ಕುರಿಗಾಹಿಗಳ ಮೇಲಿನ ದೌರ್ಜನ್ಯ, ಸುಲಿಗೆ ತಡೆ ಹಾಗೂ ಸಂಚಾರಿ ಕುರಿಗಾಹಿಗಳ ರಕ್ಷಣೆಗಾಗಿ ರಾಜ್ಯ ಸರ್ಕಾರ ಕೂಡಲೇ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿ ಆ.19ರಂದು ‘ಕುರಿಗಾರರ ನಡಿಗೆ ವಿಧಾನಸೌಧದ ಕಡೆಗೆ ಎಂಬ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಹೋರಾಟ ಸಮಿತಿಯ ವಿಜಯಪುರ ಜಿಲ್ಲಾಧ್ಯಕ್ಷ ಬೀರಪ್ಪ ಜಮ್ಮನಾಳ ತಿಳಿಸಿದರು.
ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರಿಗಾಹಿಗಳ ಸಂಕಷ್ಟ ಅರಿತು ಈಗಾಗಲೇ ರಾಜ್ಯ ಸರ್ಕಾರ ಕಾಯ್ದೆ ರೂಪಿಸುವ ಬಗ್ಗೆ ಪ್ರಸ್ತಾಪಿಸಿದೆ. ಆದರೆ, ಅದನ್ನು ಜಾರಿಗೆ ತರುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದೆ. ಆದ್ದರಿಂದ ಇದೇ ಅಧಿವೇಶನದಲ್ಲಿ ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ (ರಕ್ಷಣೆ ಮತ್ತು ದೌರ್ಜನ್ಯ ತಡೆ) ಕಾಯ್ದೆ ಜಾರಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಈ ಹೋರಾಟ ಹಮ್ಮಿಕೊಳ್ಳಲಾಗಿದೆ. ಅಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಎಲ್ಲ ಕುರಿಗಾಹಿಗಳು, ರೈತರು ಮತ್ತು ಸಮುದಾಯಗಳ ಮುಖಂಡರನ್ನೊಳಗೊಂಡ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ರಾಜ್ಯಾದ್ಯಂತ ಇತ್ತೀಚೆಗೆ ಕುರಿಗಾಹಿಗಳ ಮೇಲೆ ದೌರ್ಜನ್ಯ, ಹಲ್ಲೆ, ಬೆದರಿಕೆ, ಕೊಲೆ, ಅತ್ಯಾಚಾರ ಮತ್ತು ಕುರಿ ಕಳ್ಳತನ, ಅರಣ್ಯ ಅಧಿಕಾರಿಗಳ ಲಂಚದ ಬೇಡಿಕೆ ಅಧಿಕವಾಗಿದೆ. ಇದರಿಂದ ಕುರಿಗಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಕಲುಷಿತ ನೀರು, ಕಾಡು ಪ್ರಾಣಿಗಳ ದಾಳಿ, ಪ್ರಾಕೃತಿಕ ಅವಘಡಗಳು ಹಾಗೂ ಇನ್ನಿತರ ಕಾರಣಗಳಿಂದ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೂ, ಸರ್ಕಾರದ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ಈ ಬಗ್ಗೆ ಕಳೆದ ಹತ್ತು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಕೂಡ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸಂಚಾಲಕ ಯಲ್ಲಪ್ಪ ಹೆಗಡೆ ಮಾತನಾಡಿ, ಕುರಿಗಾಹಿಗಳಿಗೆ ಕುರಿ ಕಾಯುವುದೇ ಪ್ರಮುಖ ಉದ್ಯೋಗವಾಗಿದೆ. ಆದರೆ, ನಿರಂತರ ದೌರ್ಜನ್ಯಗಳು ನಡೆಯುತ್ತಲೇ ಇವೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದ ಶರಣಪ್ಪ ಜಮ್ಮನಕಟ್ಟಿ, ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಪ್ರಭು ಮೇತ್ರಿ ಎಂಬುವವರನ್ನು ಕುರಿ ಕಳ್ಳತನ ನಡೆಸುವವರು ಕೊಲೆಗೈದಿರುವುದೇ ಇದಕ್ಕೆ ನಿದರ್ಶನ. ಅಷ್ಟೇ ಅಲ್ಲ, ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಲಕ್ಷ್ಮಿ ಕಳ್ಳಿಮನಿ ಎಂಬ ಕುರಿಗಾಹಿ ಮಹಿಳೆಯನ್ನು ಅತ್ಯಾಚಾರ ಮಾಡಿ, ಕ್ರೂರವಾಗಿ ಕೊಲೆ ಮಾಡಿದ ಘಟನೆಯೂ ನಡೆದಿದೆ. ಆದ್ದರಿಂದ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಸರ್ಕಾರ ಕಾನೂನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ವಿಜಯಪುರ | 18 ಸರ್ಕಾರಿ ಪ್ರಾಥಮಿಕ ಶಾಲೆಗಳು ಪ್ರೌಢಶಾಲೆಗಳಾಗಿ ಉನ್ನತೀಕರಣ: ಸಚಿವ ಎಂ ಬಿ ಪಾಟೀಲ್
ಈ ವೇಳೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೀರಪ್ಪ ಸೊಡ್ಡಿ, ಮುಖಂಡರಾದ ಸಧು ಪೂಜಾರಿ, ದೇವಕಾಂತ ಬಿಜ್ಜರಗಿ, ಮಲ್ಲು ಬೀದರಿ,ಯಲ್ಲಪ್ಪ ಗುಂಡಕರ್ಜಿಗಿ, ರಾಜು ಎಂ ಕಗ್ಗೊಡ,ಪಿ ಕೆ ಜಿದ್ದಿ ಇದ್ದರು.
