ಸಿಎಂ ಇಬ್ರಾಹಿಂ ಜೆಡಿಎಸ್ ಬಿಡುವುದಿಲ್ಲ ಎಂದು ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷ ಜಿ.ಟಿ ದೇವೇಗೌಡ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿ ಜೊತೆಗೆ ಹೋಗಲು ಇಬ್ರಾಹಿಂಗೆ ವಿರೋಧವಿಲ್ಲ. ಅವರೇ ಮುಂದೆ ನಿಂತು ನನ್ನ ಅಧ್ಯಕ್ಷ ಸ್ಥಾನ ಅನೌನ್ಸ್ ಮಾಡಿದ್ದಾರೆ. ಸಿ.ಎಂ ಇಬ್ರಾಹಿಂರದ್ದು ಈಗ ಏನು ಚರ್ಚೆ ಇಲ್ಲ. ಮುಂದೆ ಒಟ್ಟಾಗಿ ಹೇಗೆ ಹೋಗಬೇಕು ಅನ್ನೋ ಬಗ್ಗೆ ಇಬ್ರಾಹಿಂ ಸಲಹೆ ಇದೆ. ದೊಡ್ಡ ಗೌಡರ ಜೊತೆಗೆ ಸಲಹೆ ಹಂಚಿಕೊಂಡಿದ್ದಾರೆ” ಎಂದರು.
“ಬಿಜೆಪಿ ಜೊತೆಗೆ ಎಷ್ಟು ಸೀಟ್ ಹಂಚಿಕೆಯಾಗಬೇಕು. ಮುಂದೆ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಬಗ್ಗೆ ಇಬ್ರಾಹಿಂ ಸಲಹೆ ನೀಡಿದ್ದಾರೆ. ಬಿಜೆಪಿ ಜೊತೆ ಹೋಗಲು ಯಾವುದೇ ವಿರೋಧವಿಲ್ಲ ಎಂಬುದನ್ನು ಇಬ್ರಾಹಿಂ ವ್ಯಕ್ತಪಡೆಸಿದ್ದಾರೆ” ಎಂದರು.
ಶಾಸಕರ ಅನುದಾನ ಕಡಿತ, ಪ್ರತಿಭಟನೆ ವಿಚಾರಕ್ಕೆ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, “ಈಗಾಗಲೇ ಶಾಸಕ ಕಾಗೆ ಹಾಗೂ ಬಿ.ಆರ್ ಪಾಟೀಲ್ ತಮ್ಮ ಅಸಮಧಾನ ಹೊರ ಹಾಕಿದ್ದಾರೆ. ಭೀಕರವಾದ ಬರಗಾದಲ್ಲೂ ಸರ್ಕಾರ ರೈತರ ಕಡೆಗೆ ನೋಡುತ್ತಿಲ್ಲ. ರೈತರಿಗೆ ನೀಡಬೇಕಾದ ಅನುದಾನ ನೀಡುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆ ಎಂದು ಅನಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯದ ಜನರಿಗೆ ಕೊರಗು ಉಂಟಾಗಿದೆ. ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟು ತಪ್ಪು ಮಾಡಿದ್ದೇವೆಂದು ಜನರಿಗೆ ಮನದಟ್ಟಾಗಿದೆ” ಎಂದರು.
“ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ತೆಗೆಯಬೇಕಿದೆ. ಇದಕ್ಕಾಗಿ ಜೆಡಿಎಸ್-ಬಿಜೆಪಿ ಒಟ್ಟಾಗಿ ಹೋಗಬೇಕು. ಮುಂದೆ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ದೇಶಕ್ಕೆ ಅಗತ್ಯವಾಗಿದೆ. ಅವರನ್ನು ಉಳಿಸುವ ನಿರ್ಣಯ ಮಾಡಿದ್ದೇವೆ” ಎಂದರು.