ವಿಜಯಪುರ ಜಿಲ್ಲಾದ್ಯಂತ ಕಳೆದ ಕೆಲವು ದಿನಗಳಿಂದ ಮುಂಗಾರು ಮಳೆಗಳು ಸುರಿಯುತ್ತಿಲ್ಲ. ಹೇಳಿಕೊಳ್ಳುವಷ್ಟು ಚಳಿಯೂ ಇಲ್ಲ. ಈ ನಡುವೆ ಕಳೆದ ಭಾನುವಾರದಿಂದ ಆಲಮಟ್ಟಿ ಅಣೆಕಟ್ಟಿಗೆ ಒಳಹರಿವು ಸಂಪೂರ್ಣ ಸ್ಥಗಿತಗೊಂಡಿದೆ.
ಮುಂದಿನ ಮುಂಗಾರು ಮಳೆ ಸುರಿಯುವವರೆಗೂ ಕುಡಿಯುವ ನೀರಿನ ಪೂರೈಕೆ ಸವಾಲಿನ ಕೆಲಸವಾಗಿ ಮಾರ್ಪಟ್ಟಿದೆ. ಆಲಮಟ್ಟಿ ಜಲಾಶಯದಲ್ಲಿರುವ ಹನಿ ನೀರು ವ್ಯರ್ಥವಾಗದಂತೆ ಲೆಕ್ಕಾಚಾರದಲ್ಲಿ ಬಳಸಲು ಅಧಿಕಾರಿಗಳು ಯೋಜನೆ ಹಾಕಿಕೊಳ್ಳಬೇಕಿದೆ.
ಒಳಹರಿವು ಸಂಪೂರ್ಣ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಆಲಮಟ್ಟಿಯ ಕೆಬಿಜಿಎನ್ಎಲ್ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ನವಂಬರ್ 16ರಂದು ಬೆಳಗ್ಗೆ 11ಕ್ಕೆ ಐಸಿಸಿ ಅಧ್ಯಕ್ಷ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಇಂಗಾರ್ ಹಂಗಾಮಿನ ನೀರಾವರಿ ಸಲಹಾ ಸಭೆ (ಐಸಿಸಿ) ಕರೆಯಲಾಗಿದೆ. ಜಲಾಶಯದ ಉಳಿದ ನೀರಿನ ಬಳಕೆ ಕುರಿತು ಲೆಕ್ಕಾಚಾರ ಪಕ್ಕಾ ಆಗಲಿದೆ.
ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಕೃಷ್ಣ ನೀರನ್ನು ಹಿಡಿದಿಟ್ಟುಕೊಂಡು ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರು ಒದಗಿಸುವುದಲ್ಲದೆ ಐದು ಜಿಲ್ಲೆಗಳ ಕುಡಿಯುವ ನೀರಿಗೂ ಕೃಷ್ಣ ನೀರು ಆಧಾರ. ಈ ಜಿಲ್ಲೆಗಳಲ್ಲಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳು, ಕೆರೆ, ಕಾಲುವೆಗಳ ಜಾಲ ಅವಲಂಬಿತ ಕುಡಿಯುವ ನೀರಿನ ಯೋಜನೆಗಳಿಗೆ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದ ನೀರು ಅಗತ್ಯ.

ಪ್ರಸಕ್ತ ಸಾಲಿನಲ್ಲಿ ಜೂನ್ 7ರಿಂದ ಜಲಾಶಯಕ್ಕೆ ಒಳಹರಿವು ಆರಂಭವಾಗಿತ್ತು. ಅಂದಿನಿಂದ ನಿರಂತರ ಒಳ ಹರಿವು ಕಂಡ ಜಲಾಶಕ್ಕೆ ಕಳೆದ ಭಾನುವಾರದಿಂದ ಸ್ಥಗಿತಗೊಂಡಿದೆ. ಗರಿಷ್ಠ 519.60 ಮೀಟರ ಎತ್ತರದಲ್ಲಿ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ ಬುಧವಾರ ಬೆಳಗ್ಗೆ 519.57 ಮೀಟರ ಎತ್ತರದಲ್ಲಿ 122.483 ಟಿಎಂಸಿ ನೀರು ಸಂಗ್ರಹ ಬಿತ್ತು. ಕಾಲುವೆಗಳಿಗೆ 1536 ಕ್ಯೂಸೆಕ್ ಸೇರಿ 2037 ಕ್ಯೂಸೆಕ್ ಹೊರಹರಿವು ಇತ್ತು.
