ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆ ಮತ್ತು ಬೆಂಗಳೂರಿನ ಆಸ್ಟರ್ ಡಿಎಂ ಫೌಂಡೇಷನ್ ಸಹಯೋಗದೊಂದಿಗೆ ವಿಶೇಷಚೇತನರಿಗೆ ವೀಲ್‌ಚೇರ್ ಹಾಗೂ ಇತರೆ ಸಲಕರಣೆಗಳ ವಿತರಣೆ ಕಾರ್ಯಕ್ರಮ ನಡೆಯಿತು.
ವಿಜಯಪುರ ನಗರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನವಚೇತನ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಆಸ್ಟರ್ ಡಿಎಂ ಫೌಂಡೇಷನ್ ಮುಖ್ಯಸ್ಥ ರೋಹನ ಪ್ರಾಂಕೊ ಮಾತನಾಡಿ, “ಸಮಾಜದಲ್ಲಿರುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ನ್ಯೂನ್ಯತೆ, ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಂತು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕಲು ಉತ್ತಮ ಬದುಕು ಕಟ್ಟಿಕೊಳ್ಳಲು ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮತ್ತು ಇತರೆ ಸಂಸ್ಥೆಗಳು ಮಾಡುತ್ತಿವೆ” ಎಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅಥಿತಿ, ಅಸ್ಟರ್ ಡಿಎಂ ಫೌಂಡೇಷನ್ ಮಕ್ಕಳ ವೈದ್ಯಕೀಯ ತಜ್ಞ ಡಾ. ಚೇತನ್ ಮಾತನಾಡಿ, “ವಿಶೇಷ ಚೇತನರು ಹಲವಾರು ರಂಗಗಳಲ್ಲಿ ಸಾಧನೆ ಮಾಡಿರುವವರನ್ನು ನಾವು ನೋಡುತ್ತಿದ್ದೇವೆ. ಕ್ರೀಡೆ, ಕಲೆ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಸಾದನೆಗಳನ್ನು ಮಾಡಿದ್ದಾರೆ. ಸರ್ಕಾರವೂ ಕೂಡಾ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅವುಗಳನ್ನು ಸದುಪಯೋಗ ಮಾಡಿಕೊಂಡು ಮುಂದೆ ಸಾಗಬೇಕು” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಕುಡಿದ ಮತ್ತಿನಲ್ಲಿ ವ್ಯಕ್ತಿಯ ಕೊಲೆ; 6 ತಾಸಿನಲ್ಲಿ ಆರೋಪಿಗಳ ಪತ್ತೆಹಚ್ಚುವಲ್ಲಿ ತನಿಖಾ ತಂಡ ಯಶಸ್ವಿ
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾ. ಟಿಯೋಲ್ ಮಚಾದೋ ಮಾತನಾಡಿ, “ವಿಶೇಷಚೇತನರನ್ನು ಅನುಕಂಪದ ದೃಷ್ಟಿಯಿಂದ ನೋಡುತ್ತಿಲ್ಲ. ಅವರು ಸ್ವಾವಲಂಬಿಗಳಾಗಿ ಬದುಕಲು ಅವಕಾಶಗಳನ್ನು ಮಾಡಿಕೊಡಲಾಗುತ್ತಿದೆ. ಇವತ್ತು ವಿಶೇಷವಾಗಿ ಸಲಕರಣೆಗಳನ್ನು ವಿತರಿಸಲಾಗಿದೆ. ಇನ್ನು ಮನೆಯಿಂದ ಒಂದು ಹೆಜ್ಜೆ ಮುಂದೆ ಬಂದು ಸ್ವ-ಉದ್ಯೋಗ ಮಾಡಲು ಅಥವಾ ತಮ್ಮ ಯಾವುದೇ ಆಗತ್ಯತೆಗಳನ್ನು ಪೂರೈಸಿಕೊಳ್ಳಲು ಅನುಕೂಲವಾಗುತ್ತದೆ. ನೀವೂ ಕೂಡ ಸ್ವಾವಲಂಬಿಗಳಾಗಿ ಯಾರಿಗೂ ಹೊರೆಯಾಗದಂತೆ ಜೀವನ ನಡೆಸಬೇಕು” ಎಂದು ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಮಂದಿ ವಿಶೇಷಚೇತನರು ಭಾಗಿಯಾಗಿ ಸಲಕರಣೆ ಪಡೆದುಕೊಂಡರು.