ಮುಂಗಾರು ಹಂಗಾಮಿನ ʼಪ್ರಧಾನಮಂತ್ರಿ ಫಸಲ್ ಬಿಮಾʼ ಯೋಜನೆಯಡಿ ತೊಗರಿ ವಿಮೆ ಬೆಳೆಯ ಮಧ್ಯಂತರ ಪರಿಹಾರವನ್ನು ಅವೈಜ್ಞಾನಿಕವಾಗಿ ಬಿಡುಗಡೆ ಮಾಡಲಾಗಿದೆ, ಶೀಘ್ರವೇ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿ, ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ವಿಜಯಪುರ ನಗರದ ವಿಮೆ ಕಂಪನಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಬಳಿಕ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ಅರವಿಂದ ಕುಲಕರ್ಣಿ, ” 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸರಕಾರ ಗುರುತಿಸಿದ ಬೆಳೆ ವಿಮಾ ಕಂಪನಿಗೆ ರೈತರು ಕಂತು ಭರಿಸಿದ್ದಾರೆ. ಆ ವೇಳೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬಿತ್ತಿದ ಬೆಳೆ ನೀರು ಪಾಲಾಗಿ ರೈತರಿಗೆ ನಷ್ಟವಾಗಿದೆ. ವಿಮೆ ಪಾವತಿಸಿದ ಜಿಲ್ಲೆಯ ರೈತರಿಗೆ ಶೇ.25ರಷ್ಟು ಮೊತ್ತ ಭರಿಸಲು ವಿಮಾ ಕಂಪನಿಗೆ ಸರ್ಕಾರ ಆದೇಶಿಸಿದೆ. ಆದರೆ ಕಂಪನಿಯು ಸರ್ಕಾರದ ಆದೇಶ ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಮಧ್ಯಂತರ ಬೆಳೆ ವಿಮೆ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಿದೆ. ಘೋಷಣೆಯ ಪ್ರಕಾರ ಅರ್ಹ ಎಲ್ಲಾ ರೈತರಿಗೂ ಶೇ.25ರಷ್ಟು ನಷ್ಟದ ಪರಿಹಾರವನ್ನು ಬಿಡುಗಡೆಗೊಳಿಸಬೇಕು,” ಎಂದು ಆಗ್ರಹಿಸಿದರು.
ವಿಮಾ ಕಂಪನಿಯ ಜಿಲ್ಲಾ ಉಸ್ತುವಾರಿ ಸಂಪತ್ ಕುಮಾರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಜೂನ್ 15ರೊಳಗೆ ಬಾಕಿ ಉಳಿದ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವ ಭರವಸೆ ನೀಡಿದರು.
ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ವಿಠಲ ಬಿರಾದಾರ, ಮಡಿವಾಳಪ ಕಲಬುರ್ಕಿ, ಬಸನಗೌಡ ಪಾಟೀಲ, ಬಸವಪ್ರಭು ಪಾಟೀಲ, ಸಂಗಣ್ಣ ಉಪ್ಪಲದಿನ್ನಿ, ಮಾಳಪ್ಪ ವಾಲಿಕಾರ, ಪ್ರವೀಣ ಉಪ್ಪಲದಿನ್ನಿ, ಅಶೋಕ ಉಪ್ಪಲದಿನ್ನಿ, ಗೋಪಾಲ ನಾಯ್ಯೋಡಿ, ಅತ ಕೋಳೂರ, ಸೋಮನಗೌಡ , ರಾಮನಗೌಡ ಬಿರಾದಾರ ಇತರರಿದ್ದರು.





