ಈಗಾಗಲೇ 5 ಜನಪರ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ. ಮುಂದೆಯೂ ಮಾಡಿಕೊಂಡು ಹೋಗುತ್ತೇವೆ. ರಾಜ್ಯದ ಭೀಕರ ಬರಗಾಲದ ನಿಮಿತ್ತ ಕೇಂದ್ರಕ್ಕೆ ಮೂರು ಬಾರಿ ಮನವಿ ಮಾಡಿ ₹1,87,000 ಕೋಟಿ ಬಿಡುಗಡೆ ಮಾಡಬೇಕೆಂದು ಕೇಳಿದ್ದೇವೆ. ಆದರೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೇ ಈವರೆಗೆ ಒಂದು ನಯಾ ಪೈಸೆಯನ್ನೂ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರೈತ ಮುಖಂಡರೊಡನೆ ಮಾತನಾಡಿದರು.
2024-25 ನೇ ಸಾಲಿನ ಬಜೆಟ್ ನಿಮಿತ್ತ ನಡೆಯಲಿರುವ ಅಧಿವೇಶನದ ಪೂರ್ವವಾಗಿ ರಾಜ್ಯದ ಎಲ್ಲ ರೈತ ಮುಖಂಡರೊಂದಿಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
“ಎಲ್ಲ ಜಿಲ್ಲೆಯ ರೈತ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಮುಂಬರುವ ಬಜೆಟ್ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ. ಬರಗಾಲದ ನಿಮಿತ್ಯ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಅನುಕೂಲವಾಗಲೆಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಹಣ ಮಿಸಲಿಟ್ಟು ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಹೇಳಲಾಗಿದೆ. ನಾನೂ ಕೂಡಾ ರೈತ ಸಂಘದಿಂದ ಬಂದಿರುವವನು ರೈತರ ಕಷ್ಟ ಗೊತ್ತಿದೆ, ರೈತರ ಪರವಾಗಿ ಯಾವಾಗಲೂ ಇರುತ್ತೇನೆ” ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ ಮಾತನಾಡಿ, “ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ ಕೂಡಲೇ ಕೆಬಿಜೆಎನ್ಎಲ್ ಕಚೇರಿಯನ್ನು ಬೆಂಗಳೂರಿನಿಂದ ಆಲಮಟ್ಟಿಗೆ ಸ್ಥಳಾಂತರಿಸಬೇಕು. ಕೃಷ್ಣಾ ಕಣಿವೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಬೇಕು. ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ರಿಂದ 524.256 ಮೀಟರ್ ಎತ್ತರಕ್ಕೆ ಎತ್ತರಿಸಬೇಕು. ನಷ್ಟ ಪರಿಹಾರ ಹಾಗೂ ಪುರ್ನವಸತಿ ನೀಡಬೇಕು” ಎಂದು ಒತ್ತಾಯಿಸಿದರು.
“ಜಿಲ್ಲೆಯಲ್ಲಿ ಮಾಡಲಾಗಿರುವ ಎಲ್ಲ ನೀರಾವರಿ ಯೋಜನೆಯ ಕಾಲುವೆ ಹಾಗೂ ಉಪ ಕಾಲುವೆಗಳಲ್ಲಿ ಮಣ್ಣು ಬಿದ್ದು, ಜಾಲಿಕಂಠಿಗಳು ಬೆಳೆದು ನೀರು ಸಾಗುತ್ತಿಲ್ಲ. ಮುಂಜಾಗೃತವಾಗಿ ಮಳೆಗಾಲಕ್ಕೂ ಮುಂಚಿತವಾಗಿಯೇ ವ್ಯವಸ್ಥೆ ಮಾಡಬೇಕು. ಅದಕ್ಕಾಗಿ ಪ್ರತೈಕ ಹಣ ಮೀಸಲಿಡಬೇಕು. ಬರಗಾಲದ ನಿಮಿತ್ತ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬರಗಾಲ ನಿವಾರಣೆಗೆ ಮುಂಜಾಗ್ರತವಾಗಿ ವಿಶೇಷ ಯೋಜನೆ ರೂಪಿಸಬೇಕು” ಎಂದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, “ರೈತರಿಗೆ ಕಂಟಕವಾಗಿರುವ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರೈತರ ಹೋರಾಟದ ಫಲವಾಗಿ ಮಂಡಿಯೂರಿ ಬೇಷರತ್ತಾಗಿ ಮರಳಿ ಪಡೆದಿದೆ. ಆದರೆ ಆಗಿನ ಬಿಜೆಪಿ ಸರ್ಕಾರ ಅದನ್ನು ಮುಂದುವರಿಸಿಕೊಂಡು ಬಂದಿತ್ತು. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತೆವೆಂದು ಹೇಳಿರುವ ಸರ್ಕಾರ ಇನ್ನೂ ಮರಳಿ ಪಡೆದಿಲ್ಲ. ಕೂಡಲೇ ಹಿಂಪಡೆಯಬೇಕು” ಎಂದು ಆಗ್ರಹಿಸಿದರು.
“ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುತ್ತಿರುವ ಲಿಂಬೆ, ದಾಳಿಂಬೆ, ದ್ರಾಕ್ಷಿ, ಡ್ರ್ಯಾಗನ್ ಹಣ್ಣುಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಅದರ ಉಪ ಉತ್ಪನ್ನಗಳನ್ನು ಮಾಡುವಂತೆ ಉತ್ತೇಜಿಸುವ ಯೋಜನೆ ಮಾಡಬೇಕು. ಅತಿ ಹೆಚ್ಚು ಬೆಳೆಯುತ್ತಿರುವ ತೊಗರಿ ಮೆಣಸಿನಕಾಯಿ, ಅಜಿವಾನ, ಮೆಕ್ಕೆಜೋಳ, ಉಳ್ಳಾಗಡ್ಡಿ ಸೇರಿದಂತೆ ಹಲವು ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು” ಎಂದರು.
ಕೋಲ್ಹಾರ ತಾಲೂಕು ಅಧ್ಯಕ್ಷ ಸೋಮು ಬಿ. ಬಿರಾದಾರ ಮಾತನಾಡಿ, “ವಿದ್ಯುತ್ ಅಕ್ರಮ ಸಕ್ರಮ ಮೊದಲಿನಂತೆ ಮುಂದುವರೆಸಬೇಕು. ರೈತರ ಕೃಷಿ ಪಂಪ್ಸೆಟ್ಗಳಿಗೆ ಹಗಲು 12 ಘಂಟೆ 3 ಫೇಸ್ ಹಾಗೂ ರಾತ್ರಿ ಸಿಂಗಲ್ ಫೇಸ್ ಉಚಿತ ವಿದ್ಯುತ್ ನೀಡಬೇಕು. ರೈತರಿಗೆ ಈವರೆಗೆ ಮೂರ್ನಾಲ್ಕು ವರ್ಷಗಳಿಂದ ಬಾಕಿ ಉಳಿದ ಬೆಳೆ ವಿಮೆಯನ್ನು ಕೂಡಲೇ ಕೊಡಬೇಕು. ತಾರತಮ್ಯ ಮಾಡದೆ ಏಕರೂಪದಲ್ಲಿ ಕಬ್ಬಿಗೆ ಪ್ರತಿ ಟನ್ಗೆ ₹3,500 ಬೆಲೆ ಘೋಷಣೆ ಮಾಡಿ, ಕಬ್ಬಿಗೂ ವಿಮೆ ವ್ಯವಸ್ಥೆ ಮಾಡಬೇಕು. ಜತೆಗೆ ತೂಕದಲ್ಲಿ ಆಗುತ್ತಿರುವ ಅನ್ಯಾಯವನ್ನು ಬಗೆಹರಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಹಾಸನ | ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ: ಸಚಿವ ಕೆ ಎನ್ ರಾಜಣ್ಣ ವಿಶ್ವಾಸ
2012ರಲ್ಲಿ ಮುಳವಾಡ ಗ್ರಾಮದ ರೈತರ 3220 ಎಕರೆ ಕೆಐಡಿಬಿಗಾಗಿ ಮೀಸಲಿಟ್ಟು ಈವರೆಗೆ ಆ ಜಾಗದಲ್ಲಿ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ. ರೈತರು ತಮ್ಮ ಕಲಿತ ನಿರುದ್ಯೋಗಿ ಮಕ್ಕಳಿಗೆ ಉದ್ಯೋಗ ಸಿಗುವುದು ಎನ್ನುವ ಉದ್ದೇಶದಿಂದ ತಮ್ಮ ಬೆಲೆಬಾಳುವ ಭೂಮಿಯನ್ನು ಬಿಟ್ಟುಕೊಟ್ಟಿದ್ದಾರೆ. ಅಲ್ಲಿ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು” ಎಂದು ಆಗ್ರಹಿಸಿದರು.
ಈ ವೇಳೆ ಮುಖಂಡ ಲಕ್ಷ್ಮಣ ಹಂಚಿನಾಳ, ಅಶೋಕ ಕಳಸಗೊಂಡ, ಸಂತೋಷ ಹಂಚಿನಾಳ ಅಭಿಷೇಕ ಹೂಗಾರ ಸೇರಿದಂತೆ ಇತರರು ಇದ್ದರು.