ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯಲ್ಲಿ ಭದ್ರತಾ ಸಿಬ್ಬಂದಿ(ಸೆಕ್ಯೂರಿಟಿ)ಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಘಾಳಪೂಜಿ ಎಂಬಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮುದ್ದೇಬಿಹಾಳ ತಾಲೂಕಿನಲ್ಲಿರುವ ಘಾಳಪೂಜಿ ಗ್ರಾಮದಲ್ಲಿ ಜೂನ್ 29ರಂದು ಘಟನೆ ನಡೆದಿದೆ. ಭೀಮಾ ಬಾಯಿ ಚಲವಾದಿ(29) ಎಂಬುವವರ ಮೇಲೆ ದುರುಳ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾರೆ.
ಮೃತ ಮಹಿಳೆಯ ಪತಿ ಸಂಗಪ್ಪ ಚಲವಾದಿ ಘಾಳಪೂಜಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡಿಕೊಂಡಿದ್ದು, ಅವರ ಪತ್ನಿ ಭೀಮಾ ಬಾಯಿ ಅವರೂ ಅದೇ ವಸತಿ ಶಾಲೆಯಲ್ಲಿ ಸೆಕ್ಯೂರಿಟಿ ಆಗಿದ್ದರು. ಸಂಗಪ್ಪ ಮನೆಗೆ ತೆರಳಿದ ಬಳಿಕ ದುರುಳರು ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ರಾಜ್ಯಾಧ್ಯಕ್ಷ ಮತೀನ್ ಕುಮಾರ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಘಾಳಪೂಜಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಸೆಕ್ಯೂರಿಟಿ ಆಗಿ ಕೆಲಸ ಮಾಡುತ್ತಿದ್ದ ದಲಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದಾರೆ. ಆದರೆ, ಯಾವುದೇ ಸುದ್ದಿ ಮಾಧ್ಯಮಗಳು ಈ ಪ್ರಕರಣವನ್ನು ವರದಿ ಮಾಡಿಲ್ಲ” ಎಂದು ಆರೋಪಿಸಿದರು.
“ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಇನ್ನೊಬ್ಬ ಆರೋಪಿ ಪತ್ತೆಯಾಗಿಲ್ಲ. ಮೃತ ಮಹಿಳೆಯ ಕುಟುಂಬಸ್ಥರ ಹೇಳಿಕೆಯಂತೆ ಪೊಲೀಸ್ ಇಲಾಖೆ ದೂರು ದಾಖಲಿಸಿಕೊಂಡಿದೆ. ಆದರೆ, ಪ್ರಕರಣವನ್ನು ರಹಸ್ಯವಾಗಿ ಕೊನೆಗೊಳಿಸುವ ಹುನ್ನಾರ ನಡೆಸುತ್ತಿದೆ” ಎಂದು ದೂರಿದರು.
ಮುದ್ದೇಬಿಹಾಳ ಡಿಎಸ್‌ಪಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಜೂನ್ 29ರಂದು ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿರುವುದಾಗಿ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪ್ರಕರಣ ತನಿಖೆ ಹಂತದಲ್ಲಿದೆ. ಪ್ರಕರಣದ ಪೂರ್ಣ ತನಿಖೆ ನಡೆದು ಚಾರ್ಜ್‌ಶೀಟ್ ಬರುವವರೆಗೆ ಯಾವುದೇ ಮಾಹಿತಿ ಹೇಳಲಾಗುವುದಿಲ್ಲ” ಎಂದು ಹೇಳಿದರು.
“ಏನಾಗಿದೆ ಎಂಬುದು ನಮಗೆ ಗೊತ್ತಿಲ್ಲ. ತನಿಖೆಯ ಬಳಿಕ ಮಾಹಿತಿ ಹೊರ ಬೀಳಬೇಕಾಗಿದೆ. ಮೃತ ಮಹಿಳೆಯ ಗಂಡ ನೀಡಿರುವ ದೂರಿನಂತೆ ಅಟ್ರಾಸಿಟಿ, ರೇಪ್ ಅಂಡ್ ಮರ್ಡರ್ ಕೇಸ್ ದಾಖಲಾಗಿದೆ. ತನಿಖೆ ಮುಗಿಯಲು ಎರಡು ತಿಂಗಳು ಆಗಬಹುದು” ಎಂದು ತಿಳಿಸಿದರು.
