ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ತನ್ನ 22ನೇ ಅಖಿಲ ಭಾರತ ಸಮ್ಮೇಳನವನ್ನು ಇದೇ ಡಿಸೆಂಬರ್ 15 ರಿಂದ 17ರವರೆಗೆ ಒರಿಸ್ಸಾದ ಭುವನೇಶ್ವರದಲ್ಲಿ ಹಮ್ಮಿಕೊಂಡಿದೆ.
ಈ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳ ಸ್ಕೀಮ್ ಕಾರ್ಯಕರ್ತೆಯರು ಸೇರಿದಂತೆ ಸಂಘಟಿತ ಹಾಗೂ ಅಸಂಘಟಿತ ವಲಯಗಳ ಸಾವಿರಾರು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಅಮೆರಿಕ ಮತ್ತಿತರ ಸಾಮ್ರಾಜ್ಯಶಾಹಿ ದೇಶಗಳ ಕುಮ್ಮಕ್ಕಿನಿಂದ ಇಸ್ರೇಲ್, ಉಕ್ರೇನ್, ಲೆಬನಾನ್ ಇತ್ಯಾದಿ ದೇಶಗಳ ಮೇಲೆ ಅಮಾನುಷ ಯುದ್ಧ ಜರುಗುತ್ತಿರುವ ಸಂದರ್ಭದಲ್ಲಿ ಹಾಗೂ ಜಾಗತಿಕವಾಗಿ ಮಾರುಕಟ್ಟೆ ಹಂಚಿಕೆಗಾಗಿ ಸಾಮ್ರಾಜ್ಯಶಾಹಿ ದೇಶಗಳ ನಡುವೆ ತಿಕ್ಕಾಟ ಪೈಪೋಟಿ ತೀವ್ರವಾಗುತ್ತಿರುವಾಗ, ದೇಶದಲ್ಲಿ ದುಡಿಯುವ ಜನರ ಜೀವನ ಹಾಗೂ ಜೀವನೋಪಾಯಗಳ ಮೇಲೆ ಆಳುವ ಬಂಡವಾಳಶಾಹಿ ವರ್ಗ ಮತ್ತದರ ಸರ್ಕಾರಗಳಾದ ಕೇಂದ್ರದ ಬಿಜೆಪಿ ಹಾಗೂ ವಿವಿಧ ರಾಜ್ಯ ಸರ್ಕಾರಗಳು ತೀವ್ರ ದಾಳಿಗಳನ್ನು ಎಸಗುತ್ತಿರುವ ಸಂದರ್ಭದಲ್ಲಿ ಈ ಅಖಿಲ ಭಾರತ ಸಮ್ಮೇಳನ ಜರುಗುತ್ತಿದೆ.

ಈ ಸಮ್ಮೇಳನದಲ್ಲಿ ಜಗತ್ತಿನ ಹಾಗೂ ವಿಶೇಷವಾಗಿ ದೇಶದ ಸಮಸ್ತ ದುಡಿಯುವ ಜನರ ಶೋಚನೀಯ ಪರಿಸ್ಥಿತಿಯ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಬಲಿಷ್ಟ ಕಾರ್ಮಿಕ ಚಳುವಳಿಯನ್ನು ಕಟ್ಟಲು ನಿರ್ದಿಷ್ಟ ಸಂಘಟನಾತ್ಮಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಎಐಯುಟಿಯುಸಿ 22 ನೇ ಅಖಿಲ ಭಾರತ ಸಮ್ಮೇಳನದ ಅಂಗವಾಗಿ ಡಿಸೆಂಬರ್ 15 ರಂದು ಬೆಳಿಗ್ಗೆ ಒರಿಸ್ಸಾದ ರಾಜಧಾನಿ ಭುವನೇಶ್ವರದಲ್ಲಿ ಪಿಎಂಜಿ ಸ್ಕೆಟರ್ ಹತ್ತಿರ ಬಹಿರಂಗ ಅಧಿವೇಶನವು ಜರುಗಲಿದೆ, ಇದರ ಅಧ್ಯಕ್ಷತೆಯನ್ನು ಎಐಯುಟಿಯುಸಿ ಅಖಿಲ ಭಾರತ ಅಧ್ಯಕ್ಷರಾದ ಕೆ ರಾಧಾಕೃಷ್ಣ ಅವರು ವಹಿಸಲಿದ್ದಾರೆ. ಇತರ ರಾಷ್ಟಿಯ ನಾಯಕರಾದ ಸತ್ಯವಾನ್, ಸ್ವಪನ್ ಘೋಷ್, ಅರುಣ್ ಕುಮಾರ್ ಸಿಂಗ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶಂಕರ್ ದಾಸ್ ಗುಪ್ತ ಅವರು ಭಾಷಣಕಾರರಾಗಿ ಮಾತನಾಡಲಿದ್ದಾರೆ ಪತ್ರಿಕಾ ಪ್ರಕಟಣೆಯಲ್ಲಿ ಜಿಲ್ಲಾ ಮುಖಂಡ ಮಲ್ಲಿಕಾರ್ಜುನ ಎಚ್. ಟಿ ತಿಳಿಸಿದ್ದಾರೆ.
