ಕೇಂದ್ರ, ರಾಜ್ಯ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ) ಬಣ ವಿಜಯಪುರ ಜಿಲ್ಲಾ ಸಮಿತಿಯಿಂದ ಕಪ್ಪು ಬಟ್ಟೆ ಧರಿಸಿಕೊಂಡು ಡಾ ಬಿ.ಆರ್ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲರಾದ ಚಂದ್ರಕಾಂತ ಸಿಂಗೆ ಮಾತನಾಡಿ, “ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿದ್ದ ಬಿಜೆಪಿ ಸರ್ಕಾರವನ್ನು ಕಿತ್ತೆಸೆದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ದಲಿತರು ಸೇರಿದಂತೆ ಹಿಂದುಳಿದ ವರ್ಗಗಳ ಪಾತ್ರ ಬಹುಮುಖ್ಯವಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಸಾವಿರಾರು ಕೋಟಿ ಹಣವನ್ನು ಇತರೆ ಕೆಲಸಕ್ಕೆ ಬಳಕೆ ಮಾಡಿದೆ. ಇದು ಖಂಡನೀಯ” ಎಂದರು.

ದೀನ ದಲಿತರ, ಹಿಂದುಳಿದವರ, ನೊಂದವರ ಧ್ವನಿಯಾಗಿ ಸಂವಿಧಾನದ ಆಶಯಗಳ ಪರ ಕಾಂಗ್ರೆಸ್ ಪಕ್ಷವಿದೆ ಎಂದು ಹೇಳಿದ್ದನ್ನು ಈಗ ಮರೆತಿದೆ. ಪರಿಶಿಷ್ಟ ಜಾತಿ ಮತು ಪರಿಶಿಷ್ಟ ಪಂಗಡಗಳ ನಿಗಮಗಳಲ್ಲಿ 2018-19 ನೇ ಸಾಲಿನಿಂದ ಇಲ್ಲಿಯವರೆಗೆ ಯಾವುದೇ ಭೂ ಒಡೆತನದ ಯೋಜನೆಯಡಿ ಅನೇಕ ವರ್ಷಗಳಿಂದ ಅರ್ಜಿ ಸಲ್ಲಿಸದ್ದರೂ ಕೂಡ ಫಲಾನುಭವಿಗಳ ಆಯ್ಕೆ ಮಾಡುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ವಿಫಲವಾಗಿವೆ ಆರೋಪಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ 24 ಸಾವಿರ ಲಕ್ಷ ಕೋಟಿ ಹಣನ್ನು ಸಿ.ಸಿ ರಸ್ತೆ ಮತ್ತು ಸಮುದಾಯ ಭವನಗಳಂತಹ ಕಾಮಗಾರಿಗಳಿಗೆ ಬಳಸಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ. ಮೀಸಲು ಕ್ಷೇತ್ರಗಳಿಂದ ಆಯ್ಕೆಯಾದ ಶಾಸಕರುಗಳು ಮತ್ತು ಸಚಿವರುಗಳು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸುತ್ತದೆ ಎಂದರು.
ಜಿಲ್ಲಾ ಸಂಘಟನಾ ಸಹ ಸಂಚಾಲಕರಾದ ಚೆನ್ನು ಕಟ್ಟಿಮನಿ ಮಾತನಾಡಿ, “ದೀನ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಕೃಪಾಕಟಾಕ್ಷದಿಂದ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯನವರ ರಾಜ್ಯ ಕಾಂಗ್ರೆಸ್ ಸರ್ಕಾರ, ಹತ್ತಿದ ಏಣಿಯನ್ನು ಒದೆಯುವ ಕೆಲಸಕ್ಕೆ ಕೈ ಹಾಕಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅನುದಾನವನ್ನು ಅನ್ಯ ಕಾಮಗಾರಿಗಳಿಗೆ ಬಳಸಿದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ” ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಇದನ್ನು ಓದಿದ್ದೀರಾ? ತುಂಗಭದ್ರಾ ಕ್ರಸ್ಟ್‌ಗೇಟ್ | ಕಳಪೆ ನಿರ್ವಹಣೆಗೈದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ: ರೈತ ಮುಖಂಡ ಬಸವರಾಜಪ್ಪ
ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗೀಯ ಸಂಚಾಲಕರಾದ ರಾಹುತ ತಳಕೇರಿ, ಹುಯೋಗಿ ತಳ್ಳೋಳ್ಳಿ, ಗುರುರಾಜ ಗುಡಿಮನಿ, ಸಂತೋಷ ತಳಕೇರಿ, ಈಶ್ವರ ಛಲವಾದಿ, ಈಶ್ವರ ಬಡಿಗೇರ, ಬಸವರಾಜ ತಳಕೇರಿ, ನಾಗೇಶ ಕಟ್ಟಿಮನಿ, ಗಂಗಾಧರ ಆರ್ಯರ, ದೇವೇಂದ್ರ ಹಾದಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

