ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಂಬಂಧಿಸಿದಂತೆ ಔಪಚಾರಿಕ ಮಾತುಕತೆಗಳು ನಡೆಯುತ್ತಿವೆ. ಇದೇ ಸಮಯದಲ್ಲಿ, ಅಮೆರಿಕವು ಭಾರತದ ಮೇಲೆ ಮತ್ತೊಮ್ಮೆ ಹೊರೆ ಹೇರಲು ಮುಂದಾಗಿದೆ. ಭಾರತ ಸೇರಿದಂತೆ ವಿಶ್ವದ 54 ದೇಶಗಳ ಉತ್ಪನ್ನಗಳ ಮೇಲೆ 12.5% ಹೊಸ ಆಮದು ಸುಂಕ ವಿಧಿಸಲು ‘ಅಮೆರಿಕ ವ್ಯಾಪಾರ ಪ್ರತಿನಿಧಿ’ (USTR) ಕಚೇರಿ ಪ್ರಸ್ತಾಪಿಸಿದೆ.
ಯುಎಸ್‌ಟಿಆರ್ (USTR) ಪ್ರಸ್ತಾಪದ ಪ್ರಕಾರ, ಭಾರತಕ್ಕೆ 12.5%ರಷ್ಟು ಗರಿಷ್ಠ ಸುಂಕ ವಿಧಿಸಲು ನಿರ್ಧರಿಸಲಾಗಿದೆ. ಆದರೆ, ಅಮೆರಿಕದ ನೆರೆಹೊರೆಯ ದೇಶಗಳಾದ ಕೆನಡಾ, ಮೆಕ್ಸಿಕೋ ಸೇರಿದಂತೆ ಪಾಕಿಸ್ತಾನ, ಯುರೋಪಿಯನ್ ಒಕ್ಕೂಟ (EU), ಈಕ್ವೆಡಾರ್ ಹಾಗೂ ಇಂಡೋನೇಷ್ಯಾ ದೇಶಗಳಿಗೆ ಕೇವಲ 10%ರಷ್ಟು ಕಡಿಮೆ ಸುಂಕ ವಿಧಿಸಲು ಪ್ರಸ್ತಾಪಿಸಲಾಗಿದೆ.
ಭಾರತವು ಬಲವಂತದ ಕಾರ್ಮಿಕ ಪದ್ಧತಿ ಅಥವಾ ಜೀತ ಪದ್ಧತಿಯಡಿ ತಯಾರಾಗುವ ಉತ್ಪನ್ನಗಳ ಆಮದನ್ನು ಕಾನೂನಾತ್ಮಕವಾಗಿ ನಿಷೇಧಿಸುವಲ್ಲಿ ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಆದರೆ, ಉಳಿದ ಪ್ರಸ್ತಾಪಿತ ರಾಷ್ಟ್ರಗಳು ಬಲವಂತದ ಕಾರ್ಮಿಕರ ಮೂಲಕ ಉತ್ಪಾದನೆಯಾಗುವ ಸರಕುಗಳ ಆಮದನ್ನು ತಡೆಯಲು ಬದ್ಧತೆ ಪ್ರದರ್ಶಿಸಿವೆ. ಅಲ್ಲದೆ, ಅಮೆರಿಕದೊಂದಿಗೆ ‘ರೆಸಿಪ್ರೋಕಲ್ ಟ್ರೇಡ್ ಒಪ್ಪಂದ’ಕ್ಕೆ (ART) ಸಹಿ ಹಾಕಿವೆ. ಆದ್ದರಿಂದ, ಈ ರಾಷ್ಟ್ರಗಳಿಗೆ ಕಡಿಮೆ ಸುಂಕ ವಿಧಿಸಲಾಗುತ್ತಿದೆ. ಆದರೆ, ಭಾರತದ ನೀತಿಗಳು ಅಮೆರಿಕದ ವಾಣಿಜ್ಯ ವ್ಯವಹಾರಗಳಿಗೆ ಅಡ್ಡಿಪಡಿಸುತ್ತಿವೆ ಎಂದು ಯುಎಸ್‌ಟಿಆರ್ ಸಮರ್ಥಿಸಿಕೊಂಡಿದೆ.
