾಣುತ್ತಿದ್ದರು. ರಾಜೀನಾಮೆ ಕೊಟ್ಟು ಬಂದ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಆಡಿದ ಮಾತುಗಳು, ಮೌಲ್ಯಯುತ ರಾಜಕಾರಣದ ಯುಗಾಂತ್ಯದಂತೆಯೂ ಕಾಣುತ್ತಿದ್ದವು

ಕಳೆದ 50 ವರ್ಷಗಳ ಕರ್ನಾಟಕ ರಾಜಕೀಯ ಇತಿಹಾಸವನ್ನು ತಿರುವಿ ಹಾಕಿದರೆ, ಬಹುಶಃ ಸಿದ್ದರಾಮಯ್ಯನವರಂತೆ ಗೌರವಯುತವಾಗಿ ಅಧಿಕಾರ ಹಸ್ತಾಂತರ ಮಾಡಿದ ಬೇರೊಬ್ಬ ಮುಖ್ಯಮಂತ್ರಿ ಸಿಗಲಾರರು. ದೇವರಾಜ ಅರಸು ಅವರ ನಂತರದಲ್ಲಿ ರಾಜ್ಯ ರಾಜಕಾರಣವು ಹಲವು ಏಳುಬೀಳುಗಳನ್ನು ಕಂಡಿತು. ಅದರಲ್ಲೂ ಕಾಂಗ್ರೆಸ್ಸೇತರ ಸರ್ಕಾರಗಳು ಅಸ್ತಿತ್ವಕ್ಕೆ ಬಂದಾಗಿನಿಂದ ಈವರೆಗೂ ನಡೆದಿರುವ ಅಧಿಕಾರ ಹಸ್ತಾಂತರ ಪ್ರಸಂಗಗಳು ರಾಜಕಾರಣಿಗಳು ಮತ್ತು ಪಕ್ಷಗಳ ಅಧಿಕಾರ ಲಾಲಸೆಗಳಿಗೆ ಕನ್ನಡಿ ಹಿಡಿದಿವೆ.

- Advertisement -

ಅರಸು ಅವರು ತಮ್ಮ ಎರಡನೇ ಅವಧಿಯ ಮಧ್ಯಂತರದಲ್ಲಿ ಅಧಿಕಾರ ಬಿಟ್ಟುಕೊಡಬೇಕಾದ ಸನ್ನಿವೇಶ ಬಂದಾಗನಿಂದ ಹಿಡಿದು, ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದ ಸನ್ನಿವೇಶದವರೆಗೂ ಯಾವೊಬ್ಬ ಮುಖ್ಯಮಂತ್ರಿಯೂ ಬಹುಶಃ ಸಿದ್ದರಾಮಯ್ಯನವರಷ್ಟು ಸಲೀಸಾಗಿ, ಮುತ್ಸದಿತನ ಮೆರೆದು ಅಧಿಕಾರವನ್ನು ಬಿಟ್ಟುಕೊಟ್ಟವರಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಅಂದಿನ ರಾಜಕಾರಣದ ಸನ್ನಿವೇಶಗಳು, ಒತ್ತಡಗಳು, ಜಾತಿ ಮತ್ತು ಸಾಮಾಜಿಕ ಸಮೀಕರಣಗಳು ಏನೇ ಇರಲಿ- ಅಧಿಕಾರ ಹಿಡಿದವರಿಗೆ ಮಾನವ ಸಹಜ ಲಾಲಸೆ ಇರುವುದು ಸಹಜ. ಹೀಗಾಗಿಯೇ ಹೈಕಮಾಂಡ್ ಕಪಿಮುಷ್ಟಿಗೆ ಸೆಡ್ಡು ಹೊಡೆದವರೂ ಅಪರೂಪ. ಅಷ್ಟು ಸುಲಭವಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಡಲು ಒಪ್ಪದಿರುವವರೇ ಹೆಚ್ಚು. ಅಥವಾ ಇನ್ನೊಬ್ಬರ ಅವಕಾಶವನ್ನು ಬಲವಂತವಾಗಿ ಕಿತ್ತುಕೊಂಡವರೂ ಇದ್ದಾರೆ. ಇದೆಲ್ಲವನ್ನೂ ನೋಡಿದರೆ, ಸಿದ್ದರಾಮಯ್ಯನವರು ಘನತೆಯಿಂದ ತಮ್ಮ ಸ್ಥಾನವನ್ನು ತೊರೆದದ್ದು ಕೂಡ ಚಾರಿತ್ರಿಕವಾಗಿ ದಾಖಲಾಗುವ ಘಟನೆ.

ಕಾಂಗ್ರೆಸ್ ಹೈಕಮಾಂಡ್ನವರು ಸಿದ್ದರಾಮಯ್ಯನವರನ್ನು ದೆಹಲಿಗೆ ಕರೆದು, “ನೀವು ಅಧಿಕಾರ ಬಿಟ್ಟುಕೊಡಬೇಕಾಗುತ್ತದೆ” ಎಂದು ಹೇಳಿಕಳುಹಿಸಿದ ಬಳಿಕ ಸಿದ್ದರಾಮಯ್ಯನವರು ಎರಡು ದಿನ ಮೌನವಾಗಿಯೇ ಇದ್ದರು. “ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿಯೇ ನಡೆಯುತ್ತೇನೆ” ಎಂದು ಪ್ರತಿಪಾದಿಸುತ್ತಾ ಬಂದಿದ್ದ ಅವರಿಗೆ ದಿಢೀರ್ ಆಘಾತವನ್ನು ಪಕ್ಷದ ಹೈಕಮಾಂಡ್ ನೀಡಿತ್ತು. ಅಧಿಕಾರ ಶಾಶ್ವತವಲ್ಲ ಎಂಬ ಸತ್ಯ ಸಿದ್ದರಾಮಯ್ಯನಂಥವರಿಗೆ ತಿಳಿಯದ ಸಂಗತಿಯೇನೂ ಅಲ್ಲ. ಎರಡು ದಿನ ಮೌನಕ್ಕೆ ಸಂದವರಂತೆ ಕಂಡರೂ, ಶಾಸಕಾಂಗ ಪಕ್ಷದ ಸಭೆಯ ಬಳಿಕ ಹೊರಬಂದ ಸಿದ್ದರಾಮಯ್ಯನವರು ನಡೆದುಕೊಂಡ ರೀತಿಯೇ ಬೇರೆಯಾಗಿತ್ತು. ಅವರ ಹಲವು ಸಹದ್ಯೋಗಿಗಳು ಕಣ್ಣೀರು ಹಾಕಿದ್ದು, ಸಾಮಾನ್ಯ ವಿಚಾರವಲ್ಲ.

