ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜು ಆಲಗೂರಗೆ ಲಿಂಗತ್ವ ಅಲ್ಪಸಂಖ್ಯಾತರು ವಿಜಯಪುರದಲ್ಲಿರುವ ಕಾಮಗ್ರೆಸ್ ಕಚೇರಿಗೆ ಆಗಮಿಸಿ ಬೆಂಬಲ ಸೂಚಿಸಿದ್ದಾರೆ.
ವಿಜಯಪುರ ಮತ ಕ್ಷೇತ್ರದಲ್ಲಿ ಮಂಗಳ ಮುಖಿಮತದಾರರು ಒಂದೂವರೆ ಸಾವಿರಕ್ಕಿಂತಲೂ ಹೆಚ್ಚು ಇದ್ದಾರೆ. ಇವರೆಲ್ಲ ರಾಜ್ಯ ಸಂಘಟನೆಗಳ ಸಲಹೆಯಂತೆ ಲಿಂಗತ್ವ ಅಲ್ಪಸಂಖ್ಯಾತರ ಕ್ಷೇಮಕ್ಕಾಗಿ ಇರುವ ಸಂಘಟನೆ ಆಲಗೂರರಿಗೆ ಬೆಂಬಲ ನೀಡಿದೆ.
ಈ ಸಂಬಂಧ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಇವರಿಗೆ ಧನ್ಯವಾದ ಸಲ್ಲಿಸಿ ಮಾತನಾಡಿದರು. ಕಾಂಗ್ರೆಸ್‌ಗೆ ಎಲ್ಲ ಕಡೆಯಿಂದ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ಇವತ್ತು ಲಿಂಗತ್ವ ಅಲ್ಪಸಂಖ್ಯಾತರ ಶುಭ ಹರಕೆ, ಬೆಂಬಲದಿಂದ ಮತ್ತಷ್ಟು ಖುಷಿಯಾಗಿದೆ. ಇವರ ಕ್ಷೇಮಾಭಿವೃದ್ಧಿಗೆ ಬದ್ಧ ಎಂದರು.
ಲಿಂಗಾಯತರು ಸೇರಿ ಎಲ್ಲರ ಬೆಂಬಲ
ನಮಗೆ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳ ಸಹಮತವೂ ಬಹುದೊಡ್ಡ ಮಟ್ಟದಲ್ಲಿ ದೊರೆತಿದೆ. ಸಚಿವರುಗಳಾದ ಲಕ್ಷ್ಮಣ ಸವದಿ, ಎಚ್.ಎಮ್. ರೇವಣ್ಣ, ರಾಮಲಿಂಗಾರೆಡ್ಡಿ, ಆರ್.ಬಿ.ತಿಮ್ಮಾಪುರ ಸೇರಿ ಅನೇಕ ದಿಗ್ಗಜರ ಸಭೆಗಳೂ ಆಯಾ ಸಮುದಾಯಕ್ಕನುಗುಣವಾಗಿ ನಡೆದಿವೆ. ಎಲ್ಲ ಸಮುದಾಯದವರ ಸಹಕಾರ, ಪ್ರೀತಿ ಸಿಗುತ್ತಿದೆ. ಮತದಾರರು ಈ ಸಲ ನಿಜವಾಗಿಯೂ ಬದಲಾವಣೆ ಬಯಸಿದ್ದಾರೆ. ಅವರೆಲ್ಲ ದಶಕಗಳಿಂದ ಲೋಕಸಭೆ ಕ್ಷೇತ್ರದ ಕಡೆಗಣನೆಯಿಂದ ಬೇಸತ್ತಿದ್ದರು ಎಂದು ಹೇಳಿದರು.
ಮಂಗಳ ಮುಖಿಯರ ಪ್ರತಿನಿಧಿಯಾಗಿ ಪ್ರಾರ್ಥನಾ ಅಂಬಿ ಮಾತನಾಡಿ, ಸಮಾಜದ, ಉಳಿದ ಪಕ್ಷಗಳು ಸೇರಿ ಎಲ್ಲರೂ ನಮ್ಮನ್ನು ಮೊದಲಿಂದ ಕಡೆಗಣಿಸಿದ್ದಾರೆ. ಈಗ ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟಿದ್ದೇವೆ. ನಮಗೆ ವಸತಿ ಸೇರಿ ಒಂದಷ್ಟು ಅನುಕೂಲಗಳು ಆಗಬೇಕು. ನಮಗೆ ಉದ್ಯೋಗ ನೀಡಿದರೆ ಸ್ವಾಭಿಮಾನಿಗಳಾಗಿ ಬದುಕುತ್ತೇವೆ. ಸ್ವಾವಲಂಬಿ ಜೀವನ ಮಾಡುತ್ತೇವೆ. ನಮಗೆ ರಾಜ್ಯ ಸರ್ಕಾರದ ಎರಡು ಸಾವಿರ ರೂ. ಗ್ಯಾರಂಟಿಯಲ್ಲಿ ಸಿಗಬೇಕು. ಕೆಲ ಅನುಕೂಲ ಮಾಡಿಕೊಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿ, ಮಂಗಳ ಮುಖಿಯರ ಸಂಘದ ಗುಲಾಬ ರಾಠೋಡ, ಸುನೀಲ, ಮೇಘಾ, ಮೈನುದ್ದೀನ್, ಶಬ್ಬೀರ್ ಕಾಗದ ಕೋಟಿ, ಸತೀಶ್, ಉಮಾ, ವಿಠ್ಠಲ ಸಾಳುಂಕೆ, ನಾಗಮ್ಮ, ಈರಣ್ಣ ಲಗಳಿ, ವಿಜು ಅನೇಕರಿದ್ದರು.