ಈ ಹೊಸ ಸುಂಕಗಳು 2026ರ ಜುಲೈನಿಂದಲೇ ಜಾರಿಗೆ ಬರುವ ಸಾಧ್ಯತೆಯಿದೆ. ಯುಎಸ್‌ಟಿಆರ್ ಪ್ರಸ್ತುತ ಈ ನಿರ್ಧಾರದ ಕುರಿತು ಸಾರ್ವಜನಿಕರಿಂದ ಲಿಖಿತ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಪ್ರತಿಕ್ರಿಯೆ ಸಲ್ಲಿಸಲು 2026ರ ಜುಲೈ 6 ಕಡೆಯ ದಿನವಾಗಿದೆ. ತದನಂತರ, ಜುಲೈ 7ರಂದು ಸಾರ್ವಜನಿಕ ವಿಚಾರಣೆ ನಡೆಯಲಿದ್ದು, ಅಂದೇ ಹೊಸ ಸುಂಕಗಳು ಜಾರಿಗೆ ಬರಲಿವೆ.
ಈ ಲೇಖನ ಓದಿದ್ದೀರಾ?: ರಾಷ್ಟ್ರೀಯ ಬಿಕ್ಕಟ್ಟುಗಳಲ್ಲಿ ಮೋದಿ ‘ನಿಗೂಢ ಮೌನ’; ಮರ್ಮವೇನು?
ಈ ಹಿಂದೆ, ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರವು ತನ್ನ ವ್ಯಾಪಾರ ಪಾಲುದಾರರ ಮೇಲೆ ಒತ್ತಡ ಹೇರಲು ‘ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರಗಳ ಕಾಯ್ದೆ’ (IEEPA) ಅಡಿಯಲ್ಲಿ ಕಠಿಣ ಸುಂಕಗಳನ್ನು ವಿಧಿಸಿತ್ತು. ಕಳೆದ ವರ್ಷ, ಭಾರತ ಮತ್ತು ಅಮೆರಿಕ ನಡುವಿನ ಮಾತುಕತೆ ಮುರಿದುಬಿದ್ದಾಗ ಭಾರತದ ಉತ್ಪನ್ನಗಳ ಮೇಲೆ 50%ರಷ್ಟು ಭಾರಿ ಸುಂಕ ಹೇರಲಾಗಿತ್ತು. ಈ ಸುಂಕವು ಕಾನೂನುಬಾಹಿರ ಎಂದು ಘೋಷಿಸಲ್ಪಟ್ಟಿತಾದರೂ, ಭಾರತದ ಆರ್ಥಿಕತೆಗೆ ಭಾರಿ ಪೆಟ್ಟು ನೀಡಿತ್ತು. ಆ ನಂತರದಲ್ಲಿ, ಈ ಸುಂಕವನ್ನು 10%ಗೆ ಇಳಿಸಲಾಗಿತ್ತು. ಇದೀಗ, ಮತ್ತೆ 12.5% ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.
ಅಮೆರಿಕದ ಕಠಿಣ ನಿಲುವಿನಿಂದಾಗಿ ಭಾರತದಿಂದ ವಿದೇಶಿ ಹೂಡಿಕೆಗಳು (FDI) ಭಾರಿ ಪ್ರಮಾಣದಲ್ಲಿ ಹೊರಹೋಗಿವೆ. ಜೊತೆಗೆ, ಕಳೆದ ಕೇವಲ ಒಂದು ವರ್ಷದಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಬರೋಬ್ಬರಿ 12%ರಷ್ಟು ಭಾರಿ ಕುಸಿತ ಕಂಡಿದೆ. ರೂಪಾಯಿ ಮೌಲ್ಯವು 95 ರೂ. ಆಸುಪಾಸಿಗೆ ಬಂದುನಿಂತಿದೆ.