ಕುರ್ಚಿ ಬಿಡುವ ಕೊನೆಯ ದಿನ ಸಿದ್ದರಾಮಯ್ಯನವರ ಮುಖದಲ್ಲಿ ಯಾವುದೇ ದುಗಡ ಇರಲಿಲ್ಲ. ನಾಟಕೀಯತೆಯೂ ಇರಲಿಲ್ಲ. ಸಹಜವಾಗಿ ಕಂಗೊಳಿಸುತ್ತಿದ್ದರು. ಮಾಗಿದ ರಾಜಕಾರಣಿಯಷ್ಟೇ ಅವರಲ್ಲಿ ಕಾಣುತ್ತಿದ್ದರು. ಸೀದಾ ರಾಜಭವನಕ್ಕೆ ತೆರಳಿ, ರಾಜೀನಾಮೆ ಕೊಟ್ಟು ಬಂದ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಆಡಿದ ಮಾತುಗಳು, ಮೌಲ್ಯಯುತ ರಾಜಕಾರಣದ ಯುಗಾಂತ್ಯದಂತೆಯೂ ಕಾಣುತ್ತಿದ್ದವು.

image 132

“ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದ ಈ ಸಂವಿಧಾನ ಇರದೇ ಹೋಗಿದ್ದರೆ, ನಾನು ಕುರಿ ಕಾಯುತ್ತಾ ಇರಬೇಕಾಗಿತ್ತು. ಈ ಸಂವಿಧಾನ ನಂಬಿದ ತತ್ವಗಳಿಗೆ ನಾನು ಬದ್ಧನಾಗಿದ್ದೇನೆ. ಕೊನೆಯ ಉಸಿರು ಇರುವವರೆಗೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತೇನೆ” ಎಂದು ಹೇಳಿದರು. ಎರಡು ದಶಕಗಳಿಂದ ರಾಜ್ಯ ರಾಜಕಾರಣವನ್ನು ಸೂಕ್ಷ್ಮವಾಗಿ ಅವಲೋಕಿಸಿದವರು, “ಸಿದ್ದರಾಮಯ್ಯನವರಷ್ಟೇ ಇಂತಹ ಮಾತುಗಳನ್ನು ಆಡಲು ಸಾಧ್ಯ. ಅವರು ಎಪ್ಪತ್ತರ ದಶಕದ ಮೌಲ್ಯಗಳ ಪ್ರತಿನಿಧಿ. ಈ ರೀತಿಯಲ್ಲಿ ವಿದಾಯದ ಮಾತುಗಳನ್ನಾಡಿದ ಬೇರೊಬ್ಬ ಮುಖ್ಯಮಂತ್ರಿಯನ್ನು ನಾವು ಕಂಡಿಲ್ಲ” ಎನ್ನುತ್ತಾರೆ.

ಸಿದ್ದರಾಮಯ್ಯನ ಮನಸ್ಸು ಮಾಡಿದ್ದರೆ, ಕಾಂಗ್ರೆಸ್ ಹೈಕಮಾಂಡ್‌ಗೆ ಸೆಡ್ಡು ಹೊಡೆಯಬಹುದಿತ್ತು. ಈ ನಾಡಿನ ಜನ ಅವರನ್ನು ನೋಡಿ ಕಾಂಗ್ರೆಸ್ಗೆ ಹಾಕಿದ್ದಾರೆಂಬುದಕ್ಕೆ ಗಂಭೀರ ರಾಜಕೀಯ ವಿಶ್ಲೇಷಣೆಗಳೇನೂ ಬೇಕಿಲ್ಲ. ರಾಜ್ಯ ಕಂಡ ಅಪರೂಪದ ಮಾಸ್ ಲೀಡರ್ ಅವರಾಗಿದ್ದರು. ಬದಲಾದ ರಾಜಕೀಯ ಪಟ್ಟುಗಳ ಈ ಕಾಲದಲ್ಲಿ ಬಹುಶಃ ಸಿದ್ದರಾಮಯ್ಯ ಆಯಾಸಗೊಂಡವರಂತೂ ಕಾಣುತ್ತಿದ್ದರು. ಭಾರೀ ಜನಬೆಂಬಲ ಇರುವ ನಾಯಕನೊಬ್ಬನಿಗೆ, ರಾಜಕೀಯ ಅಸ್ಥಿರತೆ, ಅರಾಜಕತೆ ಸೃಷ್ಟಿಸುವ ಶಕ್ತಿಯೂ ಇರುತ್ತದೆ. ಆದರೆ ಅದ್ಯಾವುದನ್ನೂ ಮಾಡದೆ, ಅಧಿಕಾರಕ್ಕೆ ಅಂಟಿಕೂರದೆ, ತಾನು ಮಾಡಿದ ಕೆಲಸವನ್ನು ಜನರ ಮುಂದೆ ಒಪ್ಪಿಸಿ, ಯಾವುದೇ ವಿಷಾದವಿಲ್ಲದೆ ಕುರ್ಚಿ ತೊರೆದ ಸಿದ್ದರಾಮಯ್ಯನವರು ಮಾದರಿಯಾಗಿ ನಿಲ್ಲುತ್ತಾರೆ. ಸಿದ್ದರಾಮಯ್ಯನವರು ಅಧಿಕಾರ ಹಸ್ತಾಂತರಿಸುವಲ್ಲಿ ತೋರಿದ ಮುತ್ಸದಿತದ ಮಹತ್ವ ತಿಳಿಯಬೇಕಾದರೆ ಅರಸು ಕಾಲದಿಂದ ಹಿಡಿದು ಶಿವಕುಮಾರ್ ಕಾಲದವರೆಗೂ ಘಟಿಸಿರುವ ರಾಜಕೀಯ ಪಲ್ಲಟಗಳನ್ನು ಅವಲೋಕಿಸಬೇಕಾಗುತ್ತದೆ.