ಜಲಾಶಯಕ್ಕೆ ಹಲವು ದಿನಗಳ ಕಾಲ ಒಳಹರಿವು ಕಂಡುಬಂದಿದ್ದರಿಂದ ಮುಂಗಾರು ಹಂಗಾಮಿಗೆ ನಿರಂತರವಾಗಿ ನೀರು ಹರಿಸಲಾಗಿತ್ತು. ಆದರೆ ಸದ್ಯ ಒಳಹರಿವು ಸ್ಥಗಿತಗೊಂಡಿದೆ. ಆದರೆ ಜಲಾಶಯ ಬಹುತೇಕ ಭರ್ತಿಯಾಗಿದ್ದರಿಂದ ಹಿಂಗಾರು ಹಂಗಾಮಿಗೆ ವಾರ ಬಂದಿ ಪದ್ಧತಿ ಅಡಿ ನೀರು ಹರಿಸಬಹುದಾಗಿದೆ.
ಕಳೆದ ಕೆಲವು ವರ್ಷಗಳಿಂದ ಅನುಸರಿಸಿಕೊಂಡು ಬಂದಿರುವ 14 ದಿನಾ ಚಾಲು, 10 ದಿನ ಬಂದ್ ಅವಧಿಯ ವಾರ ಬಂದಿ ಅಳವಡಿಸುವ ಪದ್ಧತಿಯಂತೆ ಈ ಬಾರಿ ಅನುಸರಿಸಿದರೂ 2025 ಮಾರ್ಚ್ ಅಂತ್ಯದವರೆಗೂ ನೀರು ಹರಿಸಬಹುದು ಎಂಬ ಲೆಕ್ಕಾಚಾರ ಅಧಿಕಾರಿಗಳದ್ದು.
ಪ್ರಸಕ್ತ ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ (ಐಸಿಸಿ) ಯಲ್ಲಿ ನ.13 ರವರೆಗೆ ಕಾಲುವೆಗಳಿಗೆ ನೀರು ಹರಿಸಲು ನಿರ್ಣಯಿಸಲಾಗಿತ್ತು. ಆದರೆ, ಐಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ನವೆಂಬರ್ 16ರ ವರೆಗೆ ನೀರು ಹರಿಸಲಾಗುತ್ತದೆ ಎಂದು ಕೆಜಿಬಿಎನ್ಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಮುಂಗಾರು ಹಂಗಾಮಿಗೆ ಜು.17 ರಿಂದ ನ.16 ರವರಿಗೆ ವಾರ ಬಂದಿ ಇಲ್ಲದೆ ನಿರಂತರವಾಗಿ ಕಾಲುವೆಗಳಿಗೆ ನೀರು ಹರಿಸಿದಂತಾಗಲಿದ್ದು, ಕಾಲುವೆ ಜಾಲದ ರೈತರಿಗೆ ಯಥೇಚ್ಛವಾಗಿ ದೊರಕಿದೆ.
ಇದನ್ನು ಓದಿದ್ದೀರಾ? ಗುಂಡ್ಲುಪೇಟೆ | ದಲಿತರ ಮೇಲಿನ ದಬ್ಬಾಳಿಕೆ ತಡೆಯಲು ಅಧಿಕಾರಿಗಳು ವಿಫಲ : ದಸಂಸ ಪ್ರತಿಭಟನೆ
ಜಲಾಶಯದಲ್ಲಿ ನೀರಿನ ಕೊರತೆ ಕಂಡು ಬಂದಾಗ ಕುಡಿಯುವ ನೀರಿಗೆ ತೊಂದರೆ ಆಗಬಾರದೆಂದು ಆಲಮಟ್ಟಿ ಜಲಾಶಯದಿಂದ ಇದುವರೆಗೂ ಹಿಂಗಾರು ಬೆಳೆಗೆ ನೀರು ಹರಿಸಿಲ್ಲ.
