ಕೂಲಿ ಸಿಗುವ ಆಸೆಗಾಗಿ ತೆಂಗಿನಮರಕ್ಕೆ ಏರಿದ್ದ ಯುವಕನೋರ್ವ ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು 21 ವರ್ಷದ ಅವಿವಾಹಿತ ಯುವಕ ಸಂತೋಷ ಶರಣಪ್ಪ ವಾಲಿಕಾರ ಎಂದು ಗುರುತಿಸಲಾಗಿದೆ.
ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಭಾಗ್ಯಾ ಮಹೇಶ ಮುರಾಳ ಎನ್ನುವವರ ಮನೆಯ ಮುಂದೆ ಇದ್ದ ಭಾರಿ ಎತ್ತರದ ತೆಂಗಿನ ಮರ ಏರಿ ತೆಂಗಿನಕಾಯಿ ಮತ್ತು ಒಣಗಿದ ಗರಿ ಕೆಳಗೆ ಇಳಿಸುವಾಗ ಮೇಲಿಂದ ಜಾರಿ ನೆಲಕ್ಕೆ ಬಿದ್ದು ಯುವಕ ಸಂತೋಷ ಮೃತಪಟ್ಟಿದ್ದಾನೆ.
ಸಂತೋಷ ನೆರಬೆಂಚಿ ಗ್ರಾಮದವನಾಗಿದ್ದು, ತನ್ನೂರಲ್ಲೇ ಕುರಿ ಕಾಯುತ್ತಿದ್ದ. ತೆಂಗಿನ ಮರ ಸ್ವಚ್ಛಗೊಳಿಸಿದರೆ ಕೂಲಿ ಸಿಗುತ್ತದೆ ಎನ್ನುವ ಆಸೆಗೆ ಬಿದ್ದು ತನ್ನೂರಿನಿಂದ 10 ಕಿಮಿ ದೂರದಲ್ಲಿರುವ ಕವಡಿಮಟ್ಟಿಗೆ ಬಂದಿದ್ದ. 4-5 ಮನೆಗಳ ಮುಂದಿನ ತೆಂಗಿನ ಮರ ಸ್ವಚ್ಛಗೊಳಿಸಿದ್ದ ಈತ ಮುರಾಳ ಅವರ ಮನೆಯ ಮುಂದಿದ್ದ ಬಹಳಷ್ಟು ಎತ್ತರದ ಮರ ಏರಿದ್ದ. ಎಲ್ಲರೂ ನೋಡುತ್ತಿದ್ದಂತೆಯೇ ಅಂದಾಜು 50-60 ಅಡಿ ಎತ್ತರದಿಂದ ಆಯತಪ್ಪಿ ರಸ್ತೆಯ ಮೇಲೆ ಬಿದ್ದಿದ್ದಾನೆ. ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆ ಬೆಳಗ್ಗೆ ನಡೆದಿದ್ದರೂ ರಾತ್ರಿ 8.30 ಗಂಟೆಯಾದರೂ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವ ಪ್ರಕ್ರಿಯೆ ನಡೆದಿತ್ತು. ಎಫ್ಐಆರ್ ದಾಖಲಾಗದೆ ಶವದ ಮರಣೋತ್ತರ ಪರೀಕ್ಷೆ ನಡೆಯುವುದಿಲ್ಲ. ಹೀಗಾಗಿ ರಾತ್ರಿಯಾದರೂ ಶವ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿಯೇ ಅನಾಥವಾಗಿ ಇತ್ತು. ಎಫ್ಐಆರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ರಾತ್ರಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಇದನ್ನು ಓದಿದ್ದೀರಾ? ರಾಜ್ಯೋತ್ಸವ ಪ್ರಶಸ್ತಿಗೆ ‘ಮಲಹೊರುವವರ ಯೋಗ್ಯತೆ’ ಬಗ್ಗೆ ಪ್ರಶ್ನೆ: ವಿವಾದದ ಕಿಡಿ ಹೊತ್ತಿಸಿದ ನಾಗೇಶ್ ಹೆಗಡೆ ಪೋಸ್ಟ್
ಘಟನೆಗೆ ಸಂಬಂಧಿಸಿ ಮೃತ ಸಂತೋಷನ ತಂದೆ ಶರಣಪ್ಪ ಅಡಿವೆಪ್ಪ ವಾಲಿಕಾರ ಅವರು ಕವಡಿಮಟ್ಟಿಯ ಪ್ರಶಾಂತ ಮಹೇಶ ಮುರಾಳ, ಭಾಗ್ಯ ಮಹೇಶ ಮುರಾಳ, ಪವಿತ್ರಾ ಮಹೇಶ ಮುರಾಳ, ಉಮೇಶ ಸಿದ್ರಾಮಪ್ಪ ಮುರಾಳ, ಪರಪ್ಪ ಸಿದ್ರಾಮಪ್ಪ ಮುರಾಳ ಇವರು ಸಂತೋಷನನ್ನು ಎತ್ತರವಾದ ತೆಂಗಿನ ಮರ ಏರಲು ಒತ್ತಾಯಿಸಿ ನನ್ನ ಮಗನ ಸಾವಿಗೆ ಕಾರಣರಾಗಿದ್ದಾರೆ ಎಂದು ಲಿಖಿತ ದೂರು ನೀಡಿದ್ದಾರೆ. ಅಲ್ಲದೇ, ಕೆಲವು ಸ್ಥಳೀಯ ರಾಜಕೀಯ ವ್ಯಕ್ತಿಗಳಿಂದ ನನಗೆ ಬೆದರಿಕೆ ಇರುವುದರಿಂದ ಸೂಕ್ತ ರಕ್ಷಣೆ ನೀಡಬೇಕೆಂದು ಪೊಲೀಸರನ್ನು ಕೋರಿದ್ದಾರೆ.
