ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲೋಕಸಭಾ ಚುನಾವಣೆ ಕಾವು ಇಳಿದಿದ್ದರೇ, ಇತ್ತ ಕಡೆ ಬಿಸಿಲಿನ ಕಾವು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ತಾಪಮಾನವು ಕಳೆದ ಒಂದು ವಾರದಿಂದ 37 ಡಿಗ್ರಿ ಸೆಲ್ಸಿಯಸ್ ಇದ್ದು, ಜನರು ಈ ಬಿಸಿಲಿನ ಶಾಖಕ್ಕೆ ಹೈರಾಣಾಗಿದ್ದಾರೆ. ಹಾಗಾಗಿ, ತಂಪಾದ ಪಾನೀಯಗಳತ್ತ ಜನರು ಮುಖ ಮಾಡುತ್ತಿದ್ದಾರೆ. ಈ ನಡುವೆ, ಎಳನೀರು, ಕಬ್ಬಿನ ಜ್ಯೂಸ್ ಹಾಗೂ ಜ್ಯೂಸ್ ಅಂಗಡಿಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.
ಬಿಸಿಲಿನ ಧಗೆ ಹೆಚ್ಚಾಗಿದ್ದರೂ ಆರೋಗ್ಯದ ಬಗ್ಗೆ ಕಾಳಜಿ ಇರುವವರು ಹೆಚ್ಚಾಗಿ ಹಣ್ಣಿನ ಜ್ಯೂಸ್, ಕಬ್ಬಿನ ಜ್ಯೂಸ್ ಹಾಗೂ ಎಳನೀರು ಕುಡಿಯುತ್ತಿದ್ದಾರೆ. ಅದು ‘ಐಸ್‌ಲೆಸ್’ ಜ್ಯೂಸ್‌ಗೆ ಹೆಚ್ಚಾಗಿ ಮೊರೆ ಹೋಗಿದ್ದಾರೆ. ಇನ್ನು ಮಕ್ಕಳು, ಮಹಿಳೆಯರು ಐಸ್‌ಕ್ರೀಂ ಹೆಚ್ಚಾಗಿ ಖರೀದಿ ಮಾಡುತ್ತಿದ್ದಾರೆ. ಈ ನಡುವೆ, ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಹಣ್ಣಿನ ಜ್ಯೂಸ್, ಕಬ್ಬಿನ ಜ್ಯೂಸ್ ಹಾಗೂ ಎಳನೀರಿನ ಬೆಲೆ ಗಗನಕ್ಕೆ ಏರಿಕೆಯಾಗಿದೆ.
ಅಕಾಲಿಕ ಮಳೆಯ ಹಿನ್ನೆಲೆ, ನಗರದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಬೆಂಗಳೂರಿನ ಕೆಲವೆಡೆ ಒಮ್ಮೆ ತುಂತುರು ಮಳೆಯಾದರೇ, ಮತ್ತೆ ಮಳೆಯ ಆಗಮನವಿಲ್ಲ. ಕಳೆದ ಒಂದು ವಾರದಿಂದ ತಾಪಮಾನವು 37 ಡಿಗ್ರಿ ಸೆಲ್ಸಿಯಸ್ ಇದೆ. ನಗರದ ಜನರು ಸುಡು ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ. ಇನ್ನು ಕೆಲಸದ ನಿಮಿತ್ತ ಮನೆ, ಕಚೇರಿಗಳಿಂದ ಹೊರ ಬರುವ ಜನರು ರಸ್ತೆ ಬದಿ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಳನೀರು, ಮಜ್ಜಿಗೆ, ಜ್ಯೂಸ್, ಕಬ್ಬಿನ ಹಾಲು ಸೇವಿಸಿ ಬಾಯಾರಿಕೆ ನೀಗಿಸಿಕೊಳ್ಳುತ್ತಿದ್ದಾರೆ. ತಂಪಾದ ಪಾನೀಯ ಸೇವನೆ ಮಾಡಿ ದೇಹವನ್ನ ತಂಪು ಮಾಡಿಕೊಳ್ಳುತ್ತಿದ್ದಾರೆ.