ಅರಸು ಕಾಲದ ಅಂತ್ಯ

1980ನೇ ಇಸವಿ. ಅರಸು ಅವರು ಎರಡನೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದ ಸಂದರ್ಭವದು. ಮೊದಲ ಅವಧಿಯಲ್ಲಿ ಜನಪರ ಆಡಳಿತ ನಡೆಸಿದ್ದ ಅರಸು ಅವರು ಆ ವೇಳೆಗಾಗಲೇ ಇಂದಿರಾ ಗಾಂಧಿಯವರೊಂದಿಗೆ ಮುನಿಸು ಬೆಳೆಸಿಕೊಂಡಿದ್ದರು. ಹೈಕಮಾಂಡ್ ಸಂಸ್ಕೃತಿಗೆ ಸೆಡ್ಡು ಹೊಡೆದು ನಿಂತಿದ್ದರಿಂದ ಕಾಂಗ್ರೆಸ್ ಇಬ್ಭಾಗವಾಗಿತ್ತು. 1980ರ ಆರಂಭದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರ ಕಾಂಗ್ರೆಸ್ (ಐ) ದೇಶಾದ್ಯಂತ ಭರ್ಜರಿ ಜಯ ದಾಖಲಿಸಿತು. ಕರ್ನಾಟಕದಲ್ಲೂ ಅರಸು ಅವರ ಪಕ್ಷ ಧೂಳೀಪಟವಾಗಿ, ಇಂದಿರಾ ಪಕ್ಷ 28 ಕ್ಷೇತ್ರಗಳ ಪೈಕಿ 27 ರಲ್ಲಿ ಗೆದ್ದಿತು. ಅರಸು ಪಾಳೆಯದಲ್ಲಿದ್ದವರೆಲ್ಲ ಇಂದಿರಾ ಕಾಂಗ್ರೆಸ್ಗೆ ಜಿಗಿದಿದ್ದರು. ನೈತಿಕವಾಗಿ ತಮಗೆ ಅಧಿಕಾರದಲ್ಲಿರಲು ಹಕ್ಕಿಲ್ಲ ಎಂಬುದನ್ನು ಅರಿತ ದೇವರಾಜ ಅರಸು ಅವರು ಜನವರಿ 7, 1980 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂದಿರಾ ಗಾಂಧಿಯವರ ಬಲದಿಂದ ನಂತರ ಕುರ್ಚಿಗೇರಿದ ಗುಂಡೂರಾವ್ ಅವರು ತಪ್ಪು ಹೆಜ್ಜೆಗಳನ್ನಿಟ್ಟರು. ಗೋಕಾಕ್ ಚಳವಳಿಯ ಕಾವು, ನರಗುಂದ-ನವಲಗುಂದ ಗೋಲಿಬಾರ್ನಿಂದ ಭುಗಿಲೆದ್ದ ರೈತ ಆಕ್ರೋಶ, ದಲಿತರ ಚಳವಳಿಯ ಉಚ್ಛ್ರಾಯ ಸ್ಥಿತಿಯ ಕಿಡಿಗೆ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಆದರೆ ಕರ್ನಾಟಕದ ಚರಿತ್ರೆಯಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆ ನಂತರ ಕರ್ನಾಟಕವು ವರ್ಣರಂಜಿತ ರಾಜಕಾರಣಕ್ಕೆ ಸಾಕ್ಷಿಯಾಯಿತು.

image 133

ಹೆಗಡೆ, ದೇವೇಗೌಡರ ಪರ್ವ

1983ರ ವಿಧಾನಸಭಾ ಚುನಾವಣೆ. ಜನತಾ ಪಾರ್ಟಿ ದೊಡ್ಡ ಪಕ್ಷವಾಗಿ ಹೊಮ್ಮಿದರೂ ಬಹುಮತವಿರಲಿಲ್ಲ. ಇತ್ತ ಜನತಾ ಪಾರ್ಟಿಯಲ್ಲಿ ನಾಯಕತ್ವದ ಪ್ರಶ್ನೆ ಎದ್ದು- ಎಸ್.ಆರ್ ಬೊಮ್ಮಾಯಿ ಮತ್ತು ಎಚ್. ಡಿ. ದೇವೇಗೌಡರು ಮುಖ್ಯಮಂತ್ರಿ ಪದವಿಯ ಆಕಾಂಕ್ಷಿಯಾಗಿದ್ದರು. ಈ ಸನ್ನಿವೇಶದಲ್ಲಿ ರಾಜ್ಯಸಭಾ ಸದಸ್ಯರಾಗಿದ್ದ ರಾಮಕೃಷ್ಣ ಹೆಗಡೆ ಸಮನ್ವಯ ನಾಯಕರಾಗಿ ಹೊಮ್ಮಿದರು. ಮತ್ತೆ ಕನಕಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಎಂಎಲ್ಎ ಆದರು. 1984 ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ದೇಶಾದ್ಯಂತ ಭಾರೀ ಅನುಕಂಪದ ಅಲೆ ಇತ್ತು. ಇದರಿಂದಾಗಿ ಅದೇ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಸೀಟುಗಳ ಪೈಕಿ ಹೆಗಡೆಯವರ ಜನತಾ ಪಕ್ಷ ಗೆದ್ದದ್ದು ಕೇವಲ 4 ಸ್ಥಾನಗಳನ್ನು ಮಾತ್ರ. ಲೋಕಸಭೆಯ ಸೋಲನ್ನು ಹೆಗಡೆ ಅವರು ತಮಗೆ ಪೂರಕವಾಗಿ ಬಳಸಿಕೊಂಡರು. “ಜನರು ನನ್ನ ಆಡಳಿತದ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ, ನೈತಿಕವಾಗಿ ನಾನು ಅಧಿಕಾರದಲ್ಲಿರಬಾರದು” ಎಂದು ಹೇಳಿ ದಿಢೀರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಿ ಹೊಸ ಚುನಾವಣೆಗೆ ಕರೆ ನೀಡಿದರು. ಹೆಗಡೆಯವರ ಈ ‘ನೈತಿಕ ರಾಜಕಾರಣ’ದ ನಡೆ ರಾಜ್ಯದ ಜನರನ್ನು ಭಾವನಾತ್ಮಕವಾಗಿ ಸೆಳೆಯಿತು. 1985ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಜನತಾ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದರು. 224 ಸ್ಥಾನಗಳ ಪೈಕಿ ಜನತಾ ಪಕ್ಷ 139 ಸ್ಥಾನಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿತು. ಹೆಗಡೆ ಅವರು ಎರಡನೇ ಬಾರಿಗೆ ಭದ್ರವಾದ ಸರ್ಕಾರ ರಚಿಸಿದರು.

