ಹೆಚ್ಚು ಬಡ್ಡಿ ನೀಡುತ್ತೇವೆಂದು ಆಮಿಷವೊಡ್ಡಿ ಜನರಿಂದ ಹಣ ಠೇವಣಿ ಇರಿಸಿಕೊಂಡು, ಈಗ ಹಣ ನೀಡದೆ ವಂಚಿಸಲಾಗುತ್ತಿದೆ ಎಂದು ವಿಜಯಪುರದ ಅಮಾನತ್ ಕೋ-ಆಪರೇಟಿವ್ ಸೊಸೈಟಿ ವಿರುದ್ಧ ಆರೋಪ ಕೇಳಿಬಂದಿದೆ. ಹಣವನ್ನು ಠೇವಣಿ ಇಟ್ಟವರಿಗೆ ಹಣ ವಾಪಸ್ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಠೇವಣಿ ಇಟ್ಟಿದ್ದವರು ಸೊಸೈಟಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಹಣ ಠೇವಣಿ ಇರಿಸಿಕೊಂಡು ವಂಚಿಸುವ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ, ಐಎಂಎಫ್ ಬಹುಕೋಟಿ ಹಗರಣ ಬಯಲಾಗಿತ್ತು. ಇದೀಗ, ವಿಜಯಪುರದಲ್ಲಿ ಸಹಕಾರ ಸೊಸೈಟಿ ಅಂತದ್ದೇ ವಂಚನೆ ಮಾಡಿದೆ ಎಂದು ತಿಳಿದುಬಂದಿದೆ.
ಅಮಾನತ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಹಲವಾರು ಗ್ರಾಹಕರು ಕಷ್ಟಪಟ್ಟು ದುಡಿದ ಹಣವನ್ನು ಉಳಿತಾಯ ಮಾಡಲು ಠೇವಣಿ ಇರಿಸಿದ್ದರು. ಸುಮಾರು 25ರಿಂದ 30 ಕೋಟಿ ರೂ. ಹಣವನ್ನು ಜನರು ಠೇವಣಿ ಇಟ್ಟಿದ್ದಾರೆ. ಆದರೆ, ಸೊಸೈಟಿಯ ಚೇರ್ಮನ್ ಹಾರುನ್ ರಶೀದ್ ಮಾಶ್ಯಾಳಕರ ಮತ್ತು ಆಡಳಿತ ಮಂಡಳಿ ಹಣವನ್ನು ವಾಪಸ್ ಕೊಡುತ್ತಿಲ್ಲವೆಂದು ಆರೋಪಿಸಲಾಗಿದೆ.
ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಹೆಚ್ಚು ಬಡ್ಡಿ ನೀಡುತ್ತೇವೆಂದು ಬಡ ಜನರಿಂದ ಸೊಸೈಟಿ ಹಣ ಠೇವಣಿ ಇರಿಸಿಕೊಂಡಿತ್ತು. ಹಲವಾರು ಜನರು ಎರಡು ವರ್ಷಗಳಿಂದ ಪ್ರತಿ ತಿಂಗಳು ಹಣ ಠೇವಣಿ ಇಟ್ಟಿದ್ದರು. ಆದರೆ, ಈಗ ಹಣ ನೀಡುತ್ತಿಲ್ಲವೆಂದು ಗ್ರಾಹಕರು ಆರೋಪಿಸಿದ್ದಾರೆ.
ಸೊಸೈಟಿಯ ಬ್ಯಾಂಕ್‌ಗೆ ಹೋದರೆ ಸೊಸೈಟಿ ಚೇರ್ಮನ್ ಆಗಲೀ, ಮ್ಯಾನೇಜ್ ಆಗಲೀ ಸಿಗುತ್ತಿಲ್ಲ. ಚೇರ್ಮನ್ ಮನೆಗೆ ಹೋದರೆ, ಅಲ್ಲಿಯೂ ಅವರು ಇಲ್ಲ ಎನ್ನುತ್ತಾರೆ. ಮ್ಯಾನೇಜರ್ ಮತ್ತು ಸಿಬ್ಬಂದಿಗಳು ಬೇಜವಾಬ್ದಾರಿತನ ಉತ್ತರ ನೀಡುತ್ತಾರೆ ಎಂದು ಗ್ರಾಹಕರು ದೂರಿದ್ದಾರೆ.
“ಸೊಸೈಟಿಯಿಂದ ಯಾರ್ಯಾರಿಗೂ ಸಾಲ ನೀಡಿದ್ದಾರೆ. ಸಾಲ ಪಡೆದವರು ಸೊಸೈಟಿಗೆ ಸಾಲ ಮರುಪಾತಿಸಿಲ್ಲ. ಕಷ್ಟದ ಸಮಯಕ್ಕೆ ಉಪಯೋಗವಾಗುತ್ತದೆ ಎಂದು ಠೇವಣಿ ಇಟ್ಟಿದ್ದ ಹಣ, ನಮ್ಮ ಕಷ್ಟಕ್ಕೆ ದೊರೆಯುತ್ತಿಲ್ಲ” ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.