ಬಂಜಾರ ಸಂಸ್ಕೃತಿಯು ಅತ್ಯಂತ ಶ್ರೀಮಂತ ಸಂಸ್ಕೃತಿಯಾಗಿದ್ದು, ಇದನ್ನು ಕಾಪಾಡಿಕೊಂಡು ಹೋಗುವುದು ಅತಿ ಅವಶ್ಯಕ ಎಂದು ವಿಜಯಪುರದ ಮಹಿಳಾ ವಿವಿ ಕುಲಪತಿ ಬಿ ಕೆ ತುಳಸಿಮಾಲ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ “ಬಂಜಾರ ಭಾಷೆ, ಶಿಕ್ಷಣ ಮತ್ತು ಸಮಾಜ” ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಪಾರಂಪರಿಕ ಕಲೆಯಾದ ಕಸೂತಿಯನ್ನು ಅಧುನೀಕರಣಕ್ಕೆ ಒಳಪಡಿಸಿ ಅಂತಾರಾಷ್ಟ್ರೀಯ ಮಟ್ಟದ ಉದ್ಯಮವನ್ನಾಗಿ ಬೆಳೆಸುವುದು ಅವಶ್ಯಕವಾಗಿದೆ. ಹಾಗೆಯೇ ಬಂಜಾರ ಭಾಷೆ ಮತ್ತು ಸಾಹಿತ್ಯ ಅತ್ಯಂತ ಶ್ರೀಮಂತವಾಗಿರುವುದರಿಂದ ಅದನ್ನು ದಾಖಲಿಸುವುದು ಅವಶ್ಯಕವಾಗಿದೆ. ಈ ಸಮಾಜದ ಸುಸ್ಥಿರ ಅಭಿವೃದ್ಧಿಗೆ ಮಾರ್ಗೋಪಾಯಗಳನ್ನು ಕಂಡುಹಿಡಿಯುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, “ಬಂಜಾರ ಸಮುದಾಯದವರು ಕಾಯಕ ಜೀವಿಗಳಾಗಿದ್ದಾರೆ” ಎಂದರು.
ಈ ಕಾರ್ಯಕ್ರಮದಲ್ಲಿ ಪ್ರೊ ನಾರಾಯಣ ಪವಾರ ಬಂಜಾರ ಭಾಷೆ ಆಳಿವು-ಉಳಿವು ಕುರಿತು ವಿಷಯ ಮಂಡಿಸಿದರು. ಡಾ ಸವಿತಾ ಲಮಾಣಿಯವರು ಬಂಜಾರ ಸಮುದಾಯದಲ್ಲಿ ಸಾಮಾಜಿಕ ಬದಲಾವಣೆ ವಿಷಯದ ಕುರಿತು ಉಪನ್ಯಾಸ ನೀಡಿದರು. ಸಂಗೀತಾ ನಾಯಕ ಬಂಜಾರ ಸಮುದಾಯ ಮತ್ತು ಶಿಕ್ಷಣ ಕುರಿತು ಮಾತನಾಡಿದರು. ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಸದಸ್ಯ ಡಾ. ಸುರೇಖಾ ಜಿ ರಾಠೋಡ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಂಜಾರ ಸಂಸ್ಕೃತಿ, ಕಲೆಗೆ ರಾಷ್ಟ್ರೀಯ ಮಹತ್ವವಿದೆ: ಡಾ. ಎ ಆರ್ ಗೋವಿಂದಸ್ವಾಮಿ
ಈ ಕಾರ್ಯಕ್ರಮದಲ್ಲಿ ಆರ್ ಬಿ ನಾಯಕ, ವಸಂತ ಚವ್ಹಾಣ ಮತ್ತು ಬಂಜಾರ ಸಮುದಾಯದ ಮುಖಂಡರು, ಹಿರಿಯರು, ನೃತ್ಯ ತಂಡದವರು, ಕವಿಗಳು ಸೇರಿಂತೆ ಇತರು ಇದ್ದರು.