ವಿಜಯಪುರ ನಗರದಲ್ಲಿ ಎರಡು ದಿನಗಳ ಹಿಂದೆ ರೇಂಜರ್ ಸ್ವಿಂಗ್ ತೊಟ್ಟಿಲಿನಿಂದ ಕೆಳಗಡೆ ಬಿದ್ದು ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆಯ ಕೊನೆ ಕ್ಷಣಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ಇದರ ದೃಶ್ಯಗಳು ನೋಡುಗರನ್ನು ಬೆಚ್ಚಿ ಬೀಳಿಸುವಂತಿವೆ.
ವಿಜಯಪುರದ ನವಭಾಗ್ ರಸ್ತೆಯಲ್ಲಿರುವ ಫಿಶ್ ಟನಲ್ ಎಕ್ಸ್ ಪೋದಲ್ಲಿ ಅಕ್ಟೋಬರ್ 20ರ ಸಂಜೆ ಸಂಭವಿಸಿದ ಈ ಅವಘಡದಲ್ಲಿ ನಿಖಿತಾ ಅರವಿಂದ ಬಿರಾದಾರ (21) ಎಂಬ ಯುವತಿ ಮೃತಪಟ್ಟಿದ್ದರು.
ನಿಖಿತಾ ಹಾಗೂ ಮತ್ತಿಬ್ಬರು ಗೆಳೆಯತಿಯರು ಸೇರಿ ತಲೆ ಕೆಳಗಾಗಿ ತೂಗಾಡಿಸುವ ರೇಂಜರ್ ಸ್ವಿಂಗ್ ತೊಟ್ಟಿಲಿನಲ್ಲಿ ಕುಳಿತು ಆಟವಾಡುತ್ತಿದ್ದರು. ಇದೀಗ ಯುವತಿಯ ಪೋಷಕರ ಮೊಬೈಲ್ ನಲ್ಲಿ ಅಂದಿನ ಘಟನೆಯ ಕೊನೆ ಕ್ಷಣಗಳು ಸೆರೆಯಾಗಿರುವುದು ಬೆಳಕಿಗೆ ಬಂದಿದೆ.

ತೊಟ್ಟಿಲಿನಲ್ಲಿ ಕುಳಿತಿದ್ದಾಗ ನಿಖಿತಾ ಅವರಿಗೆ ಹಾಕಿದ್ದ ಸೇಫ್ಟಿ ಬೆಲ್ಟ್ ಸಡಿಲಗೊಂಡಿದೆ. ಆಗ ತೊಟ್ಟಿಲು ತಲೆ ಕೆಳಗೆ, ಮೇಲೆ ಮಾಡಿ ತೂಗುತ್ತಿರುವವಾಗಲೇ ಭಯದಿಂದ ಚೀರಾಟ ಮಾಡಿದ್ದಾರೆ. ಈ ವೇಳೆ, ನಿಖಿತಾ ತಾಯಿ ಗೀತಾ ಕೂಡ ರೇಂಜರ್ ಸ್ವಿಂಗ್ ಯಂತ್ರ ನಿಲ್ಲಿಸುವಂತೆ ಆಪರೇಟರ್ ಬಳಿ ಪದೇ ಪದೇ ಕೇಳಿಕೊಂಡಿದ್ದಾರೆ. ಆದರೂ, ಯಂತ್ರವನ್ನು ಆಪರೇಟರ್ ನಿಲ್ಲಿಸಿಲ್ಲ. ಇದರಿಂದ ನಿಖಿತಾ ಕೆಳಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಫಿಶ್ ಟನಲ್ ಎಕ್ಸ್ಪೋಗೆ ಬಂದಿದ್ದ ಜನರು ಸಹ ಓಡಿ ಬಂದಿರುವ ದೃಶ್ಯಗಳು ಮೊಬೈಲ್‌ನಲ್ಲಿ ದಾಖಲಾಗಿವೆ.
ಆದರೆ, ಕೆಳಗಡೆ ಬಿದ್ದ ರಭಸಕ್ಕೆ ನಿಖಿತಾ ಅವರ ತಲೆ ಮತ್ತು ಕಾಲುಗಳಿಗೆ ತೀವ್ರವಾಗಿ ಪೆಟ್ಟಾಗಿತ್ತು. ನಂತರದಲ್ಲಿ ಪೋಷಕರೇ ಆಟೋದಲ್ಲಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅದೇ ದಿನ ಚಿಕಿತ್ಸೆ ಫಲಕಾರಿಯಾಗದೆ ನಿಖಿತಾ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಕಳಪೆ ಸೇಫ್ಟಿ ಬೆಲ್ಟ್ ಕಾರಣದಿಂದಲೇ ಈ ದುರಂತ ನಡೆದಿದೆ ಎಂದು ಆರೋಪಿಸಲಾಗಿದೆ.
ಈ ಘಟನೆಯ ಸಂಬಂಧ ಫಿಶ್ ಟನಲ್ ಎಕ್ಸ್ಪೋ ಮ್ಯಾನೇಜರ್, ಆಪರೇಟರ್ಸ್ ಹಾಗೂ ಇತರರ ವಿರುದ್ಧ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ, ಆಪರೇಟರ್ ಮತ್ತು ಕ್ಯಾಶಿಯರ್ ಸೇರಿದಂತೆ ಈವರೆಗೆ ಒಟ್ಟು ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
