ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ನೀಡದೇ ಇರುವುದರಿಂದ ಹಲವಾರು ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಿದ್ದು, ಪರದಾಡುವಂತಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲಾಧಿಕಾರಿ ಮೂಲಕ ಸಮಾಜಕಲ್ಯಾಣ ಇಲಾಖೆ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರಿಗೆ ಮನವಿ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
“ಸಂವಿಧಾನ ಜಾರಿಯಾದ ಬಳಿಕ ರಾಜ್ಯದ ಶೋಷಿತ ಸಮುದಾಯದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಆರಂಭಿಸಿದ್ದಾರೆ. ಬಾಬಾ ಸಾಹೇಬರು ನೀಡಿದ ಮೀಸಲಾತಿಯಿಂದ ಶಿಕ್ಷಣ ಪಡೆಯುತ್ತಿರುವುದು ಇದೇ ಮೊದಲ ತಲೆಮಾರು. ಇದನ್ನು ಅರಿಯದ ಕಳೆದ ಬಿಜೆಪಿ ಸರ್ಕಾರ ಮ್ಯಾನೇಜ್‌ಮೆಂಟ್ ಕೋಟಾದಡಿ ಓದುತ್ತಿರುವ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ನೀಡದೆ ಸತಾಯಿಸಿದ್ದು, ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ” ಎಂದು ಸಂಘಟನೆ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಆರೋಪಿಸಿದರು.
“ವ್ಯಾಸಂಗಕ್ಕೆ ಪ್ರವೇಶ ಪಡೆದ ಪ್ರತಿ ವಿದ್ಯಾರ್ಥಿಗಳಿಗೂ ಶಿಷ್ಯವೇತನ ಮಂಜೂರು ಮಾಡಬೇಕು. ವಸತಿ ನಿಲಯಗಳಲ್ಲಿ ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್ ವಿತರಿಸಬೇಕು. ಹಾಗೇಯೇ ಇಲಾಖೆ ಮೂಲಕ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಸ್ಥಗಿತಗೊಂಡಿದ್ದು, ಅದನ್ನು ಪುನಃ ಆರಂಭಿಸಬೇಕು” ಎಂದು ಒತ್ತಾಯಿಸಿದರು.
“ಪ್ರತಿ ವಸತಿ ನಿಲಯಗಳನ್ನೂ ಶೈಕ್ಷಣಿಕ ಪೂರಕ ಕೇಂದ್ರವಾಗಿ ನಿರ್ಮಾಣ ಮಾಡಬೇಕು. ಸ್ಪೋಕನ್ ಇಂಗ್ಲಿಷ್ ತರಬೇತಿ ಹಾಗೂ ಬೇಸಿಕ್ ಕಂಪ್ಯೂಟರ್ ಕೋರ್ಸ್ ಮೂಲಕ ತರಬೇತಿ ನೀಡಬೇಕು. ವಿದ್ಯಾರ್ಥಿಗಳ ಪಾಲಕರು ಹಾಗೂ ಇಲಾಖೆಯ ಅಧಿಕಾರಿಗಳೂ ಒಳಗೊಂಡಂತೆ ವಸತಿ ನಿಲಯ ಮೇಲುಸ್ತುವಾರಿ ಸಮಿತಿ ರಚಿಸಿ, ವಸತಿ ನಿಲಯಗಳಲ್ಲಿ ಶಿಸ್ತು ಕಾಪಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅಂಬೇಡ್ಕರ್ ಇಡೀ ದೇಶದ ಆಸ್ತಿ : ಕುಲಪತಿ ಎಂ ಆರ್ ಗಂಗಾಧರ್
“ವಸತಿನಿಲಯ ಮೇಲುಸ್ತುವಾರಿ ಸಮಿತಿ ಸಭೆ ಕಡ್ಡಾಯವಾಗಿ ಪ್ರತಿ ತಿಂಗಳು ನಡೆಯುವಂತೆ ನೋಡಿಕೊಳ್ಳಬೇಕು. ವಸತಿ ನಿಲಯಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಗ್ರಂಥಾಲಯ ತೆರೆಯಬೇಕು. ಪ್ರಸ್ತುತ ಬೆಲೆ ಏರಿಕೆ ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳ ವಿದ್ಯಾರ್ಥಿವೇತನದಲ್ಲಿ ಶೇ.50ರಷ್ಟು ಏರಿಕೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ ಮಾದೇಶ್ ಚಲವಾದಿ, ಸದಾಶಿವ ಚಲವಾದಿ, ಪ್ರಭು ಹೊಸಮನಿ, ಬಸವರಾಜ ಮಾದರ, ಕಾರ್ತಿಕ, ಆಕಾಶ, ಪ್ರವೀಣ್ ಸೇರಿದಂತೆ ಇತರರು ಇದ್ದರು.