ದೇವರಾಜ್ ಅರಸರ ಅವಧಿಯಲ್ಲಿ ಅಧಿಕಾರ ವಂಚಿತ ಸಮುದಾಯಗಳನ್ನು ಗುರುತಿಸಿ ಅಧಿಕಾರ ನೀಡುವ ಕೆಲಸವಾಯಿತು ಮತ್ತು ಅರಸು ಕಾರ್ಯಕ್ರಮಗಳ ಅನುಕೂಲ ಪಡೆದ ಯುವಕರು ಶಿಕ್ಷಣ ಅಧಿಕಾರ ಪಡೆದು ಮುಖ್ಯ ವಾಹಿನಿಯಲ್ಲಿ ಬೆಳೆಯುವಂತಾಯಿತು ಎಂದು ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮನಾಥ ಕಳ್ಳಿಮನಿ ಹೇಳಿದರು.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸ್ ಅವರ 42ನೇ ಪುಣ್ಯತಿಥಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಮಾತನಾಡಿ, “ದೇವರಾಜ್ ಅರಸ್ ಅವರು ಹಾವನೂರ ಆಯೋಗದ ವರದಿಯನ್ನು ಜಾರಿಗೊಳಿಸಿ ಕರ್ನಾಟಕದಲ್ಲಿ ಕ್ರಾಂತಿ ಮಾಡಿದರು ಮತ್ತು ಹಿಂದುಳಿದ ಅಲ್ಪಸಂಖ್ಯಾತರ, ದಲಿತರ ಬದುಕಿಗೆ ಬೆಳಕಾದರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಹರೀಶ್ ಕೆಂಚಣ್ಣವರ
ಹಿರಿಯ ಮುಖಂಡ ಡಿ ಎಲ್ ಚವ್ಹಾಣ್ ಮಾತನಾಡಿ, “ಉಳುವವನೇ ಭೂಮಿಯ ಒಡೆಯ ಎಂಬ ಕಾಯಿದೆಯನ್ನು ಸಂಪೂರ್ಣವಾಗಿ ಜಾರಿಗೆ ತಂದು ಬಡ ರೈತರಿಗೆ ನೆರವಾದರು. ಅರಸು ಒಬ್ಬ ಸರಳ, ವಿನಯ, ಬದ್ಧತೆಯ ಮುತ್ಸದ್ಧಿ ರಾಜಕಾರಣಿಯಾಗಿದ್ದರು” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಭಾಷ ಕಾಲೇಬಾಗ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಚನ್ನಬಸಪ್ಪ ನಂದರಗಿ, ಫಿರೋಜ ಶೇಖ, ಬಾಬಾಜಾನ ಬಾಗವಾನ ಸೇರಿದಂತೆ ಇತರರು ಇದ್ದರು.
