ಪರಿಸರ ಕಾಳಜಿಯ ಜತೆಗೆ ಸುಸ್ಥಿರ ಅಭಿವೃದ್ಧಿಯೂ ಸಮಾಜಕ್ಕೆ ಮುಖ್ಯ. ಈ ಹಿನ್ನೆಲೆಯಲ್ಲಿ ಪರಿಸರವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ತೊಡಗಬೇಕು ಎಂದು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಿಇಒ ಡಾ ಬಾಬು ಸಜ್ಜನ ಹೇಳಿದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಸಸ್ಯಶಾಸ್ತ್ರ ಅಧ್ಯಯನ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಕೋಶ ಹಾಗೂ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಮಹಿಳಾ ವಸ್ತು ಸಂಗ್ರಹಾಲಯ ಇವರುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಶಂಕರಗೌಡ ಎಸ್ ಸೋಮನಾಳ ಅವರು ಮಾತನಾಡಿ, “ಸಾಮಾಜಿಕವಾಗಿ ಮುಖ್ಯ ವಾಹಿನಿಗೆ ಹೊಸ ಹೊಸ ಕಾರ್ಯಾಚರಣೆ ಮೂಲಕ ಪರಿಸರವನ್ನು ಬೆಳೆಸುವ ಸಿದ್ಧಾಂತದ ಪ್ರಯೋಗ ಕಡ್ಡಾಯವಾಗಿ ಆಗಬೇಕು. ಪರಿಸರದ ಬಗ್ಗೆ ಇರುವ ಕಾಳಜಿ, ಕರ್ತವ್ಯಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು” ಎಂದರು.
“ವಿಶ್ವವಿದ್ಯಾಲಯಗಳ ಅಧ್ಯಾಪಕರು ಮತ್ತು ಸಿಬ್ಬಂದಿ ಪ್ರಾಯೋಗಿಕ ಅಧ್ಯಯನಶೀಲರಾಗಬೇಕು. ಸಮುದಾಯದ ಜತೆಗೆ ನಿರಂತರವಾಗಿ ಸಂಪರ್ಕದಲ್ಲಿರಬೇಕು. ವಿಶ್ವವಿದ್ಯಾಲಯದ ಆವರಣ ಹಸಿರು ಅವರಣವಾಗಲು ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು” ಎಂದು ಭರವಸೆ ನೀಡಿದರು.
ಸಮಾಜ ವಿಜ್ಞಾನ ವಿಷಯದ ಡೀನ್ ಹಾಗೂ ರಾಷ್ಟೀಯ ಸೇವಾ ಯೋಜನೆ ಕೋಶದ ಸಂಯೋಜನಾಧಿಕಾರಿ ಪ್ರೊ.ಶಾಂತಾದೇವಿ ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಿಇಒ ಡಾ ಬಾಬು ಸಜ್ಜನ ಅವರು ತಮ್ಮ ಸಂಸ್ಥೆಯ ಪರವಾಗಿ ವಿಶ್ವವಿದ್ಯಾಲಯಕ್ಕೆ ಹಲವು ಬಗೆಯ 90 ಸಸಿಗಳನ್ನು ನೀಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಧೈರ್ಯದಿಂದ ದೃಢಸಂಕಲ್ಪ ಮಾಡಿದಾಗ ಉತ್ತಮ ಸಾಧನೆ ಸಾಧ್ಯ: ಇಸ್ಮಾಯಿಲ್ ತಮಟಗಾರ್
ಪ್ರೊ ಲಕ್ಷ್ಮಿದೇವಿ ವೈ, ಡಾ.ನಟರಾಜ ದುರ್ಗಣ್ಣವರ, ಡಾ.ಶಶಿಕಲಾ ರಾಠೋಡ, ಪ್ರೊ. ನಾಮದೇವಗೌಡ, ಪ್ರೊ.ಗವಿಸಿದ್ದಪ್ಪ ಆನಂದಹಳ್ಳಿ, ಪ್ರೊ. ಆರ್ ಎ ಗಂಗಶೆಟ್ಟಿ, ಪ್ರೊ.ಸಕ್ಸಾಲ್ ಹೂವಣ್ಣ, ಡಾ.ರಮೇಶ ಸೋನಕಾಂಬಳೆ ಡಾ.ಕೆ ಪಿ ಸುರೇಶ, ಡಾ.ಕಲಾವತಿ ಕಾಂಬಳೆ ಹಾಗೂ ಅತಿಥಿ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿನಿಯರು ಇದ್ದರು.
