ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ವರಿಗೂ ಸಮಪಾಲು ಎಂಬ ನೀತಿಯಡಿ ಬಜೆಟ್ ಮಂಡಿಸಿದ್ದಾರೆ. ಆದರೆ, ಪ್ರತಿಪಕ್ಷ ಬಿಜೆಪಿಯವರು ‘ಹಲಾಲ್’ ಪದದ ಅರ್ಥ ಗೊತ್ತಿಲ್ಲದೆಯೇ ‘ಹಲಾಲ್ ಬಜೆಟ್’ ಎಂದು ಟೀಕಿಸಿದ್ದಾರೆ. ‘ಹಲಾಲ್’ ಎಂದರೆ ಪ್ರಮಾಣೀಕೃತ, ಕಾನೂನು ಬದ್ಧ ಎಂಬ ಅರ್ಥ ಹೊಂದಿದೆ. ಹಾಗಾದರೆ, ಬಿಜೆಪಿಯುವರು ಇದೊಂದು ಉತ್ತಮ ಬಜೆಟ್ ಎಂಬುವುದಾಗಿ ಒಪ್ಪಿಕೊಂಡಂತಾಗಿದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಬಿಜೆಪಿಗರಿಗೆ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಿಎಂ ಬಜೆಟ್ ಭಾಷಣ ಓದಿ ಮುಗಿಸುವ ಮೊದಲೇ ಮುಸ್ಲಿಮರ ಬಗ್ಗೆ ಟೀಕೆ ಮಾಡಲು ಬಿಜೆಪಿಯವರಿಗೆ ಆತುರ ಇತ್ತು. ಹೀಗಾಗಿಯೇ ಹಲಾಲ್ ಪದದ ಅರ್ಥವನ್ನೂ ತಿಳಿದುಕೊಳ್ಳದೇ ಹಲಾಲ್ ಬಜೆಟ್ ಎಂದು ಟೀಕಿಸಿದ್ದಾರೆ. ಮತ್ತೊಂದೆಡೆ, ಪ್ರಧಾನಿಯವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಹೇಳುತ್ತಾರೆ. ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಕಡಿಮೆ ಅನುದಾನ ಸಿಕ್ಕಿರುವ ಬಗ್ಗೆ ರಾಜ್ಯ ಬಿಜೆಪಿಯವರು ಧ್ವನಿ ಎತ್ತಿದ್ದರೆ, ಪ್ರಧಾನಿಯವರ ಘೋಷಣೆಯಾದರೂ ಸಾಕಾರವಾಗುತ್ತಿತ್ತು” ಎಂದರು.
ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ 4.5 ಸಾವಿರ ಕೋಟಿ ರೂ. ಮೀಸಲಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡ ನಂತರ ಮುಸ್ಲಿಂ ಸಮುದಾಯವೇ ದೊಡ್ಡದಾಗಿದೆ. ವಾಸ್ತವವಾಗಿ ಅಲ್ಪಸಂಖ್ಯಾತ ಸಮಯದಾಯಕ್ಕೆ 20 ಸಾವಿರ ಕೋಟಿ ರೂ. ಅನುದಾನ ನೀಡಬೇಕಾಗಿತ್ತು. ಅಲ್ಲದೇ, ಜಮೀರ್ ಅಹ್ಮದ್ ಖಾನ್ ಬಜೆಟ್ ಮಂಡನೆ ಮಾಡಿದಂತಿದೆ ಎಂದೂ ಬಿಜೆಪಿಯವರು ಟೀಕಿಸಿದ್ದಾರೆ. ಮುಂದೊಂದು ದಿನ ಜಮೀರ್ ಸಹ ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿದರೂ ಅಚ್ಚರಿ ಇಲ್ಲ ಇದರೊಂದಿಗೆ ಬಿಜೆಪಿ ಬಯಕೆ ಸಹ ಈಡೇರಬಹದು” ಎಂದು ತಿರುಗಿ ಟೀಕಿಸಿದರು.
ಮುಖಂಡ ಎಂ.ಸಿ.ಮುಲ್ಲಾ ಮಾತನಾಡಿ, “ರಾಜ್ಯದಲ್ಲಿ ವಿರೋಧ ಪಕ್ಷವೇ ಸರಿಯಿಲ್ಲ. ಈ ಸ್ಥಾನವನ್ನು ನಿಭಾಯಿಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಬಿಜೆಪಿಯವರಿಗೆ ಬಜೆಟ್ ಎಂದರೆ ಗೊತ್ತಿಲ್ಲ, ಬಜೆಟ್ ಅಭ್ಯಾಸ ಮಾಡಿಲ್ಲ. ರಾಜ್ಯ ಬಿಜೆಪಿ ನಾಯಕರಿಗೆ ಕೇವಲ ಹಿಜಾಬ್, ಹಲಾಲ್, ಹಿಂದೂ, ಮುಸ್ಲಿಂ ಜಗಳವೇ ಉಸಿರಾಟವಾಗಿದೆ. ಗ್ಯಾರಂಟಿ ಅನುದಾನ ಬಳಸಿಕೊಂಡಂತೆ ಅಲ್ಪಸಂಖ್ಯಾತ ಸಮುದಾಯದ ಹಣ ಬಳಸಿಕೊಳ್ಳಲಿ ಎಂದು ಮುತ್ಸದ್ದಿ ರಾಜಕಾರಣಿಯಾಗಿರುವ ಸಂಸದ ರಮೇಶ ಜಿಗಜಿಣಗಿ ಹೇಳಿಕೆ ನೀಡಿದ್ದು ಸರಿಯಲ್ಲ. ಮುಸ್ಲಿಂ ಬೆಂಬಲದಿಂದಲೇ ರಾಜಕೀಯ ಪ್ರವೇಶ ಮಾಡಿದ್ದನ್ನು ಅವರು ಮರೆಯಬಾರದು. ಇತಿಹಾಸದಲ್ಲಿ ಇಂತಹ ವಿರೋಧ ಪಕ್ಷವನ್ನು ನೋಡಿಲ್ಲ ಕೇವಲ ಜಟಕಾ, ಹಲಾಲ್ ಎಂಬ ವಿಷಯವನ್ನೇ ಜನರ ಮುಂದೆ ತರುವ ಬಿಜೆಪಿಯುವರು ತಮ್ಮ ಪಕ್ಷವನ್ನು ಭಾರತೀಯ ಜನತಾ ಪಾರ್ಟಿ ಬದಲಿಗೆ ಭಾರತೀಯ ಜಟಕಾ ಪಾರ್ಟಿ ಎಂದು ಬದಲಾಯಿಸಿಕೊಳ್ಳಬೇಕು” ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ವಿಜಯಪುರ | ಬೆಟ್ಟಿಂಗ್ ಆ್ಯಪ್‌ಗಳನ್ನು ನಿಷೇಧಿಸುವಂತೆ ಜಿಲ್ಲಾಧಿಕಾರಿಗೆ ಮನವಿ
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಸಂತ ಹೊನಮೋಡೆ, ನಾಗರಾಜ ಲಂಬು ಇದ್ದರು.
