ಸರ್ಕಾರಿ ಉದ್ಯೋಗಗಳ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗೆ ತರಬೇತಿ ನೀಡುವ ಹೆಸರಿನಲ್ಲಿ ವಿದ್ಯಾರ್ಥಿ ಯುವಜನರಿಗೆ ‘ಟಾರ್ಗೆಟ್ ಕೋಚಿಂಗ್ ಸೆಂಟರ್’ ವಂಚಿಸಿದೆ. ಮಾತ್ರವಲ್ಲದೆ, ಸರ್ಕಾರದ ಹಣವನ್ನೂ ದುರ್ಬಳಕೆ ಮಾಡಿಕೊಂಡಿದೆ. ಆ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ (ಡಿವಿಪಿ) ಪ್ರತಿಭಟನೆ ನಡೆಸಿದೆ.
ವಿಜಯಪುರಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಡಿವಿಪಿ ಮುಖಂಡ ಅಕ್ಷಯ್ ಕುಮಾರ್. “ಸರ್ಕಾರಿ ಇಲಾಖೆಗಳ ಹುದ್ದೆಗಳು, ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳಿಗೆ ತರಬೇತಿ ನೀಡಲು ಟಾರ್ಗೆಟ್ ಕೋಚಿಂಗ್ ಸೆಂಟರ್ ಸರ್ಕಾರದ ಅನುದಾನ ಪಡೆದುಕೊಂಡಿದೆ. ಆದರೆ, ಸರ್ಕಾರದ ನಿಯಮಾವಳಿ ಪ್ರಕಾರ ತರಬೇತಿ ನೀಡದೆ, ವಂಚಿಸುತ್ತಿದೆ” ಎಂದು ಆರೋಪಿಸಿದ್ದಾರೆ.
“ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಸರ್ಕಾರಿ ಅನುದಾನವನ್ನು ಸಂಸ್ಥೆ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸರ್ಕಾರ ನೀಡುವ ಉಚಿತ ತರಬೇತಿಗೆ ಹಲವಾರು ವಿದ್ಯಾರ್ಥಿ, ಯುವಜನರು ಆಯ್ಕೆಯಾಗಿದ್ದು, ಅವರೆಲ್ಲರೂ ಸರ್ಕಾರಿ ಉದ್ಯೋಗ ಪಡೆಯುವ ಕನಸು ಹೊತ್ತಿದ್ದಾರೆ. ಆದರೆ, ಸಂಸ್ಥೆಯು ತರಬೇತಿ ನೀಡದೆ, ಅವರ ಕನಸಿನ್ನು ನಾಶ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕು.ತಪ್ಪಿತಸ್ಥರಿಗೆ ಶಿಕ್ಷ ವಿಧಿಸಬೇಕು. ವಿದ್ಯಾರ್ಥಿ ಯುವಜನರ ಜೀವನದ ಜೊತೆ ಆಟವಾಡುತ್ತಿರುವ ಸಂಸ್ಥೆಗೆ ಸರ್ಕಾರ ನೀಡಿರುವ ಯೋಜನೆಯನ್ನು ರದ್ದುಗೊಳಿಸಿ, ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಆನಂದ ಮುದೂರ, ಸದಾಶಿವ ಛಲವಾದಿ, ದರ್ಶನ ಸಾಲೋಟಗಿ, ಸತೀಶ್ ಅಂಜುಟಗಿ, ಸೋಮನಾಥ ಮಾದರ, ಶ್ರೀಧರ್ ಛಲವಾದಿ, ಸಚಿನ್, ಪ್ರಜ್ವಲ್, ದಾವೂದ್ ಮುಲ್ಲಾ, ದಯಾನಂದ್ ಸಾಲೋಟಗಿ ಸುರೇಶ್ ಕಾಂಬಳೆ ಹಾಗೂ ವಿದ್ಯಾರ್ಥಿಗಳು ಇದ್ದರು.