1985ರ ಚುನಾವಣೆಯ ನಂತರ ಹೆಗಡೆಯವರ ಜನಪ್ರಿಯತೆ ಉತ್ತುಂಗಕ್ಕೇರಿತ್ತಾದರೂ, ಅವರ ಕೊನೆಯ ದಿನಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿತು. 1988 ರಲ್ಲಿ ಅವರು ಅಧಿಕಾರ ಹಸ್ತಾಂತರ ಮಾಡಬೇಕಾದ ಸನ್ನಿವೇಶ ಬಂದಿತು. ಹೆಗಡೆ ಮತ್ತು ದೇವೇಗೌಡರ ನಡುವಿನ ಶೀತಲ ಸಮರ ತಾರಕಕ್ಕೇರಿತು. ದೇವೇಗೌಡರು ಹೆಗಡೆ ಸಂಪುಟಕ್ಕೆ ರಾಜೀನಾಮೆ ನೀಡಿ ಪಕ್ಷದ ಒಳಗೇ ಬಂಡಾಯವೆದ್ದರು. ಹೆಗಡೆಯವರ ಮಗ ವೈದ್ಯಕೀಯ ಸೀಟು ಕೊಡಿಸಲು ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತು. ಜೊತೆಗೆ ‘ಅರಕ್ ಬಾಟ್ಲಿಂಗ್ ಹಗರಣ’ ಮತ್ತು ಎನ್ಜಿಇಎಫ್ (NGEF) ಷೇರು ವರ್ಗಾವಣೆ ಹಗರಣಗಳು ಹೆಗಡೆಯವರ ಸ್ವಚ್ಛ ಇಮೇಜ್ಗೆ ಮಸಿ ಬಳಿದವು. 1988 ರಲ್ಲಿ ಹೆಗಡೆ ಸರ್ಕಾರವು ರಾಜ್ಯದ ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು ಮತ್ತು ಪತ್ರಕರ್ತರ ಫೋನ್ಗಳನ್ನು ಕದ್ದು ಆಲಿಸುತ್ತಿದೆ ಎಂಬ ಆಘಾತಕಾರಿ ಸತ್ಯ ಪತ್ರಿಕೆಗಳಲ್ಲಿ ಪುರಾವೆ ಸಹಿತ ಬಹಿರಂಗವಾಯಿತು. ತೀವ್ರ ಮುಖಭಂಗ ಅನುಭವಿಸಿದ ರಾಮಕೃಷ್ಣ ಹೆಗಡೆಯವರು ಇದರ ನೈತಿಕ ಹೊಣೆ ಹೊತ್ತು 10 ಆಗಸ್ಟ್ 1988 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಅಂತಿಮವಾಗಿ ರಾಜೀನಾಮೆ ನೀಡಿದರು. ಆದರೆ ತಮ್ಮ ತಮ್ಮ ಸ್ಥಾನದಲ್ಲಿ ದೇವೇಗೌಡರನ್ನು ನೋಡಲು ಅವರು ಇಚ್ಛಿಸಲಿಲ್ಲ.

image 134

ಎಸ್‌.ಆರ್. ಬೊಮ್ಮಾಯಿ ಮತ್ತು ದೇವೇಗೌಡರ ನಡುವೆ ಕುರ್ಚಿಗಾಗಿ ತಿಕ್ಕಾಟ ನಡೆಯುವಾಗ, ಹೆಗಡೆ ಬಣದ ಬೆಂಬಲದಿಂದ ಎಸ್. ಆರ್. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದರು. ಆದರೆ ದೇವೇಗೌಡರು ತಮ್ಮ ಅಸಹಕಾರ ಮುಂದುವರಿಸಿದರು. ಈ ಆಂತರಿಕ ಕಚ್ಚಾಟದ ಲಾಭ ಪಡೆದ ಕೇಂದ್ರದ ಕಾಂಗ್ರೆಸ್ ಸರ್ಕಾರ ಮತ್ತು ಅಂದಿನ ರಾಜ್ಯಪಾಲರಾದ ಪಿ. ವೆಂಕಟಸುಬ್ಬಯ್ಯ ಅವರು, ಶಾಸಕರೊಬ್ಬರ ನಕಲಿ ರಾಜೀನಾಮೆ ಪತ್ರದ ಆಧಾರದ ಮೇಲೆ ಬೊಮ್ಮಾಯಿ ಸರ್ಕಾರಕ್ಕೆ ಬಹುಮತವಿಲ್ಲ ಎಂದು ಹೇಳಿ ಏಪ್ರಿಲ್ 1989 ರಲ್ಲಿ ಬೊಮ್ಮಾಯಿ ಸರ್ಕಾರವನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಸೆಂಬ್ಲಿಯಲ್ಲಿ ಬಹುಮತ ಸಾಬೀತುಪಡಿಸಲು ತಮಗೆ ಅವಕಾಶ ನೀಡಬೇಕೆಂದು ರಾಜ್ಯಪಾಲರ ಕಾಲಿಗೆ ಬಿದ್ದರೂ ಅವಕಾಶ ಸಿಗಲಿಲ್ಲ. ಕೇಂದ್ರದಲ್ಲಿದ್ದ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪ್ರಭಾವದಿಂದ, 21 ಏಪ್ರಿಲ್ 1989 ರಂದು ಬೊಮ್ಮಾಯಿ ಸರ್ಕಾರವನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. ಸರ್ಕಾರವನ್ನು ವಾಮಮಾರ್ಗದಲ್ಲಿ ಕೆಡವಿದ್ದನ್ನು ಪ್ರಶ್ನಿಸಿ ಬೊಮ್ಮಾಯಿಯವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಮುಂದೆ 1994 ರಲ್ಲಿ ಹೊರಬಂದ ‘ಎಸ್.ಆರ್. ಬೊಮ್ಮಾಯಿ ವರ್ಸಸ್ ಕೇಂದ್ರ ಸರ್ಕಾರ’ ಪ್ರಕರಣದ ಐತಿಹಾಸಿಕ ತೀರ್ಪು ರಾಜ್ಯಪಾಲರ ಅಧಿಕಾರಕ್ಕೆ ಕಡಿವಾಣ ಹಾಕಿತು. ಯಾವುದೇ ಸರ್ಕಾರದ ಬಹುಮತವನ್ನು ರಾಜ್ಯಪಾಲರ ಭವನದಲ್ಲಲ್ಲ, ಬದಲಿಗೆ ವಿಧಾನಸಭೆಯ ಒಳಗೇ (Floor Test) ಸಾಬೀತುಪಡಿಸಬೇಕು ಎಂದು ತೀರ್ಪು ಕಡ್ಡಾಯಗೊಳಿಸಿತು. ಎಸ್‌ಆರ್ ಬೊಮ್ಮಾಯಿಯವರು ಅಧಿಕಾರ ಕಳೆದುಕೊಂಡಿದ್ದು ಒಂದು ರಾಜಕೀಯ ದುರಂತ. ಅವರ ವಿರುದ್ಧ ಪಿತೂರಿ ಮಾಡಿ ಕುರ್ಚಿ ಕಿತ್ತುಕೊಳ್ಳಲಾಗಿತ್ತು.

ವೀರೇಂದ್ರ ಪಾಟೀಲ್ ನಿರ್ಗಮನ; ಕಾಂಗ್ರೆಸ್‌ ಕಳೆದುಕೊಂಡಿದ್ದೆಷ್ಟು?

