ಕರಡಿ ಮತ್ತು ಹಂದಿಗಳು ನಿರಂತರವಾಗಿ ದಾಳಿ ಮಾಡುತ್ತಿದ್ದು, ಲಗ್ಗೆ ಇಡುತ್ತಿರುವುದಲ್ಲದೆ, ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಸರ್ಕಲ್ ಬಳಿ ಏಕಾಏಕಿ ರಾತ್ರಿ ಕರಡಿ ರಾಜಾರೋಷವಾಗಿ ಕಾಣಿಸಿಕೊಂಡಿರುವುದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.
ತಾಲೂಕಿನ ಹುಲಿಕುಂಟೆ, ಅಮಲಾಪುರ, ಕರಡಿಹಳ್ಳಿ, ನರಸಿಂಹನಗಿರಿ, ಕಾಟ್ರಹಳ್ಳಿ, ಕರಡಿಹಳ್ಳಿ, ಗೆದಲ್ಲಗಟ್ಟೆ ಗ್ರಾಮದಲ್ಲಿ ನಿರಂತರವಾಗಿ ಕರಡಿಗಳು ಕಾಣಿಸಿಕೊಳ್ಳುತ್ತಿದ್ದು, ಹುಲಿಕುಂಟೆ ಗ್ರಾಮದಲ್ಲಿ ಜೋಳದ ಜಮೀನುಗಳಿಗೆ ನುಗ್ಗಿ ಅಪಾರವಾದ ಬೆಳೆ ನಾಶಪಡಿಸಿರುವುದು ಕಂಡುಬಂದಿದೆ.
“ಗ್ರಾಮದ ಇಂದ್ರಮ್ಮ, ಮಲ್ಲಿಯಪ್ಪ, ಕೆಂಗಪ್ಪ, ಸಿದ್ದಪ್ಪ, ನೀರುಗಂಟೆತಿಪ್ಪೆಸ್ವಾಮಿ, ತಲವಾರು ಮಾರಪ್ಪ, ಸೂಲದಳ್ಳಿ ರಾಮಪ್ಪ, ಶಿವಣ್ಣ, ನಾಗೇಂದ್ರಪ್ಪ ಅವರ ಜಮೀನಿನಲ್ಲಿ ಬೆಳೆದಿದ್ದ ಜೋಳದ ಬೆಳೆಯು ಕಾಳುಗಟ್ಟುವ ಹಂತದಲ್ಲಿತ್ತು. ಈ ಸಂದರ್ಭದಲ್ಲಿ ಕರಡಿಗಳ ಗುಂಪು ದಾಳಿ ಮಾಡಿ ಸಂಪೂರ್ಣ ಹಾಳು ಮಾಡಿದ್ದು, ಅಪಾರ ನಷ್ಟವಾಗಿದೆ” ಎಂದು ಸ್ಥಳೀಯ ನಿವಾಸಿ ಅನಿಲ್ ಕುಮಾರ್ ತಿಳಿಸಿದರು.
“ಹಲವು ರೈತರ ಜಮೀನುಗಳಿಗೆ ಕರಡಿಗಳು ಮತ್ತು ಕಾಡು ಹಂದಿಗಳು ದಾಳಿ ಮಾಡಿ ಬೆಳೆ ನಾಶ ಪಡಿಸುತ್ತಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಬೆಳೆ ರಕ್ಷಣೆಗೆ ರಾತ್ರಿ ಹೊತ್ತು ಕಾವಲಿಗೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ನಿರಾಶ್ರಿತರಿಗೆ ನ್ಯಾಯ ಸಿಗದಿದ್ದರೆ ಹೋರಾಟ ಅನಿವಾರ್ಯ : ಕರಿಯಪ್ಪ ಗುಡಿಮನಿ
“ನಷ್ಟ ಪರಿಹಾರ ಹಾಗೂ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮಕೈಗೊಳ್ಳಬೇಕು. ಈಗಾಗಲೇ ಹಾನಿಯಾಗಿರುವ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಹಿತ ದೃಷ್ಟಿಯಿಂದ ಅರಣ್ಯ ಇಲಾಖೆ ಸೂಕ್ತ ಕ್ರಮ ಹಾಗೂ ಪರಿಹಾರ ಒದಗಿಸಬೇಕು” ಎಂದು ರೈತರ ಪರವಾಗಿ ಆಗ್ರಹಿಸಿದರು.