ಜಾನಪದ ದಿಗ್ಗಜ ಕರ್ನಾಟಕ ಜಾನಪದ ರತ್ನ ಡಾ. ಸಿಂಪಿ ಲಿಂಗಣ್ಣನವರ ಜನ್ಮ ದಿನಾಚರಣೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಆಚರಿಸುತ್ತಿರುವುದು ಹೆಮ್ಮೆ ಎನಿಸುತ್ತಿದೆ ಎಂದು ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಅಭಿಪ್ರಾಯಪಟ್ಟರು.
ವಿಜಯಪುರ ಜಿಲ್ಲೆ ಚಡಚಣ ಪಟ್ಟಣದಲ್ಲಿರುವ ಲಿಂಗಣ್ಣನವರ ಸಮಾಧಿಗೆ ಅವರ 119ನೇ ಜನ್ಮ ದಿನದ ಅಂಗವಾಗಿ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು, ನವೋದಯ ಕಾಲದ ಪ್ರಮುಖ ಸಾಹಿತಿಗಳು ಹಾಗೂ ಜಾನಪದ ತಜ್ಞರಾಗಿ ರಾಜ್ಯದ ಗಮನ ಸೆಳೆದರು. ಶ್ರೇಷ್ಠ ಶಿಕ್ಷಕರು ಮಧುರಚೆನ್ನರ ಒಡನಾಡಿಗಳು ಹಾಗೂ ಅರವಿಂದರ ಭಕ್ತರಾಗಿದ್ದರು.
ಇವರು ಸಂಗ್ರಹಿಸಿದ ಗರತಿ ಹಾಡು, ಜೀವನ ಸಂಗಾತಿ ಅಂತಹ ಜನಪದ ಹಾಡುಗಳ ಕೃತಿಗಳು ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯ ಅನೇಕ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕೋಶಾಧ್ಯಕ್ಷ ಸಂಗಮೇಶ ಮೇತ್ರಿ ಮಾತನಾಡಿ, ಸಿಂಪಿ ಲಿಂಗಣ್ಣ ಜಾನಪದ ಸಂಶೋಧಕರಾಗಿ, ಕವಿಗಳಾಗಿ, ಪ್ರಬಂಧಕಾರ ಹಾಗೂ ನಾಟಕಕಾರ ರಾಜ್ಯಕ್ಕೆ ಪರಿಚಿತರಾಗಿದ್ದರು. 1993ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಜರುಗಿದ 62ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಾಕ್ಷರಾಗಿದ್ದರು. ಗಡಿನಾಡಿನ ಜಾನಪದ ಭೀಷ್ಮರಾಗಿದ್ದ ಅವರು ಜಾನಪದ ಸಾಹಿತ್ಯಕ್ಕೆ ಘನತೆ ತಂದು ಕೊಟ್ಟ ಮಹಾನ ಚೇತನ ಎಂದರು.
ಚಡಚಣ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಪ್ಪ ಮಾನೆ ಮಾತನಾಡಿ, ಇಂದು ಫೆಬ್ರುವರಿ 10 ಡಾ. ಸಿಂಪಿ ಲಿಂಗಣ್ಣ ನವರ ಜನ್ಮದಿನ, ಇವರು ಮಧುರಚೆನ್ನರ ಜೊತೆ ಕೂಡಿ ಸಂಗ್ರಹಿಸಿದ ಗರತಿಹಾಡುಗಳ ಗ್ರಂಥ ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಆಚಾರ್ಯ ಕೃತಿಯಾಗಿ ನಿಲ್ಲುತ್ತದೆ. ಸಿಂಪಿ ಲಿಂಗಣ್ಣ ಅವರು ಜಾನಪದ ಕ್ಷೇತ್ರದಲ್ಲಿ ನೂರಾರು ಕೃತಿಗಳ ಕೊಡುಗೆ ನೀಡಿದ್ದಾರೆ ಎಂದರು.
ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ, ಸಿಂಪಿ ಲಿಂಗಣ್ಣ ಅವರ ಜೀವನ ಚರಿತ್ರೆ ಕುರಿತು ಮಾತನಾಡಿದರು. ಚಡಚಣ ಸಾಹಿತಿಗಳಾದ ವಿದ್ಯಾ ಕಲ್ಯಾಣಶೆಟ್ಟಿ ಅವರು ಮೊದಲ ಬಾರಿಗೆ ಜಾನಪದ ಲಾವಣಿಗಳ ಕುರಿತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿ ಪ್ರಮುಖರಾದವರು ಎಂದರು.
ವೇದಿಕೆಯಲ್ಲಿ ಚಡಚಣ ಅಂಜುಮನ್ ಸಂಸ್ಥೆ ಅಧ್ಯಕ್ಷ ಮುರ್ತುಜಾ ನಧಾಫ್, ಸಂತೋಷ ಕಲ್ಯಾಣಶೆಟ್ಟಿ, ನಿಂಗಪ್ಪ ಅಗಸರ ಮುಂತಾದವರು ಉಪಸ್ಥಿತರಿದ್ದರು.