ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ವಸತಿನಿಲಯ ಮಂಜೂರು ಮಾಡುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ವಿಜಯಪುರ ಜಿ.ಪಂ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ರಿಷಿ ಆನಂದ್ ಅವರಿಗೆ ಮನವಿ ಸಲ್ಲಿಸಿದರು.
ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ ಅಕ್ಷಯ್ ಕುಮಾರ್ ಅಜಮನಿ ಮಾತನಾಡಿ,”ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನೂತನ ವಸತಿನಿಲಯ ಸ್ಥಾಪಿಸಬೇಕು. ಉನ್ನತ ವಿದ್ಯಾಭ್ಯಾಸಕ್ಕಾಗಿ ರಾಜ್ಯದ ಹಲವು ಭಾಗಗಳಿಂದ ವಿದ್ಯಾರ್ಥಿನಿಯರು ಆಗಮಿಸುತ್ತಿದ್ದಾರೆ. ಪ್ರಸ್ತುತ ವರ್ಷವೂ ಹೆಚ್ಚಿನ ವಿದ್ಯಾರ್ಥಿನಿಯರು ಕೋರ್ಸ್‌ಗಳಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಆದರೆ, ವಿದ್ಯಾರ್ಥಿಗಳು ಉಳಿದುಕೊಳ್ಳಲು ವಸತಿನಿಲಯದಲ್ಲಿ ಅವಕಾಶ ಸಿಕ್ಕಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಮಹಿಳಾ ವಿವಿ ಕ್ಯಾಂಪಸ್‌ನ ವಸತಿ ನಿಲಯಗಳಲ್ಲಿ ಸ್ಥಳಾವಕಾಶ ಇಲ್ಲದೆ ಹೊರಗೆ ಬಾಡಿಗೆ ರೂಮ್ ಮಾಡಿಕೊಂಡು ಓದುವಂತಹ ದುಃಸ್ಥಿತಿ ಎದುರಾಗಿದೆ. ಬಹುತೇಕ ಬಡ ಸಮುದಾಯಗಳ ವಿದ್ಯಾರ್ಥಿನಿಯರು ಮಹಿಳಾ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವುದರಿಂದ ದುಡಿಯದೇ ಬಾಡಿಗೆ ಕಟ್ಟಿಕೊಂಡು ಓದುವು ಕಷ್ಟದ ಸಂಗತಿ. ಅದರಲ್ಲೂ ಕಾಲೇಜಿನ ಸಮಯಕ್ಕೆ ಸರಿಯಾಗಿ ಬಸ್‌ಗಳಿಲ್ಲದೆ ಕ್ಲಾಸ್‌ಗಳನ್ನು ತಪ್ಪಿಸುವ ಸಂಭವ ಉಂಟಾಗಿದೆ. ಪ್ರತಿದಿನ ಕಾಲೇಜಿಗು ರೂಮಿಗು ಓಡಾಡುವುದರಿಂದ ವಿದ್ಯಾಭ್ಯಾಸದಲ್ಲಿ ಕುಂಠಿತವಾಗುತ್ತಿದೆ” ಎಂದು ದೂರಿದರು.
“ಹೆಣ್ಣು ಮಕ್ಕಳ ರಕ್ಷಣೆ ಮತ್ತು ಹಿತದೃಷ್ಟಿಯಿಂದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ರಾಜ್ಯ ಸರ್ಕಾರ ನೂತನವಾಗಿ ಮಂಜುರಾಗಿರುವ ವಸತಿ ನಿಲಯಗಳಲ್ಲಿ ಎರಡನ್ನೂ ವಿಶ್ವವಿದ್ಯಾಲಯ ಸ್ಥಾಪಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಹೊರಗುತ್ತಿಗೆ ನೇಮಕಾತಿ ಮೀಸಲಾತಿಯಲ್ಲಿ ಮಾರ್ಪಾಡು ತನ್ನಿ; ಡಿಎಸ್‌ಎಸ್ ಒತ್ತಾಯ
ಮುಖಂಡರಾದ ಮಾದೇಶ್ ಚಲವಾದಿ, ಸತೀಶ್ ಅಂಜುಟಗಿ, ಯಾಶೀನ್ ಅನ್ವವಾರ, ಸಂಗೀತಾ ಕುಮಟಗಿ, ರವಿ ವಾಲಿಕಾರ, ಪ್ರವೀಣ ಬನಸೋಡೆ, ಮಾಂತೇಶ ಚಲವಾದಿ, ಯುವರಾಜ್ ಓಲೆಕಾರ ಸೇರಿದಂತೆ ಬಹುತೇಕರು ಇದ್ದರು.