“ತಮ್ಮ ಮನೆಗೆ ಬಂದ ಶರಣಪ್ಪ ಮಂಗಳೂರು, ಗಂಗಾಧರ ಜುಲಗುಡ್ಡ, ಸಿದ್ಧಪ್ಪ ಜಲಗುಡ್ಡ, ಸುರೇಶ ಘಾಳಪೂಜಿ ಎಂಬುವವರು ಜೂನ್ 29ರ ರಾತ್ರಿ ಸಮಯದಲ್ಲಿ ತನ್ನ ಮನೆಗೆ ಬಂದಿದ್ದು, ʼನಿನ್ನ ಹೆಂಡತಿಗೆ ಹುಷಾರಿಲ್ಲ. ಮುದ್ದೇಬಿಹಾಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬಾ ಹೋಗೋಣ ಎಂದು ಗಂಗಾಧರ ಜುಲಗುಡ್ಡ ಅವರ ಕಾರಿನಲ್ಲಿ ಮುದ್ದೆಬೀಹಾಳ ಸರ್ಕಾರಿ ಆಸ್ಪತ್ರೆಗೆ ನನ್ನು ಕರೆದೊಯ್ದರು” ಎಂದು ಮೃತ ಮಹಿಳೆಯ ಗಂಡ ಸಂಗಪ್ಪ ಚಲವಾದಿ ಘಾಳಪೂಜಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಆಸ್ಪತ್ರೆಗೆ ಹೋಗಿ ನೋಡುವ ವೇಳೆಗಾಗಲೇ ತನ್ನ ಹೆಂಡತಿಯ ಪ್ರಾಣ ಹೋಗಿತ್ತು. ಆಸ್ಪತ್ರೆಯಲ್ಲಿ ನಾಮಕಾವಸ್ತೆಗೆ ತನ್ನ ಹೆಂಡತಿಯ ಮೂಗಿಗೆ ಪೈಪ್ ಹಾಕಿದ್ದರು. ಬಳಿಕ ಶವಾಗಾರಕ್ಕೆ ಹಾಕಿದರು. ಅದೇ ಸಮಯಕ್ಕೆ ಆಸ್ಪತ್ರೆಗೆ ಬಂದ ರಾಜು ಅಲಿಯಾಸ್ ನಾಗರಾಜ ಬಡಿಗೇರ ಎಂಬಾತನ್ನು ವಿಚಾರಿಸಿದಾಗ ಆತ ತಾವೇ ಆಸ್ಪತ್ರೆಗೆ ತಂದು ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.
“ರಾಜು ಬಡಿಗೇರ, ಬಸವರಾಜ ನಾಗರಬೆಟ್ಟ, ಪ್ರವೀಣ ನಾಗರಬೆಟ್ಟ, ವೀರೇಶ ನಾಗರಬೆಟ್ಟ, ಅಮರೇಶ ನಾಗರಬೆಟ್ಟ ಇವರೆಲ್ಲರೂ ಒಗ್ಗೂಡಿ ತನ್ನ ಹೆಂಡತಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾರೆ. ಜೂನ್ 29ರ ರಾತ್ರಿ 7-30ರಿಂದ 8ರ ನಡುವೆ ಘಾಳಪೂಜಿ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆ ಸಮೀಪ ಚನ್ನಬಸವೇಶ್ವರ ಪಾದಗಟ್ಟಿಯ ಹತ್ತಿರ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧರ್ಮಸ್ಥಳ ಧರ್ಮಾಧಿಕಾರಿ ಪರ ಪ್ರತಿಭಟನೆ; ಸೌಜನ್ಯ ಕುಟುಂಬದ ಮೇಲೆ ಹಲ್ಲೆಗೆ ಯತ್ನ
“ಅತ್ಯಾಚಾರಿ ಮತ್ತು ಹತ್ಯೆ ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.