ಕರ್ನಾಟಕದ ರಾಜಕಾರಣದಲ್ಲಿ ಜಾತಿ ಸಮೀಕರಣವನ್ನು ಬದಲಿಸಿದ ಬಹುದೊಡ್ಡ ಘಟನೆ, ವೀರೇಂದ್ರ ಪಾಟೀಲ್ ಅವರ ನಿರ್ಗಮನ. 1990ರ ಅಕ್ಟೋಬರ್ ಆರಂಭದಲ್ಲಿ ಪಾಟೀಲರಿಗೆ ಭೀಕರ ಪಾರ್ಶ್ವವಾಯು (Stroke) ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದರು. ಅದೇ ಸಮಯದಲ್ಲಿ ದೇಶಾದ್ಯಂತ ರಾಮಜನ್ಮಭೂಮಿ ರಥಯಾತ್ರೆಯ ಕಿಡಿ ಹೊತ್ತಿಕೊಂಡಿದ್ದರಿಂದ ಕರ್ನಾಟಕದ ದಾವಣಗೆರೆ, ಚನ್ನಪಟ್ಟಣಗಳಲ್ಲಿ ಭೀಕರ ಕೋಮು ಗಲಭೆಗಳು ನಡೆದವು. ಮುಖ್ಯಮಂತ್ರಿಯವರು ಹಾಸಿಗೆ ಹಿಡಿದಿರುವುದರಿಂದ ಆಡಳಿತ ಕುಸಿದಿದೆ ಎಂದು ಬಂಡಾಯಗಾರರು ದೆಹಲಿಗೆ ದೂರು ನೀಡಿದರು. ಅಕ್ಟೋಬರ್ 3, 1990 ರಂದು ಬೆಂಗಳೂರಿಗೆ ಬಂದ ಕಾಂಗ್ರೆಸ್ ಅಧ್ಯಕ್ಷ ರಾಜೀವ್ ಗಾಂಧಿ, ಆಸ್ಪತ್ರೆಯಲ್ಲಿದ್ದ ಪಾಟೀಲರನ್ನು ಭೇಟಿ ಮಾಡಿ ಏರ್ಪೋರ್ಟ್ಗೆ ತೆರಳಿದರು. ಅಲ್ಲಿ ಮಾಧ್ಯಮಗಳ ಮುಂದೆ ನಿಂತು, “ಮುಂದಿನ 96 ಗಂಟೆಗಳಲ್ಲಿ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ” ಎಂದು ಏಕಪಕ್ಷೀಯವಾಗಿ ಘೋಷಿಸಿಬಿಟ್ಟರು.

ರಾಜೀವ್ ಗಾಂಧಿಯವರ ಈ ದಿಢೀರ್ ಮತ್ತು ಅವಮಾನಕಾರಿ ಘೋಷಣೆ ವೀರೇಂದ್ರ ಪಾಟೀಲರ ಸ್ವಾಭಿಮಾನವನ್ನು ಕೆರಳಿಸಿತು. ಆಸ್ಪತ್ರೆಯ ಹಾಸಿಗೆಯಲ್ಲಿದ್ದರೂ ಅವರು ಹೈಕಮಾಂಡ್ಗೆ ಶರಣಾಗದೆ ಸಾಂವಿಧಾನಿಕ ಸವಾಲು ಹಾಕಿದರು. ದೆಹಲಿಯಿಂದ ಬಂದ ಹೈಕಮಾಂಡ್ ದೂತರು ರಾಜೀನಾಮೆ ಪತ್ರಕ್ಕೆ ಸಹಿ ಕೇಳಿದಾಗ ಪಾಟೀಲರು ನಿರಾಕರಿಸಿದರು. “ನನ್ನನ್ನು ಆಯ್ಕೆ ಮಾಡಿದ್ದು ದೆಹಲಿ ನಾಯಕರಲ್ಲ, ಕರ್ನಾಟಕದ ಶಾಸಕರು ಮತ್ತು ಜನತೆ. ನನ್ನನ್ನು ತೆಗೆಯಬೇಕಿದ್ದರೆ ಶಾಸಕಾಂಗ ಪಕ್ಷದ ಸಭೆ ಕರೆದು ಅಲ್ಲಿ ಬಹುಮತ ಸಾಬೀತುಪಡಿಸಲು ಹೇಳಿ” ಎಂದು ಸವಾಲು ಹಾಕಿದರು. ತಾವು ಚೇತರಿಸಿಕೊಳ್ಳುತ್ತಿರುವುದಾಗಿ ಮತ್ತು ಅಸೆಂಬ್ಲಿಯಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧರಿರುವುದಾಗಿ ರಾಜ್ಯಪಾಲರಿಗೆ ಪತ್ರ ಬರೆದರು.

image 136

ಪಾಟೀಲರು ರಾಜೀನಾಮೆ ನೀಡದಿದ್ದಾಗ ಮತ್ತು ಶಾಸಕಾಂಗ ಸಭೆ ಕರೆಯುವುದು ತಡವಾದಾಗ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ನೆಪದಲ್ಲಿ ಕೇಂದ್ರದ ವಿ.ಪಿ. ಸಿಂಗ್ ಸರ್ಕಾರ ಮಧ್ಯಪ್ರವೇಶಿಸಿ ಅಕ್ಟೋಬರ್ 10, 1990 ರಂದು ರಾಷ್ಟ್ರಪತಿ ಆಳ್ವಿಕೆ ಹೇರಿತು. ಆ ಮೂಲಕ ವೀರೇಂದ್ರ ಪಾಟೀಲರ ಅಧಿಕಾರ ಕೊನೆಗೊಂಡಿತು. ನಂತರ ಅಕ್ಟೋಬರ್ 17 ರಂದು ರಾಷ್ಟ್ರಪತಿ ಆಳ್ವಿಕೆ ಹಿಂತೆಗೆದುಕೊಂಡು ಎಸ್. ಬಂಗಾರಪ್ಪ ಅವರನ್ನು ಸಿಎಂ ಮಾಡಲಾಯಿತು.

ಆಸ್ಪತ್ರೆಯ ಹಾಸಿಗೆಯಲ್ಲಿದ್ದ ಅಂತಹ ಧೀಮಂತ ನಾಯಕನನ್ನು ದೆಹಲಿ ಹೈಕಮಾಂಡ್ ನಡೆಸಿಕೊಂಡ ರೀತಿ ಇಡೀ ಲಿಂಗಾಯತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಬಿಂಬಿತವಾಯಿತು. ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ನ ಗಟ್ಟಿಯಾದ ವೋಟ್ ಬ್ಯಾಂಕ್ ಆಗಿದ್ದ ಲಿಂಗಾಯತ ಸಮುದಾಯವು ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ತಿರುಗಿಬಿದ್ದಿತು. ಕಾಂಗ್ರೆಸ್ನಿಂದ ದೂರಾದ ಲಿಂಗಾಯತ ಸಮುದಾಯಕ್ಕೆ ಅಂದು ಪರ್ಯಾಯವಾಗಿ ಕಂಡಿದ್ದು ಜನತಾ ದಳ ಮತ್ತು ಆಗಷ್ಟೇ ಬೆಳೆಯುತ್ತಿದ್ದ ಬಿಜೆಪಿ. ಲಿಂಗಾಯತ ಸಮುದಾಯವು ಬಿಜೆಪಿಯನ್ನು ತನ್ನ ಸಿದ್ಧಾಂತ ಹಾಗೂ ರಕ್ಷಣಾತ್ಮಕ ಪಕ್ಷವಾಗಿ ಸ್ವೀಕರಿಸಲು ಈ ರಾಜಕೀಯ ಪಲ್ಲಟವೇ ಪ್ರಮುಖ ಕಾರಣವಾಯಿತು ಎಂದು ಗುರುತಿಸಲಾಗುತ್ತದೆ.

