ಸಂವಿಧಾನದ ಮೂಲ ಪ್ರತಿಯನ್ನು ಅತ್ಯಂತ ಸುಂದರವಾದ ಚಿತ್ರಕಲೆಗಳಿಂದ ಸಿಂಗರಿಸಿದ, ಖ್ಯಾತ ಆಧುನಿಕ ಕಲಾವಿದ ನಂದಲಾಲ್ ಬಸು ಅವರ ಮೊಮ್ಮಗ ಸುಪ್ರಬುದ್ಧ ಸೇನ್ ಅವರು ಉಸಿರಾಟದ ತೊಂದರೆಯಿಂದ ಇತ್ತೀಚೆಗೆ ನಿಧನರಾಗಿದ್ದಾರೆ. 88 ವರ್ಷದ ಸೇನ್ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕಸಿದುಕೊಂಡ ತಮ್ಮ ಮತದಾನದ ಹಕ್ಕನ್ನು ಕಾನೂನು ಹೋರಾಟ ನಡೆಸಿ ಮರಳಿ ಪಡೆದಿದ್ದರು, ಮತದಾನ ಮಾಡಿದ್ದರು.
1996ರಲ್ಲಿ ಸುಪ್ರಬುದ್ಧ ಅವರು ದಾಮೋದರ್ ವ್ಯಾಲಿ ಕಾರ್ಪೊರೇಷನ್ನಿಂದ ನಿವೃತ್ತರಾದಾಗಿನಿಂದ, ದಂಪತಿಗಳು ತಮ್ಮ ಪೂರ್ವಜರ ಶಾಂತಿನಿಕೇತನದ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಸಂದರ್ಭದಲ್ಲಿ ಸುಪ್ರಬುದ್ಧ ಸೇನ್ ಮತ್ತು ಅವರ ಪತ್ನಿ 82 ವರ್ಷದ ದೀಪಾ ಸೇನ್ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಸುಪ್ರಬುದ್ಧ ಸೇನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರವು ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ನಂತರ ಸುಪ್ರೀಂ ಕೋರ್ಟ್ ಮತ್ತು ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಿಂದಾಗಿ ಇಬ್ಬರೂ ಚುನಾವಣೆಯಲ್ಲಿ ಮತದಾನ ಮಾಡಿದ್ದರು.
ಇದನ್ನು ಓದಿದ್ದೀರಾ? ಎಸ್ಐಆರ್ ವಿರುದ್ಧ ರಾಜ್ಯಾದ್ಯಂತ ಮೊಳಗಿದ ಘೋಷ; ಚುನಾವಣಾ ಆಯೋಗದ ಕ್ರಮಕ್ಕೆ ಜನಾಕ್ರೋಶ
ಸುಪ್ರಬುದ್ಧ ಸೇನ್ ರಾಷ್ಟ್ರೀಯ ಕಲಾ ಪರಂಪರೆಯ ರೂವಾರಿ ನಂದಲಾಲ್ ಬಸು ಅವರ ಕಿರಿಯ ಮಗಳು ಜಮುನಾ ಸೇನ್ ಅವರ ಮಗ. ಇದಲ್ಲದೆ, ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಅಜ್ಜ ಕ್ಷಿತಿಮೋಹನ್ ಸೇನ್ ಸುಪ್ರಬುದ್ಧರ ಮಾವ. ನಂದಲಾಲ್ ಬಸು ಕಲಾಭವನದ ಪ್ರಾಂಶುಪಾಲರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ದಂಡಿ ಮೆರವಣಿಗೆಯಲ್ಲಿ ಮಹಾತ್ಮ ಗಾಂಧಿಯವರ ಸಾಂಪ್ರದಾಯಿಕ ಲಿನೋಕಟ್ ಅನ್ನು ಚಿತ್ರಿಸುವಲ್ಲಿ ಬಸು ಪಾತ್ರ ಗಣನೀಯ.
ಕೊನೆಯ ಬಾರಿ ಮತದಾನ ಮಾಡಿದ ಸೇನ್
ಸೇನ್ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ, ರಾಷ್ಟ್ರದ ಸಾಂವಿಧಾನಿಕ ಇತಿಹಾಸದೊಂದಿಗೆ ನಿಕಟ ಸಂಬಂಧ ಹೊಂದಿರುವ ನಂದಲಾಲ್ ಬಸು ಅವರ ವಂಶಸ್ಥನಾಗಿದ್ದರೂ ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ನಾನು ಇಷ್ಟೊಂದು ವರ್ಷಗಳ ಕಾಲ ಮತದಾನ ಮಾಡಿರುವುದು, ಈ ಸಂಬಂಧ ಇರುವ ಎಲ್ಲ ದಾಖಲೆಗಳು ಈಗ ನಿಷ್ಪ್ರಯೋಜಕ ಎನಿಸಿಕೊಂಡಿದೆ” ಎಂದು ಅರ್ಜಿಯಲ್ಲಿ ಹೇಳಿದ್ದರು.
ಇನ್ನು “ಈ ಬಾರಿ ನಾನು ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ ಎಂದು ನನಗೆ ಬೇಸರವಿಲ್ಲ. ಆದರೆ ಎರಡು ಪಕ್ಷಗಳ ಜಗಳದಿಂದ ನಮ್ಮ ಹೆಸರುಗಳನ್ನು ಅಳಿಸಲಾಗಿದೆ ಎಂಬುದನ್ನು ನಾನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ” ಎಂದು ತಮ್ಮ ಹೆಸರು ಅಳಿಸಿದ ಬಳಿಕ ಸೇನ್ ಹೇಳಿದ್ದರು.
ಇದನ್ನು ಓದಿದ್ದೀರಾ? SIR ನೆಪದಲ್ಲಿ ‘ಭಾರತ ರತ್ನ’ ಅಮರ್ತ್ಯ ಸೇನ್ಗೆ ಚು. ಆಯೋಗದಿಂದ ಮತ್ತೆ ಅವಮಾನ: ಮೋದಿಯನ್ನು ಟೀಕಿಸಿದವರೇ ಗುರಿಯೇ?
ಈ ವರ್ಷದ ಏಪ್ರಿಲ್ 23ರಂದು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಸ್ವಲ್ಪ ಮೊದಲು, ನ್ಯಾಯಮಂಡಳಿ ಸುಪ್ರಬುದ್ಧ ಸೇನ್ ಹೆಸರನ್ನು ಪಟ್ಟಿಗೆ ಸೇರಿಸಲು ಆದೇಶಿಸಿತ್ತು. ಆದರೆ ಮತದಾನದ ದಿನದಂದು, ಮತಗಟ್ಟೆ ಅಧಿಕಾರಿಗಳು ಮತದಾನ ಮಾಡಲು ಅವಕಾಶ ನೀಡಿರಲಿಲ್ಲ. ಬಳಿಕ ತೀವ್ರ ವಿವಾದದ ಬಳಿಕ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ತಮ್ಮ ಮತದಾನದ ಹಕ್ಕನ್ನು ಸೇನ್ ಅದೇ ಕೊನೆಯ ಬಾರಿಗೆ ಚಲಾಯಿಸಿದ್ದರು.
ಈ ಸಂದರ್ಭದಲ್ಲಿ ಎಸ್ಐಆರ್ ಬಳಿಕ ಮತದಾನದ ಹಕ್ಕು ಕಳೆದುಕೊಂಡ ಸಾಮಾನ್ಯ ಜನರ ಸ್ಥಿತಿಯೇನು ಎಂಬ ಪ್ರಶ್ನೆಯೂ ಹುಟ್ಟುತ್ತದೆ. ಸುಪ್ರಬುದ್ಧ ಸೇನ್ ಅವರಂತಹ ಪ್ರಭಾವಿ ಹಿನ್ನೆಲೆ ಉಳ್ಳವರಿಗೆ ಸುಪ್ರೀಂ ಕೋರ್ಟ್ ಅಥವಾ ವಿಶೇಷ ನ್ಯಾಯಾಧಿಕರಣಗಳ ಕದ ತಟ್ಟುವ ಅವಕಾಶ, ಸಂಪನ್ಮೂಲ ಇರುತ್ತದೆ. ಆದರೆ ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕ, ರೈತ ಅಥವಾ ಮಧ್ಯಮ ವರ್ಗದ ವ್ಯಕ್ತಿಗೆ ಇದು ಸಾಧ್ಯವಾಗುತ್ತದೆಯೇ? ಅದೆಷ್ಟೋ ಮಂದಿಗೆ ಕೋರ್ಟ್ ಮೆಟ್ಟಿಲೇರಲು ತಗಲುವ ಹಣಕಾಸಿನ ವೆಚ್ಚವನ್ನು ಭರಿಸಲು ಸಾಧ್ಯವಾಗುವುದಿಲ್ಲ. ಸಂಕೀರ್ಣವಾದ ಕಾನೂನು ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಅಥವಾ ಅರಿವೂ ಇರುವುದಿಲ್ಲ. ದಿನದ ದುಡಿಮೆಯನ್ನು ನಂಬಿ ಬದುಕುವವರಿಗೆ ಕಚೇರಿಗಳಿಗೆ ಅಲೆಯಲು ಸಮಯವೂ ಇರುವುದಿಲ್ಲ.





