ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಹಸಿರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂಬ ಜಯಘೋಷದೊಂದಿಗೆ ಸಂಭ್ರಮದಿಂದ ತಾಂಬಾ ಗ್ರಾಮಕ್ಕೆ ಸಾವಿರಾರು ವಿದ್ಯಾರ್ಥಿಗಳು ಮಕ್ಕಳು ಹಾಗೂ ಶಿಕ್ಷಕರು, ಗ್ರಾಮದ ಹಿರಿಯರು ಪಾಲ್ಗೊಂಡು ಕರ್ನಾಟಕ ಸುವರ್ಣ ಸಂಭ್ರಮ 50ರ ನಿಮಿತ್ಯ ಜನರಲ್ಲಿ ಕರ್ನಾಟಕದ ಅಭಿಮಾನ ಮೂಡಿಸುವ ಸಲುವಾಗಿ ಕರ್ನಾಟಕದ ಕನ್ನಡ ರಥವನ್ನು ವಿಜಯಪುರ ಜಿಲ್ಲೆ ತಾಂಬಾ ಗ್ರಾಮಕ್ಕೆ ಸ್ವಾಗತಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ್ ವಾಲಿಕಾರ ಮಾತನಾಡಿ, “ಕನ್ನಡ ನಮ್ಮೆಲ್ಲರ ಉಸಿರು, ಕನ್ನಡ ಸಾಹಿತ್ಯ ನಮ್ಮೆಲ್ಲರಿಗೂ ಅನ್ನ ನೀಡುವುದಾಗಿದೆ. ತಾಯಿ ಭಾಷೆ, ವ್ಯವಹಾರ ಭಾಷೆ, ಆಡಳಿತ ಭಾಷೆ, ಕನ್ನಡವಾಗಿರುವುದರಿಂದ ನಾವೆಲ್ಲರೂ ಕನ್ನಡವನ್ನು ಕಡ್ಡಾಯವಾಗಿ ಅರಿಯಬೇಕು. ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಸಾಲಿನಲ್ಲಿ ಕರ್ನಾಟಕ ಅಗ್ರಗಣ್ಯವಾಗಿದೆ. ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಪರಂಪರೆ ನಮ್ಮ ಸಂಪತ್ತಾಗಿವೆ. ಕನ್ನಡದ ಶಾಲೆಗಳು ಕನ್ನಡವನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ಸರ್ಕಾರಿ ಶಾಲೆಗಳು ಅತ್ಯಂತ ಪ್ರತಿಭಾವಂತ ಶಿಕ್ಷಕರಿಂದ ಬೋಧನೆಯಾಗುತ್ತಿದೆ. ಅನೇಕ ಜನರು ಇಂಗ್ಲೀಷ್ ಶಾಲೆಗಳಿಗೆ ಕಳಿಸುವ ವ್ಯಾಮೋಹದಿಂದ ಹೊರಬರಬೇಕು” ಎಂದರು.
ಇಂಡಿ ತಾಲೂಕು ತಹಶೀಲ್ದಾರ್ ಬಿ ಎಸ್ ಕಡಕಬಾವಿ ಅವರ ನೇತೃತ್ವದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಯೋಗದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ತಾಂಬಾ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಅನೇಕ ಜನರು ಭುವನೇಶ್ವರಿಗೆ ಪೂಜೆ ಹಾಗೂ ಆರತಿ ಮತ್ತು ನೂರಾರು ವಿದ್ಯಾರ್ಥಿನಿಯರು ಕುಂಭಮೇಳ ಮಾಡಿ ನಾಡದೇವತೆಗೆ ವಿಜ್ರಂಭಣೆಯಿಂದ ಗೌರವ ಸಲ್ಲಿಸಿದರು. ರೈತರು ಹಾಗೂ ಶಿಕ್ಷಕರು ಎತ್ತಿನ ಗಾಡಿಯ ಮೇಲೆ ಸಂಗೊಳ್ಳಿ ರಾಯಣ್ಣ, ಕಿತ್ತೂರ ಚನ್ನಮ್ಮ, ಒನಕೆ ಓಬವ್ವ, ಮಹಾತ್ಮಾ ಗಾಂಧೀಜಿ, ಡಾ ಅಂಬೇಡ್ಕರ್, ಸಿದ್ದೇಶ್ವರ ಶ್ರೀ, ವೇಷಭೂಷಣದಲ್ಲಿ ಮಕ್ಕಳು ಪಾಲ್ಗೊಂಡಿದ್ದು, ರೋಮಾಂಚನವಾಗಿತ್ತು. ನೂರಾರು ಶಿಕ್ಷಕರು ಭಾಗಿಯಾಗಿದ್ದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಜಿಲ್ಲೆಗೆ 371ಜೆ ಸ್ಥಾನಮಾನ ನೀಡಬೇಕೆಂದು ಆಗ್ರಹ
ಇದೇ ಸಂದರ್ಭದಲ್ಲಿ ಇಂಡಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಅಪ್ಪಣ್ಣ ಕಲ್ಲೂರ, ರಜಾಕ ಚಿಕ್ಕಅಗಸಿ, ರಾಚಪ್ಪ ಗಳೆದ, ಪ್ರಕಾಶ ಮುಂಜಿ, ವಾಸಿಮ ವಾಲಿಕಾರ, ರಾಜು ಗಂಗನಳ್ಳಿ, ಪರಶುರಾಮ ಬಿಸನಾಳ, ಎಂ. ಎ. ವಾಲಿಕಾರ, ಎಸ್ ಆರ್ ನಡಗಡ್ಡಿ, ಅಡಿವೆಪ್ಪ ಸರಸಂಬಿ, ಶ್ರೀಧರ ಉಕ್ಕಲಿ, ಬಸವರಾಜ ಅವಟಿ, ಅಹ್ಮದ ವಾಲಿಕಾರ, ಬೌರಮ್ಮ ಡೊಣ್ಣಿ, ಸಾತಿರವ್ವ ಸಕ್ರಿ, ಬೌರಮ್ಮ ಯಳಮೇಲಿ, ಕನ್ಯಾಕುಮಾರಿ ಜುಮನಾಳ, ಆನಂದ ಕಂಬಾರ, ಶಾಂತಾ ಬೆಳ್ಳುಂಡಿ, ಶಶಿಕಲಾ ಪ್ಯಾಟಿ, ಅಮೋಘಸಿದ್ದ ಮಾಶ್ಯಾಳ, ವಸರಾಯ ದೊಡ್ಡಮನಿ, ಬಸವರಾಜ ಗುಂಡಳ್ಳಿ, ಗೂಳಪ್ಪ ಗೊಬ್ಬೂರ ಸೇರಿದಂತೆ ಮುಂತಾದವರು ಇದ್ದರು.