ಅಧಿಕಾರ ಬಿಡುವಾಗ ಬಂಗಾರಪ್ಪ ಸವಾಲ್; ಮತ್ತೆ ಕಾಂಗ್ರೆಸ್ ಛಿದ್ರ!

ವೀರೇಂದ್ರ ಪಾಟೀಲರ ನಿರ್ಗಮನದ ನಂತರ, ಹಿಂದುಳಿದ ವರ್ಗಗಳ ನಾಯಕ ಎಸ್. ಬಂಗಾರಪ್ಪ ಕರ್ನಾಟಕದ ಮುಖ್ಯಮಂತ್ರಿ ಗದ್ದುಗೆ ಏರಿದ್ದರು. ಅವರ 2 ವರ್ಷಗಳ ಆಡಳಿತಾವಧಿ (ಅಕ್ಟೋಬರ್ 1990 – ನವೆಂಬರ್ 1992) ಅತ್ಯಂತ ವರ್ಣರಂಜಿತ, ಜನಪ್ರಿಯ ಯೋಜನೆಗಳಿಂದ ಕಂಗೊಳಿಸಿತು. ಆದರೆ ಭ್ರಷ್ಟಾಚಾರವನ್ನೂ ಮೆತ್ತಿಕೊಂಡಿತು.

ಈ ಲೇಖನ ಓದಿದ್ದೀರಾ?: ದೇವೇಗೌಡರ ಕೋಟೆಯಲ್ಲಿ ‘ಡಿಕೆಶಿ’ ಗುದ್ದಾಟ; ಒಕ್ಕಲಿಗ ನಾಯಕತ್ವ ಪಟ್ಟ ಸುಲಭವೇ?

ಬಂಗಾರಪ್ಪನವರ ಆಡಳಿತ ಶೈಲಿ ಏಕಪಕ್ಷೀಯವಾಗಿತ್ತು ಮತ್ತು ಅವರು ಸಚಿವರನ್ನು ಕಡೆಗಣಿಸುತ್ತಿದ್ದರು ಎಂಬ ಆರೋಪವಿತ್ತು. ಇದರಿಂದಾಗಿ ಅವರದೇ ಸಂಪುಟದಲ್ಲಿದ್ದ ಎಂ. ವೀರಪ್ಪ ಮೊಯ್ಲಿ ಮತ್ತು ಇತರ ಹಿರಿಯ ನಾಯಕರು ಬಂಗಾರಪ್ಪ ವಿರುದ್ಧ ಬಹಿರಂಗವಾಗಿ ಬಂಡಾಯವೆದ್ದರು. ದಿನನಿತ್ಯ ದೆಹಲಿಗೆ ಹೋಗಿ ಹೈಕಮಾಂಡ್ಗೆ ದೂರು ನೀಡಲಾರಂಭಿಸಿದರು. ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ 1991ರ ಕೊನೆಯಲ್ಲಿ ಬೆಂಗಳೂರಿನಲ್ಲಿ ಭೀಕರ ಗಲಭೆಗಳು ನಡೆದು ತಮಿಳು ಸಮುದಾಯದವರ ಮೇಲೆ ಹಲ್ಲೆಗಳು ನಡೆದವು. ಇದನ್ನು ನಿಯಂತ್ರಿಸುವಲ್ಲಿ ಬಂಗಾರಪ್ಪ ಸರ್ಕಾರ ವಿಫಲವಾಯಿತು ಎಂಬ ಆರೋಪ ಕೇಳಿಬಂದಿತು.

ಕೊನೆಗೆ, ಸ್ವಪಕ್ಷದ ಶಾಸಕರ ಭಾರಿ ವಿರೋಧ ಮತ್ತು ಹಗರಣಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ (ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್) ಬಂಗಾರಪ್ಪ ಅವರಿಗೆ ರಾಜೀನಾಮೆ ನೀಡುವಂತೆ ಕಟ್ಟುನಿಟ್ಟಿನ ಸಂದೇಶ ರವಾನಿಸಿತು. ಆದರೆ ಬಂಗಾರಪ್ಪ ಮೊದಲೇ ಬಂಡಾಯದ ಸ್ವಭಾವದರು. ಅಧಿಕಾರವನ್ನು ಅಷ್ಟು ಸುಲಭವಾಗಿ ತೊರೆಯಲಿಲ್ಲ. ರಾಜೀನಾಮೆ ನೀಡುವ ಮುನ್ನ ಅವರು ದೆಹಲಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತಮ್ಮನ್ನು ದುರುದ್ದೇಶಪೂರ್ವಕವಾಗಿ ಕೆಳಗಿಳಿಸಲಾಗುತ್ತಿದೆ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

image 137

ಬಂಗಾರಪ್ಪನವರು ತಾವೊಬ್ಬರೇ ಭ್ರಷ್ಟಾಚಾರದ ಆರೋಪದ ಮೇಲೆ ಇಳಿಯುತ್ತಿಲ್ಲ ಎಂಬುದನ್ನು ಸಾಬೀತುಪಡಿಸಲು ವಿಶಿಷ್ಟ ತಂತ್ರ ಹೂಡಿದರು. 1991ರ ಕಾವೇರಿ ನದಿ ನೀರಿನ ಗಜೆಟ್ ಅಧಿಸೂಚನೆಯನ್ನು ವಿರೋಧಿಸಿ ಬಂಗಾರಪ್ಪನವರು ಸುಗ್ರೀವಾಜ್ಞೆ ಹೊರಡಿಸಿದ್ದರು ಮತ್ತು ಕಾವೇರಿ ವಿಷಯದಲ್ಲಿ ಕೇಂದ್ರದ ನರಸಿಂಹ ರಾವ್ ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಿದ್ದರು. ರಾಜೀನಾಮೆ ನೀಡುವ ಸಂದರ್ಭದಲ್ಲಿ ಅವರು, “ನಾನು ಕಾವೇರಿ ನೀರಿಗಾಗಿ, ಕರ್ನಾಟಕದ ರೈತರ ಹಿತರಕ್ಷಣೆಗಾಗಿ ದೆಹಲಿ ವಿರುದ್ಧ ಹೋರಾಡಿದ್ದಕ್ಕೆ ನನ್ನನ್ನು ಬಲಿಪಶು ಮಾಡಲಾಗುತ್ತಿದೆ” ಎಂಬ ರಾಜಕೀಯ ಚರ್ಚೆಯನ್ನು ಮುನ್ನೆಲೆಗೆ ತಂದರು. ಇದು ಅವರಿಗೆ ಸಾರ್ವಜನಿಕ ವಲಯದಲ್ಲಿ ಸಹಾನುಭೂತಿ ತಂದುಕೊಟ್ಟಿತು.

ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ ಹೊರಬಂದರು. ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲು ಬಂಗಾರಪ್ಪ ಅವರು 1993 ರಲ್ಲಿ ‘ಕರ್ನಾಟಕ ಕಾಂಗ್ರೆಸ್ ಪಾರ್ಟಿ’ (KCP) ಎಂಬ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿದರು. 1994 ರ ವಿಧಾನಸಭಾ ಚುನಾವಣೆಯಲ್ಲಿ ಈ ಪಕ್ಷ ಸರಿಸುಮಾರು 10 ಸ್ಥಾನಗಳನ್ನು ಗೆದ್ದು, ಕಾಂಗ್ರೆಸ್ ಭೀಕರವಾಗಿ ಸೋತು ಕೇವಲ 34 ಸ್ಥಾನಗಳಿಗೆ ಕುಸಿಯುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತು. ಬಂಗಾರಪ್ಪನವರ ಬಂಡಾಯದ ನೇರ ಲಾಭವನ್ನು 1994ರ ಚುನಾವಣೆಯಲ್ಲಿ ಜನತಾ ದಳ (ಎಚ್. ಡಿ. ದೇವೇಗೌಡರ ನಾಯಕತ್ವದಲ್ಲಿ) ಪಡೆದುಕೊಂಡು ಭರ್ಜರಿಯಾಗಿ ಅಧಿಕಾರಕ್ಕೆ ಬಂದಿತು.

ದೇವೇಗೌಡರ ಉಚ್ಛ್ರಾಯ ಕಾಲಾವಧಿ

1994ರ ಚುನಾವಣೆಯಲ್ಲಿ ಕಾಂಗ್ರೆಸ್ ವಿಫಲವಾದರೆ, ಇತ್ತ ರಾಮಕೃಷ್ಣ ಹೆಗಡೆ ಮತ್ತು ಎಚ್. ಡಿ. ದೇವೇಗೌಡರ ನಾಯಕತ್ವದಲ್ಲಿ ಒಂದಾಗಿದ್ದ ಜನತಾ ದಳ ಭರ್ಜರಿ ಯಶಸ್ಸು ಗಳಿಸಿತು. ಜನತಾ ದಳ 115 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆಯಿತು. ಜನತಾ ದಳದ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದ ಎಚ್. ಡಿ. ದೇವೇಗೌಡ ಅವರು ಕರ್ನಾಟಕದ 15ನೇ ಮುಖ್ಯಮಂತ್ರಿಯಾಗಿ 11 ಡಿಸೆಂಬರ್ 1994 ರಂದು ಅಧಿಕಾರ ವಹಿಸಿಕೊಂಡರು. ಆದರೆ ರಾಷ್ಟ್ರರಾಜಕಾರಣದಲ್ಲಾದ ಪಲ್ಲಟಗಳ ಕಾರಣಕ್ಕೆ ಅವರು ಮುಖ್ಯಮಂತ್ರಿ ಸ್ಥಾನ ತ್ಯಜಿಸಿ ಪ್ರಧಾನಿ ಪಟ್ಟ ಹಿಡಿಯುವ ಅವಕಾಶ ದೊರೆಯಿತು. ಯುನೈಟೆಡ್ ಫ್ರಂಟ್‌ನ ನಾಯಕರಾಗಿ ಪ್ರಧಾನಿ ಪದವಿ ಹಿಡಿದ ದೇವೇಗೌಡರು, ರಾಜ್ಯದಲ್ಲಿ ತಮ್ಮ ಉತ್ತರಾಧಿಕಾರಿ ಇರಬೇಕು ಎಂದು ಬಯಸಿದರು. ಎಸ್.ಆರ್. ಬೊಮ್ಮಾಯಿ ಅವರಿಗೆ ಅವಕಾಶ ತಪ್ಪಿಸಿ, ತಮ್ಮ ವಿಶ್ವಾಸದ ಜೆ.ಎಚ್. ಪಟೇಲರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಿದರು. ಸಿದ್ದರಾಮಯ್ಯನವರನ್ನು ಉಪಮುಖ್ಯಮಂತ್ರಿ ಮಾಡಿದರು. ಇತ್ತ ರಾಮಕೃಷ್ಣ ಹೆಗಡೆಯವರನ್ನು ಪಕ್ಷದಿಂದ ಹೊರಹಾಕಲಾಯಿತು.

