12ನೇ ಶತಮಾನದ ಶರಣರು ಕಾಯಕವನ್ನೇ ತಮ್ಮ ಕ್ರಿಯೆ, ಅರಿವಿನ ಸತ್ಯವನ್ನಾಗಿಸಿಕೊಂಡಿದ್ದರು. ಕಾಯಕ ಸಂಸ್ಕೃತಿಯ ಮೂಲಕ ವೃತ್ತಿ ಮತ್ತು ವ್ಯಕ್ತಿ ಗೌರವಗಳಿಗೆ ಸಾಮಾಜಿಕ ಮನ್ನಣೆ ಸಿಗುವಂತೆ ಮಾಡಿದವರೇ ಶ್ರಮ ಸಂಸ್ಕೃತಿಯ ವಚನಕಾರರು ಎಂದು ಹಸ್ತಪ್ರತಿಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ವೀರೇಶ್ ಬಡಿಗೇರ ಅಭಿಪ್ರಾಯಪಟ್ಟರು.
ವಿಜಯನಗರ ಜಿಲ್ಲೆಯ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ ಫೆಬ್ರವರಿ 25ರಂದು ಹಳೆಯ ಹೊನ್ನು-105ನೇ(ಹಳಗನ್ನಡ ಸಾಹಿತ್ಯ ಚಿಂತನ ವೇದಿಕೆ) ಕಾರ್ಯಕ್ರಮದಡಿ ನಡೆದ ‘ಕನ್ನಡಿ ಕಾಯಕದ ಶರಣ-ಶರಣೆಯರು’ ಎಂಬ ವಿಷಯದ ಕುರಿತು ಮಾತನಾಡಿದರು.

“ಸಾಮಾನ್ಯವಾಗಿ ಶರಣರು ತಮ್ಮ ಹೆಸರಿಗೂ ಮೊದಲು ಕಾಯಕವನ್ನು ಪ್ರಸ್ತಾಪಿಸುವಲ್ಲಿಯೇ ವ್ಯಕ್ತಿ ಮತ್ತು ವೃತ್ತಿ ಗೌರವವನ್ನು ಎತ್ತಿ ಹಿಡಿಯುತ್ತಾರೆ. ಕಾಯಕವೇ ಕೈಲಾಸ ಎನ್ನುವ ಶರಣರ ನಂಬಿಕೆಯ ಮೂಲವೇ ಇದಾಗಿತ್ತು” ಎಂದು ಹಸ್ತಪ್ರತಿಶಾಸ್ತ್ರ ವಿಭಾಗದ ಸಂಶೋಧನ ವಿದ್ಯಾರ್ಥಿ ಆರ್ ಕಾವೇರಿ ವಿವರಿಸಿದರು.
“ಕನ್ನಡಿ ಕಾಯಕವೆಂದರೆ ಅಲಂಕಾರ ಮಾಡುವ ಕಾಯಕ, ಕನ್ನಡಿ ತಯಾರಿಸುವ ಕಾಯಕ ಅಥವಾ ಕ್ಷೌರಿಕ ಕಸುಬು ಮಾಡುವ ಕಾಯಕ. ಮನಸ್ಸಿನ ಶುದ್ಧತೆಯನ್ನು ಕನ್ನಡಿಯ ಶುಭ್ರತೆಯೊಂದಿಗೆ ಹೇಗೆ ಕಾಪಾಡಿಕೊಳ್ಳಬೇಕೆಂಬುದನ್ನು ಪರಿಚಯಿಸುವುದೂ ಆಗಿದೆ. ಪ್ರಮುಖವಾಗಿ 7 ಮಂದಿ ಶರಣರನ್ನು ಇಲ್ಲಿ ನೋಡುವುದಾದರೆ ಹಡಪದ ಅಪ್ಪಣ್ಣ, ಹಡಪದ ಲಿಂಗಮ್ಮ, ಹಡಪದ ರೇಚಣ್ಣ, ಅಮ್ಮಿಗಿದೇವಯ್ಯ, ಕನ್ನಡಿ ಕಾಯಕದ ರೇವಮ್ಮ, ಕನ್ನಡಿ ಕಾಯಕದ ತಿಮ್ಮಪ್ಪ ಇವರುಗಳೇ ಉದಾಹರಣೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುಂಜಾಗೃತಾ ಕ್ರಮ ವಹಿಸಬೇಕು: ಕುಮಾರ್ ನಾಯ್ಕ
ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸಾಧನ ಮತ್ತು ಉಪಕರಣಗಳು ಮನುಷ್ಯನ ಉಪಜೀವನಕ್ಕೆ ಬೇಕಾದ ಸಂಸ್ಕೃತಿಯ ಪ್ರತಿಬಿಂಬಗಳು. ದೇಹ ಮತ್ತು ಆತ್ಮಗಳ ಅಭೇದತೆ ಕ್ರಿಯೆ ಮತ್ತು ಅರಿವಿನ ದಾರಿ. ಇವುಗಳಲ್ಲಿನ ಭೇದವು ಮನುಷ್ಯನ ಸಂಪೂರ್ಣ ಶ್ರಮವನ್ನು ನಾಶಮಾಡಿ ಅಧೀನತೆಗೆ ತಳ್ಳುತ್ತದೆ. ವೃತ್ತಿ ಮತ್ತು ವ್ಯಕ್ತಿ ಗೌರವವನ್ನು ಎತ್ತಿಹಿಡಿಯುವ ಮೂಲಕ ಶರಣರು ಬೆವರಿನ ಬದುಕಿಗೆ ಸಾಮಾಜಿಕ ಮೌಲ್ಯ ಸಿಗುವಂತೆ ಮಾಡಿದರು” ಎಂದು ಹೇಳಿದರು.
ವಿಭಾಗದ ಪ್ರಾಧ್ಯಾಪಕ ಡಾ. ಎಸ್ ಆರ್ ಚನ್ನವೀರಪ್ಪ, ಹಳೆಯ ಹೊನ್ನು ಕಾರ್ಯಕ್ರಮದ ಸಂಚಾಲಕ ಲಿಂಗರಾಜ ಯು ಇದ್ದರು.
ಸಂಶೋಧನಾ ವಿದ್ಯಾರ್ಥಿಗಳಾದ ಸುಮ ಕಮ್ಮಾರ ಪ್ರಾರ್ಥಿಸಿದರು, ಮಧುಕರ ಹೆಚ್ ಸ್ವಾಗತಿಸಿದರು, ರವಿ ಕಂಬಳಿ ವಂದಿಸಿದರು, ಸುನೀಲ್ ಐ ಎಸ್ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.