ಕಳೆದ ಎರಡು ಮೂರು ತಿಂಗಳುಗಳಿಗೆ ಹೋಲಿಕೆ ಮಾಡಿದರೆ, ಈಗ ಎಳನೀರು ಹಾಗೂ ಜ್ಯೂಸ್ ಬೆಲೆ ಜಾಸ್ತಿಯಾಗಿದೆ. ಜ್ಯೂಸ್ಗಳ ಬೆಲೆಯಲ್ಲಿ ₹10 ರಿಂದ ₹20 ಏರಿಕೆಯಾದರೆ, ಎಳನೀರು ಬೆಲೆ ₹50 ರಿಂದ ₹70 ವರೆಗೂ ಮಾರಾಟವಾಗುತ್ತಿದೆ. ₹30 ನೀಡಿ ಜನರು ನಿಂಬೆ ಶರಬತ್ತು ಕುಡಿಯುತ್ತಿದ್ದಾರೆ.
ಪ್ರತಿದಿನ ಒಂದೊಂದು ಅಂಗಡಿಗಳಲ್ಲಿಯೂ 500 ರಿಂದ 600 ಗ್ಲಾಸ್ ಜ್ಯೂಸ್ ಮಾರಾಟ ಆಗುತ್ತಿವೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಬೆಲೆ ಏರಿಕೆಯಾದರೂ ಎಳನೀರು ಕುಡಿಯುವ ಗ್ರಾಹಕರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ ಎಂದೆನ್ನುತ್ತಾರೆ ಅಂಗಡಿ ಮಾಲೀಕರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 446 ಅಕ್ರಮ ಒಳಚರಂಡಿ ಸಂಪರ್ಕ ಗುರುತಿಸಿದ ಬಿಡಬ್ಲೂಎಸ್‌ಎಸ್‌ಬಿ
ಹಣ್ಣಿನ ಜ್ಯೂಸ್ ದರ ಹೀಗಿದೆ?
ಬೆಂಗಳೂರಿನ ಅಂಗಡಿಗಳಲ್ಲಿ ₹60 ಇದ್ದ ಆ್ಯಪಲ್ ಜ್ಯೂಸ್ ದರ ಇದೀಗ ₹65ಕ್ಕೆ ಏರಿಕೆಯಾಗಿದೆ. ಪ್ರೊಮೋಗ್ರನೇಟ್ ₹65, ಮುಸಂಬಿ ಜ್ಯೂಸ್ ₹50, ಆರೆಂಜ್ ₹55, ಬಾನಾನ ಮಿಲ್ಕ್ ಶೇಕ್ ₹60, ಕ್ಯಾರೆಟ್ ಜ್ಯೂಸ್ ₹65, ವಾಟರ್ಮೆಲನ್ ₹50, ಫೈನಾಪಲ್ ₹50, ಮಸ್ಕ್ ಮೆಲನ್ ₹50, ಮಿಕ್ಸ್ ಜ್ಯೂಸ್ ₹50, ಡ್ರೈ ಪ್ರೂಟ್ಸ್ ಶೇಕ್ ₹80, ಸಪೋಟ ₹55, ಪಪ್ಪಾಯ ಜ್ಯೂಸ್ ₹55, ಗ್ರೇಫ್ಸ್ ಜ್ಯೂಸ್ ₹50, ಪಲ್ಲಿ ಗ್ರೇಪ್ ಜ್ಯೂಸ್ ₹50, ಕಬ್ಬಿನ ಜ್ಯೂಸ್ ₹40 ಹಾಗೂ ಟೆಂಡರ್ ಕೊಕನಟ್ ಮಿಲ್ಕ್ ಶೇಕ್ ₹80 ವರೆಗೂ ಏರಿಕೆಯಾಗಿದೆ.