1999ರ ವೇಳೆಗೆ ಜೆ. ಎಚ್. ಪಟೇಲ್ ಅವರ ಸರ್ಕಾರ ಜನಪ್ರಿಯತೆ ಕಳೆದುಕೊಂಡಿತು. ದೇವೇಗೌಡ ಸಖ್ಯ ತೊರೆಯಲು ಪಟೇಲರು ಸಿದ್ಧವಾಗಿದ್ದರು. 1999 ರ ಸಾರ್ವತ್ರಿಕ ಚುನಾವಣೆ ಹತ್ತಿರ ಬಂದಾಗ ಜೆ. ಎಚ್. ಪಟೇಲ್ ಮತ್ತು ರಾಮಕೃಷ್ಣ ಹೆಗಡೆಯವರು ಒಟ್ಟಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದರು. ಹೀಗಾಗಿ ಜನತಾ ದಳ ಇಬ್ಭಾಗವಾಗಿ ಜೆಡಿ (ಯುನೈಟೆಡ್) (ಜೆಡಿಯು) ಅಸ್ತಿತ್ವಕ್ಕೆ ಬಂದಿತು. ಇದನ್ನು ತೀವ್ರವಾಗಿ ವಿರೋಧಿಸಿದ ದೇವೇಗೌಡರು, ಜಾತ್ಯತೀತ ತತ್ವದ ಆಧಾರದ ಮೇಲೆ ತಮ್ಮದೇ ಆದ ಪ್ರತ್ಯೇಕ ಪಕ್ಷ ‘ಜನತಾ ದಳ (ಜಾತ್ಯತೀತ)’ ಅಂದರೆ ಜೆಡಿಎಸ್ (JDS) ಸ್ಥಾಪಿಸಿದರು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಜೆಡಿಯು ಪಕ್ಷದಿಂದ ಸ್ಪರ್ಧಿಸಿದ ಜೆ. ಎಚ್. ಪಟೇಲರು ಸ್ವತಃ ತಮ್ಮ ಸ್ವಕ್ಷೇತ್ರವಾದ ಚನ್ನಗಿರಿಯಲ್ಲೇ ಸೋಲನ್ನು ಅನುಭವಿಸಬೇಕಾಯಿತು. ಅವರ ಜೆಡಿಯು ಪಕ್ಷ ಕೇವಲ 18 ಸೀಟುಗಳನ್ನಷ್ಟೇ ಗೆದ್ದಿತು. ಪ್ರತ್ಯೇಕವಾಗಿ ಸ್ಪರ್ಧಿಸಿದ ದೇವೇಗೌಡರ ಜೆಡಿಎಸ್ ಕೇವಲ 10 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಒಂದು ರಾಜಕೀಯ ನಿರ್ಧಾರವು ಕರ್ನಾಟಕದಲ್ಲಿ ಜನತಾ ದಳದ ಅಖಂಡ ಸಾಮ್ರಾಜ್ಯವನ್ನು ಶಾಶ್ವತವಾಗಿ ಅಂತ್ಯಗೊಳಿಸಿತು. ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾದರು. ಆದರೆ ಅವಧಿ ಪೂರ್ಣಗೊಳಿಸುವ ಮುನ್ನವೇ  ಚುನಾವಣೆಗೆ ಹೋದ ಕೃಷ್ಣ ಅವರು ಸೋಲು ಕಂಡರು. ಜೆಡಿಎಸ್‌ನ ಸರ್ವೋಚ್ಚ ನಾಯಕ ದೇವೇಗೌಡರು, ಕೃಷ್ಣ ಅವರನ್ನು ಅಧಿಕಾರದಿಂದ ದೂರವಿಟ್ಟು, ಕಾಂಗ್ರೆಸ್ ಜೊತೆಯಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಒಪ್ಪಿದರು. ಎಲ್ಲರಿಗೂ ಒಪ್ಪಿಗೆಯಾದ ಧರಂಸಿಂಗ್ ಮುಖ್ಯಮಂತ್ರಿಯಾದರು. ಆದರೆ ಕುಮಾರಸ್ವಾಮಿಯವರ ರಾಜಕೀಯ ಕ್ಷಿಪ್ರಕ್ರಾಂತಿಯಿಂದ ಸರ್ಕಾರ ಪತನವಾಯಿತು. “ನಾನು ಜೆಡಿಎಸ್ ನಾಯಕರನ್ನು (ದೇವೇಗೌಡ ಮತ್ತು ಕುಮಾರಸ್ವಾಮಿಯವರನ್ನು) ಸಂಪೂರ್ಣವಾಗಿ ನಂಬಿದ್ದೆ. ಮೈತ್ರಿಯ ಧರ್ಮವನ್ನು ಕೊನೆಯವರೆಗೂ ಪಾಲಿಸಿದೆ. ಆದರೆ ರಾಜಕಾರಣದಲ್ಲಿ ನಂಬಿಕೆಗೆ ಜಾಗವಿಲ್ಲ ಎಂಬುದನ್ನು ಈ ಘಟನೆ ನನಗೆ ಮತ್ತೊಮ್ಮೆ ಕಲಿಸಿದೆ. ಅಧಿಕಾರ ಬರುತ್ತದೆ, ಹೋಗುತ್ತದೆ; ಆದರೆ ನೈತಿಕತೆ ಮುಖ್ಯ” ಎಂದು ಮಾರ್ಮಿಕವಾಗಿ ನುಡಿದ ಧರಂ ಸಿಂಗ್ ಅವರು, ತಮಗೆ ದ್ರೋಹ ಮಾಡಿದ ಕುಮಾರಸ್ವಾಮಿ ಅವರ ವಿರುದ್ಧ ವೈಯಕ್ತಿಕವಾಗಿ ಎಲ್ಲೂ ಕಟುವಾಗಿ ಮಾತನಾಡದೆ, ಅತ್ಯಂತ ಸಮಾಧಾನಚಿತ್ತದಿಂದ ರಾಜೀನಾಮೆ ಕೊಟ್ಟರು. ರೆಸಾರ್ಟ್ ರಾಜಕಾರಣಕ್ಕೆ ಅಡಿಗಲ್ಲು ಹಾಕಿದ ಕುಮಾರಸ್ವಾಮಿಯವರು ಹೊಸ ರಾಜಕೀಯ ಪರಂಪರೆಗೆ ನಾಂದಿ ಹಾಡಿಬಿಟ್ಟರು. ಅಧಿಕಾರ ಹಸ್ತಾಂತರದ ಕೆಸರೆರಚಾಟದಲ್ಲಿ ಕರ್ನಾಟಕ ರಾಜಕಾರಣ ಮತ್ತೊಂದು ಪರ್ವ ಆರಂಭವಾಗಿದ್ದು ಇಲ್ಲಿಂದಲೇ. ಕಾಂಗ್ರೆಸ್ಸೇತರ ಸರ್ಕಾರದ ಅವಧಿಯಲ್ಲಿ ತಕ್ಕಮಟ್ಟಿಗೆ ಉಳಿದಿದ್ದ ಮೌಲ್ಯಯುತ ರಾಜಕಾರಣ ಮುಂದಿನ ದಿನಗಳಲ್ಲಿ ಅಧಃಪತನದತ್ತ ಹೊರಳಿತು. ‘ಅಧಿಕಾರ ಹಸ್ತಾಂತರ’ ಎಂಬುದು ಸ್ವಾರ್ಥ ಲಾಲಸೆಯ ಪ್ರತಿರೂಪವಾಗಿ ಹೊಮ್ಮಿತು.

(ಮುಂದುವರಿಯುತ್ತದೆ..)

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ʼಜೆನ್‌ ಝಿʼ ಎಂಬ ಸಮತಾ ನಿಲುವು

ಸುಪ್ರಿಂಕೋರ್ಟಿನ ಮುಖ್ಯಸ್ಥರು ಇದೀಗ ಮತ್ತೊಂದು ಹೇಳಿಕೆಯ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿ...

ನಿದ್ರೆಯಲ್ಲೂ ಮಿದುಳಿಗೆ ಮಸಾಜ್‌! ಮಾತ್ರೆಯಿಲ್ಲದೆ ಗಾಢ ನಿದ್ರೆ ತರಬಲ್ಲದೇ ಹೊಸ ತಂತ್ರಜ್ಞಾನ?

ಒತ್ತಡದ ಬದುಕಿನಲ್ಲಿ ನೆಮ್ಮದಿಯ ನಿದ್ರೆ ಎನ್ನುವುದೇ ಹಲವರ ಕನಸು. ನಿದ್ರೆಗಾಗಿ ಮಾತ್ರೆಗಳ...

ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು...