ಪರೀಕ್ಷೆ ಬರೆಯಲು ಕೈಗಳಲ್ಲಿ ಶಕ್ತಿ ಇಲ್ಲದ ವಿಶೇಷ ಚೇತನ ಪರೀಕ್ಷಾರ್ಥಿಗೆ ಶಿಕ್ಷಣ ಇಲಾಖೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಸಹಾಯಕನ ನೆರವು ಪಡೆಯಲು ಅವಕಾಶ ನೀಡದ ಕಾರಣ ಪರೀಕ್ಷಾರ್ಥಿ ಪರದಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ನಗರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ನಗರದ ಮೊಹಮ್ಮದ್ ನಾಯ್ಕೋಡಿ ಎಂಬ ದಿವ್ಯಾಂಗ ವಿದ್ಯಾರ್ಥಿ ಪರೀಕ್ಷೆ ಬರೆಯಬೇಕಿತ್ತು. ಆದರೆ, ಫೆಬ್ರವರಿ ತಿಂಗಳಲ್ಲೇ ಪರೀಕ್ಷೆ ಬರೆಯಲು ಸಹಾಯಕನ ಸೇವೆ ಒದಗಿಸುವಂತೆ ಕೋರಿದ್ದ ಆತನ ಮನವಿಗೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲ.
ಪರಿಣಾಮ ಬುಧವಾರ (ಮಾ.27) ಪರೀಕ್ಷಾ ಕೇಂದ್ರಕ್ಕೆ ಹಾಜರಾದರೂ ಪರೀಕ್ಷೆ ಬರೆಯುವ ಸಹಾಯಕ ಇಲ್ಲದೇ ಮೊಹಮ್ಮದ್ ಸುಮ್ಮನೇ ಕುಳಿತಿದ್ದಾನೆ. ತಮ್ಮ ಮಗ ಪರೀಕ್ಷೆ ಬರೆಯಲಾಗದ ಪರಿಸ್ಥಿತಿ ಕಂಡು ಪರೀಕ್ಷಾ ಕೇಂದ್ರದ ಹೊರಗೆ ಮೊಹಮ್ಮದನ ತಂದೆ ಅಝ್ಲಾನ್ ಕಣ್ಣೀರು ಹಾಕಿದ್ದಾರೆ.
ದಿವ್ಯಾಂಗ ಮೊಹಮ್ಮದ್ ಓದಿದ ಶಾಲೆಯವರು ತಮ್ಮ ಶಾಲೆಯ ದಿವ್ಯಾಂಗ ವಿದ್ಯಾರ್ಥಿ ಮೊಹಮ್ಮದ್ ಗೆ ಪರೀಕ್ಷೆ ಬರೆಯಲು ಸಹಾಯಕನ ಸೇವೆ ಪಡೆಯಲು ಅನುಮತಿ ಕೋರಿ ಫೆಬ್ರವರಿ ತಿಂಗಳಲ್ಲೇ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಛೇರಿಗೆ ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ.
ಪರಿಣಾಮ ಪರೀಕ್ಷಾರ್ಥಿ ಮೊಹಮ್ಮದ್ ಪರಿಸ್ಥಿತಿ ಮಾಧ್ಯಮಗಳ ಗಮನಕ್ಕೆ ಬರುತ್ತಲೇ ಎಚ್ಚೆತ್ತ ಶಾಲಾ ಶಿಕ್ಷಣ ಇಲಾಖೆ ಪರೀಕ್ಷೆ ಆರಂಭವಾಗಿ ಸುಮಾರು ಒಂದು ಗಂಟೆ ಬಳಿಕ ಪರೀಕ್ಷೆ ಬರೆಯಲು ಸಹಾಯಕನ ಸೇವೆ ಒದಗಿಸಿದ್ದಾರೆ.
ಅಲ್ಲದೇ ದಿವ್ಯಾಂಗ ಮೊಹಮ್ಮದ್ ಮುಂದಿನ ವಿಷಯಗಳ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಸಹಾಯಕನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುವಂತೆ ಪರೀಕ್ಷಾರ್ಥಿಯ ಪೋಷಕರು ಮನವಿ ಮಾಡಿದ್ದಾರೆ.