ವಿಜಯಪುರ ಜಿಲ್ಲೆಯ ತಾಳಿಕೋಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿ ಪೂಜೆ ಸಲ್ಲಿಸದೆ ಅವಮಾನ ಮಾಡಿದ್ದಾರೆ ಎಂದು ಅಂಬೇಡ್ಕರ್ ಸೇನೆ ಕಾರ್ಯಕರ್ತರು ಆರೋಪಿಸಿ, ಬೇಜವಾಬ್ದಾರಿ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಿ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ವಿಜಯಪುರ ಜಿಲ್ಲೆಯ ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದ ಎದುರು ಅಂಬೇಡ್ಕರ್ ಸೇನೆ ಪದಾಧಿಕಾರಿಗಳು ಜಮಾಯಿಸಿ ಪ್ರತಿಭಟನೆ ನಡೆಸಿದರು. ಬಳಿಕ ತಾಳಿಕೋಟೆ ತಹಶೀಲ್ದಾರ್ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
“ಕರ್ನಾಟಕ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಈಗಾಗಲೇ ಘೋಷಣೆ ಮಾಡಿ ಫೆಬ್ರವರಿ 17ರಂದು ಎಲ್ಲ ಸರ್ಕಾರಿ ಕಾರ್ಯಾಲಯ ಹಾಗೂ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿ ಕಡ್ಡಾಯವಾಗಿ ಪೂಜೆ ಸಲ್ಲಿಸುವಂತೆ ಆದೇಶಿಸಲಾಗಿದೆ. ಆದರೆ, ಸದರಿ ಆಸ್ಪತ್ರೆಯಲ್ಲಿ ಯಾವುದೇ ಕಾರ್ಯ ನಡೆಸಿಲ್ಲ” ಎಂದರು.
“ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯಾವುದೇ ಆಚರಣೆ ಮಾಡದೆ ಬಸವಣ್ಣನವರಿಗೆ ಅಗೌರವ ತೋರಿದ್ದು, ಸರ್ಕಾರದ ಆದೇಶವನ್ನು ಪಾಲಿಸದೆ ಇರುವುದು ಕಾನೂನು ಬಾಹಿರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ವಜಾಗೊಳಿಸದಿದ್ದರೆ ತೀವ್ರ ಹೋರಾಟ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಐದು ಗ್ಯಾರಂಟಿಗಳ ಜಾರಿಗೆ ಒತ್ತು ನೀಡಿದ ಬಜೆಟ್; ರೈತರು, ಅಸಂಘಟಿತ ಕಾರ್ಮಿಕರ ನಿರ್ಲಕ್ಷ್ಯ
ವಿಜಯಪುರ ಜಿಲ್ಲಾ ಉಪಾಧ್ಯಕ್ಷ ಬಸು ಈ ಕಟ್ಟಿಮನಿ, ಅಧ್ಯಕ್ಷ ಗೋಪಾಲ್ ಕಟ್ಟಿಮನಿ, ಕಾರ್ಯದರ್ಶಿ ಸೇರಿದಂತೆ ಕಾರ್ಯಕರ್ತರು, ಪದಾಧಿಕಾರಿಗಳು ಇದ್ದರು.