ವಿಜಯಪುರ ನಗರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ನೂತನ ವಸತಿ ನಿಲಯ ಮಂಜೂರು ಮಾಡಲು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪುಂಡಲೀಕ ಮಾನವರ ಅವರಿಗೆ ದಲಿತ ವಿದ್ಯಾರ್ಥಿ ಪರಿಷತ್ ಮನವಿ ಮೂಲಕ ಆಗ್ರಹಿಸಿದೆ.
ದಲಿತ ವಿದ್ಯಾರ್ಥಿ ಪರಿಷತ್ ಮುಖಂಡರಾದ ಅಕ್ಷಯ್ ಕುಮಾರ್ ಅಜಮನಿಯವರು ಮಾತನಾಡಿ, “ವಿಜಯಪುರ ಜಿಲ್ಲೆಯಲ್ಲಿರುವ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯವಾದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ರಾಜ್ಯದ ನಾನಾ ಭಾಗಗಳಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಈ ಬಾರಿ ಹೆಚ್ಚಿನ ವಿದ್ಯಾರ್ಥಿನಿಯರು ಕೋರ್ಸ್‌ಗಳಿಗೆ ಪ್ರವೇಶ ಪಡೆದುಕೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲಿ ಈಗಿರುವ ವಸತಿ ನಿಲಯಗಳಲ್ಲಿ ಅವಕಾಶ ಸಿಗದೇ ಹೊರಗಡೆ ರೂಮ್ ಮಾಡಿಕೊಂಡು ಓದುವ ಸಂಕಷ್ಟ ಉಂಟಾಗಿದೆ” ಎಂದು ತಿಳಿಸಿದರು.
ಕಾಲೇಜಿನ ಸಮಯಕ್ಕೆ ಸರಿಯಾಗಿ ಬಸ್‌ಗಳಿಲ್ಲದೆ ತರಗತಿಗಳನ್ನು ತಪ್ಪಿಸುವ ಪರಿಸ್ಥಿತಿ ಉಂಟಾಗಿದೆ. ಪ್ರತಿದಿನ ಕಾಲೇಜಿನಿಂದ ರೂಮಿಗೆ-ರೂಮಿನಿಂದ ಕಾಲೇಜಿಗೆ ಓಡಾಡುವುದರಿಂದ ವಿದ್ಯಾಭ್ಯಾಸದಲ್ಲಿ ಕುಂಠಿತವಾಗುತ್ತಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಮನವಿಯಲ್ಲಿ ತಿಳಿಸಿದೆ.
ಹೆಣ್ಣು ಮಕ್ಕಳ ರಕ್ಷಣೆ ಮತ್ತು ಹಿತದೃಷ್ಟಿಯಯಿಂದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇಲ್ಲಿವರೆಗೆ ಒಂದು ವಸತಿ ನಿಲಯವು ಇಲ್ಲದೆ ಇರುವುದು ದುರದೃಷ್ಟದ ಸಂಗತಿ. ವಿಶ್ವವಿದ್ಯಾನಿಲಯದ ಕ್ಯಾಂಪಸ್ ಒಳಗಡೆ ವಸತಿನಿಲಯ ಸ್ಥಾಪಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾದೇಶ್, ಯುವರಾಜ್ ಓಲೇಕಾರ್ , ಯಾಸೀನ್ ಇನಾಮದಾರ್, ಸಂದೇಶ್ ಕುಮುಟಗಿ, ರವಿ ವಾಲಿಕಾರ, ಪ್ರವೀಣ ಬನಸೋಡೆ, ಮಾಂತೇಶ, ಯುವರಾಜ್ ಮುಂತಾದವರು ಭಾಗಿಯಾಗಿದ್ದರು.
