ವಿಜಯಪುರದಲ್ಲಿ ನಡೆದ ಮಾ.4ರಂದು ಆಯೋಜಿಸಲಾಗಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಚೋದನಾಕಾರಿ ಹಾಗೂ ದ್ವೇಷ ಭಾಷಣ ಮಾಡಿರುವ ಆರೋಪದ ಮೇಲೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ತೆಲಂಗಾಣದ ಗೋಶಾಮಹಲ್ ಬಿಜೆಪಿ ಶಾಸಕ ಟಿ. ರಾಜಾಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದ್ವೇಷ ಭಾಷಣ ಮಾಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೋವರು ವಿಜಯಪುರದ ಗಾಂಧಿ ಚೌಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾರ್ಚ್ 4ರಂದು ವಿಜಯಪುರ ನಗರದ ಶಿವಾಜಿ ಸರ್ಕಲ್‌ನಲ್ಲಿ ನಡೆದಿದ್ದ ಛತ್ರಪತಿ ಶಿವಾಜಿ ಜಯಂತಿ ವೇಳೆ ಕೋಮುಗಳ ನಡುವೆ ದ್ವೇಷ ಹರಡುವಂತೆ ಉದ್ರೇಕಕಾರಿ ಭಾಷಣಗೈದಿದ್ದಾರೆ. ಹಾಗಾಗಿ, ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು.
Location: Vijayapura, Karnataka
Date: March 4BJP leader T Raja Singh delivers hate speech against Muslims at an event organized by Janatha Seva Group. While using abusive language, he administered an oath to start a war against “love jihad and religious conversions.” pic.twitter.com/f4hVgpBEuR
— Shamim Chaudhary (@ShamimC02) March 5, 2024
ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಗಾಂಧಿ ಚೌಕ್ ಪೊಲೀಸರು, ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಕಲಂ: 153, 506, 504, 505(2) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿವಾಜಿಯವರು ಯಾರನ್ನೂ ಧರ್ಮದ ಆಧಾರದಲ್ಲಿ ಪ್ರತ್ಯೇಕಿಸಿರಲಿಲ್ಲ: ಭಾರತ್ ಸೌಹಾರ್ದ ಮಂಚ್
ದ್ವೇಷ ಭಾಷಣ ಮಾಡಿರುವ ಬಿಜೆಪಿ ಶಾಸಕ ಯತ್ನಾಳ್, ರಾಜಾಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿಜಯಪುರದ ಭಾರತ್ ಸೌಹಾರ್ದ ಮಂಚ್, “ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ-ಮುಸ್ಲಿಂ ಎಂದು ಪ್ರತ್ಯೇಕಿಸುವ ಕೆಲಸ ಮಾಡಿರಲಿಲ್ಲ. ಶಿವಾಜಿಯವರನ್ನು ಮತೀಯವಾದಿ ಎಂಬಂತೆ ಬಿಂಬಿಸಲಾಗುತ್ತಿದೆ. ಇದು ಖಂಡನೀಯ. ಹೀಗಾಗಿ ದೂರು ನೀಡಿದ್ದೇವೆ. ಎಫ್‌ಐಆರ್ ಕೂಡ ದಾಖಲಾಗಿದೆ. ಪ್ರಚೋದನಾಕಾರಿ ಭಾಷಣಗೈದಿರುವ ಇಬ್ಬರನ್ನೂ ಕೂಡಲೇ ಬಂಧಿಸಬೇಕು. ಸುಪ್ರೀಂ ಕೋರ್ಟಿನ ಆದೇಶದನ್ವಯ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
