ಸಂತ ಸೇವಾಲಾಲರ ಸಂದೇಶಗಳಾದ ಪ್ರಕೃತಿಗೆ ಗೌರವ, ಸಮುದಾಯ ಸೇವೆ, ಸತ್ಯ ಮತ್ತು ಪ್ರಾಮಾಣಿಕತೆ, ಸರಳತೆ ಮತ್ತು ನಮ್ರತೆಯನ್ನು ಯುವಕರು ಜೀವನದಲ್ಲಿ ಅನುಸರಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಲ್ಕಪ್ಪ ಹಲಗಿ ಹೇಳಿದರು.
ಶ್ರೀ ಸಂತ ಸೇವಾಲಾಲ ಜಯಂತಿಯ ಪ್ರಯುಕ್ತ ಶ್ರೀ ಜಗದಾಂಬ ಯುವಕ ಸಂಘದ ವತಿಯಿಂದ ವಿಜಯಪುರದ ಸಿಂದಗಿ ತಾಲೂಕಿನ ಕಕ್ಕಳಮೇಲ ಎಲ್.ಟಿ ತಾಂಡದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಹಾಗೂ ಸಾಮಾಜಿಕ ವಿಶ್ಲೇಷಣೆ ತರಬೇತಿಯಲ್ಲಿ ಅವರು ಮಾತನಾಡಿ, “ಸೇವಾಲಾಲರು ಸಮಾಜದಲ್ಲಿ ಮಹಿಳೆಯರ ಸ್ಥಾನಮಾನದ ಕುರಿತು ಒತ್ತಿ ಹೇಳಿದ್ದರು. ಮಹಿಳೆಯರಿಗೆ ಗೌರವ ನೀಡುವುದು, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಬೇಕು, ಮಹಿಳೆಯರನ್ನು ಗೌರವದಿಂದ ಕಾಣಬೇಕು ಮತ್ತು ಪರಿಸರ ರಕ್ಷಣೆ ಮಾಡಿ ಗಿಡ ಮರಗಳನ್ನು ಬೆಳೆಸಬೇಕು. ಪ್ರತಿಯೊಂದು ಸಮುದಾಯದ ಸಾಮಾಜಿಕ ಗೌರವನ್ನು ಎತ್ತಿ ಹಿಡಿಯಬೇಕು” ಎಂದರು.
ಸಾಮಾಜಿಕ ಕಾರ್ಯಕರ್ತ ಮಹೇಶ ಚವ್ಹಾಣ ಮಾತನಾಡಿ, “ಯುವಕರು ಗ್ರಾಮದ ಅಭಿವೃದ್ಧಿಯಲ್ಲಿ ಸಂಪೂರ್ಣ ಮನಸ್ಸಿಂದ ಭಾಗವಹಿಸಲು ಯುವಕ ಸಂಘವನ್ನು ರಚನೆ ಮಾಡಲಾಗಿದೆ. ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಒಮ್ಮನಸ್ಸಿನಿಂದ ಪಾಲ್ಗೊಳ್ಳುವ ಮೂಲಕ ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಬೇಕು” ಎಂದರು.
ಜಗದಾಂಬ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಗ್ರಾಮೀಣ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಎನ್‌ಎಸ್ಎಸ್ ಪಾತ್ರ ಅಪಾರ: ಕುಲಪತಿ ಶಾಂತಾದೇವಿ ಟಿ
ಕಾರ್ಯಕ್ರಮದಲ್ಲಿ ಯುವಕ ಸಂಘದ ಅಧ್ಯಕ್ಷ ರಾಮು ಚವ್ಹಾಣ, ತಾಂಡಾ ಮುಖಂಡ ದಿಲೀಪ್ ರಾಥೋಡ್, ಟೋಪು ಚವ್ಹಾಣ, ಅಪ್ಪು ನಾಯಕ, ಮುತಿಲಾಲ ಪವಾರ, ರವಿ ಚವ್ಹಾಣ, ಸುನಿಲ ರಾಥೋಡ್, ಸಂದೀಪ ರಾಥೋಡ್ ಸೇರಿದಂತೆ ಸಮುದಾಯದ ಇತರರು ಹಾಗೂ ಸಾರ್ವಜನಿಕರು ಇದ್ದರು.
