ಬಿಜೆಪಿ, ಸಂಘ ಪರಿವಾರದವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ʼವಿಶ್ವಗುರುʼ ಎಂದು ದೊಡ್ಡದಾಗಿ ಬಿಂಬಿಸಿದ್ದರು. ಆದರೆ, ಚುನಾವಣಾ ಬಾಂಡ್ ಹಗರಣದ ಮೂಲಕ ಮೋದಿ ಅವರು ʼಭ್ರಷ್ಟ ಗುರುʼ ಎಂಬುದು ಬಯಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ್ ಗಣಿಹಾರ್ ಆರೋಪಿಸಿದರು.
ವಿಜಯಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಬಾಂಡ್ ಹೆಸರಲ್ಲಿ ಬಿಜೆಪಿಯು ಇಡೀ ದೇಶದ ಇತಿಹಾಸದಲ್ಲಿ ಕಂಡು ಕೇಳರಿಯದ ಹಗರಣ ಮಾಡಿದೆ ಎಂದು ಹೇಳಿದರು.
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಅಳಿಯ ಪದ್ಧತಿಯನ್ನು ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬದಲಾಯಿಸಿ, ಕೊಡುವವರ ಹೆಸರು ಗೌಪ್ಯವಾಗಿ ಇಡಬೇಕು, ಯಾವ ಪಕ್ಷಕ್ಕೆ ಯಾರು ನೀಡಿದ್ದಾರೆ ಎಂಬುದನ್ನು ಗೌಪ್ಯವಾಗಿಡಬೇಕು ಎಂಬ ಕಾನೂನು ಜಾರಿಗೆ ತರುವ ಮೂಲಕ, ಕಾರ್ಪೊರೇಟ್ ಕಂಪನಿಗಳಿಂದ ದೊಡ್ಡ ಮಟ್ಟದಲ್ಲಿ ಅಕ್ರಮವಾಗಿ ಹಣ ದೋಚಿದೆ ಎಂದು ಆರೋಪಿಸಿದರು.
ಚುನಾವಣಾ ಬಾಂಡ್ ಹಗರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಕೇಂದ್ರ ಸರ್ಕಾರ ಪ್ರಯತ್ನಿಸಿತ್ತು. ಮಾಹಿತಿ ಕೊಡದಂತೆ ಎಸ್‌ಬಿಐ ಮೇಲೆ ಕೇಂದ್ರ ಸರ್ಕಾರ ಭಾರಿ ಒತ್ತಡ, ಪ್ರಭಾವ ಬೀರಿತ್ತು. ಆದರೆ, ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ, ಚಾಟಿ ಬೀಸಿದ ಪರಿಣಾಮ ಮೂರು ತಿಂಗಳು ಸಮಯ ಕೇಳಿದ್ದ ಎಸ್‌ಬಿಐ ಕೇಬಲ್ ಮೂರು ದಿನಗಳಲ್ಲಿ ಮಾಹಿತಿ ಕೊಟ್ಟಿದೆ ಎಂದರು.
ಚುನಾವಣಾ ಬಾಂಡ್ ಮೂಲಕ ಬಿಜೆಪಿ 13ಕೋಟಿ ಸಾವಿರ ಹಣ ಸಂಗ್ರಹಿಸಿದೆ. ಇದಲ್ಲದೆ ಅಕ್ರಮವಾಗಿ ಇನ್ನಷ್ಟು ಹಣ ಸಂಗ್ರಹ ಮಾಡಿದೆಯೋ ತಿಳಿಯದಾಗಿದೆ. ಚುನಾವಣಾ ಬಾಂಡ್ ಬಗ್ಗೆ ಪ್ರಧಾನಿ ಅವರು ಏಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿದರು.
ಫಾರ್ಮಾ ಕಂಪನಿಗಳು ಚುನಾವಣಾ ಬಾಂಡ್ ಖರೀದಿಸಿದ ಬಳಿಕ ದೇಶದಲ್ಲಿ ಔಷಧ ಮಾರುಕಟ್ಟೆ ಅವಕಾಶ ಮಾಡಿಕೊಟ್ಟಿದೆ. ಬಿಜೆಪಿಗೆ ಜನರ ಜೀವ ಮುಖ್ಯವಲ್ಲ, ಹಣ ಗಳಿಸುವುದೇ ಇವರಿಗೆ ಮುಖ್ಯವಾಗಿತ್ತು ಎಂಬುದು ಇದರಿಂದ ಸಾಬೀತಾಗಿದೆ ಎಂದು ದೂರಿದರು.
ಚುನಾವಣಾ ಬಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಬಿಐ ಅಧ್ಯಕ್ಷ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ರಾಜೀನಾಮೆ ಪಡೆದು ಮನೆಗೆ ಕಳಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ರಫೆಲ್ ಯುದ್ಧ ವಿಮಾನ ಕರೆದಿಯಲ್ಲೂ ಕೇಂದ್ರ ಸರ್ಕಾರ ದೊಡ್ಡ ಭ್ರಷ್ಟಾಚಾರ ನಡೆಸಿ, ಮಾಹಿತಿ ಕಳೆದು ಹೋಗಿದೆ ಎಂದು ಸುಳ್ಳು ಹೇಳಿ ಹಗರಣವನ್ನು ಮುಚ್ಚಿ ಹಾಕಿದೆ. ಅದೇ ರೀತಿ, ಕೋವಿಡಿ ಸಂದರ್ಭದಲ್ಲಿ ಪಿಎಂ ಕೇರ್ ಫಂಡ್ ಹೆಸರಿನಲ್ಲೂ ದೊಡ್ಡ ಪ್ರಮಾಣದಲ್ಲಿ ಹಣ ವಸೂಲಿ ಮಾಡಲಾಗಿದೆ. ಇದರಲ್ಲಿ ಎಷ್ಟು ಹಣ ಸಂಗ್ರಹಿಸಲಾಗಿದೆ ಎಂಬುದು ತಿಳಿಯದಾಗಿದೆ ಎಂದ ಅವರು, ಸುಪ್ರೀಂಕೋರ್ಟ್ ಈ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಿದರು.
ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನ ಗೆಲ್ಲುತ್ತವೆ ಎನ್ನುವ ಬಿಜೆಪಿಯವರು ಪ್ರಾದೇಶಿಕ ಪಕ್ಷಗಳ ಮನೆ ಬಾಗಿಲಿಗೆ ಹೋಗಿ ಕಾಲು ಹಿಡಿಯುತ್ತಿರುವುದು ಏಕೆ? ಎಂದು ಅವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಡಾ. ರವಿ ಬಿರಾದಾರ, ನಾಗರಾಜ್ ಲಂಬು ಪತ್ರಿಕಾಗೋಷ್ಠಿಯಲ್ಲಿ ಇದ್ದರು.