ಕನ್ನಡ ಸಾಹಿತ್ಯ ಪರಿಷತ್ತು ನೂರು ವರ್ಷಗಳ ಇತಿಹಾಸವಿನ್ನು ಹೊಂದಿದೆ. ಈ ಮುಖಾಂತರ ನಾಡು ನುಡಿ ಸಂಸ್ಕೃತಿಗಾಗಿ ಶ್ರಮಿಸಿದ ಜೀವಿಗಳು ಸ್ಮರಿಸುವ ಮತ್ತು ಸಮಾಜಕ್ಕೆ ಸಂದೇಶ ನೀಡುವ ಕೆಲಸ ಮಾಡುತ್ತ ಬಂದಿದೆ ಎಂದು ದೊಡ್ಡಣ್ಣ ಬಜಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಭಾನುವಾರ ಜರುಗಿದ ಮ ಮ ಹುಂಡೇಕಾರ, ಸಾ ಮ ಹುಂಡೇಕಾರ ಅವರ ಸ್ಮರಣಾರ್ಥವಾಗಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.
“ಸಮಾಜದಲ್ಲಿರುವ ಮೇಲುಕೀಳು ತೊಡೆದು ಸಮ ಸಮಾಜ ನಿರ್ಮಾಣ ಮಾಡುವ ಶಕ್ತಿ ಸಾಹಿತ್ಯಕ್ಕೆ ಇದೆ. ಪ್ರತಿ ದಿನವೂ ಕ್ರಿಯಾಶೀಲವಾಗಿ ಸಾಹಿತ್ಯದ ಚಟುವಟಿಗಳನ್ನು ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಾ ಬಂದಿದೆ. ಈ ರೀತಿ ಸಮಾಜ ತಿದ್ದುವ ಶಕ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ” ಎಂದರು.
ಉಪನ್ಯಾಸಕರಾಗಿ ಮಲ್ಲಮ್ಮ ಬಿರಾದಾರ ಅವರು ಜನಪದ ಸಾಹಿತ್ಯ ಕುರಿತು ಮಾತನಾಡಿ, “ಜನಪದ ಸಾಹಿತ್ಯ ಸಾವನ್ನು ಧಿಕ್ಕರಿಸುವ ಜೀವಂತ ಪಳೆಯುಳಿಕೆ. ಮಣ್ಣನ್ನು ಪೂಜಿಸುವ ಮತ್ತು ಪ್ರೀತಿಸುವ ಸಂಸ್ಕಾರ ಜನಪದರಿಗಿದೆ. ಜನಪದ ಸಾಹಿತ್ಯ ಕಲೆಗಳು ಮಾನವ ಸಂಸ್ಕೃತಿ ಸಂಪ್ರದಾಯಗಳ ಆಚರಣೆ ಸಮಾಜದಲ್ಲಿ ಸಾಮರಸ್ಯ ತರುತ್ತವೆ” ಎಂದರು.
ಉಪನ್ಯಾಸ ನೀಡಿದ ಸಂಗಮೇಶ ಬದಾಮಿ ಅವರು ವಿಜಯಪುರ ಜಿಲ್ಲೆಯಲ್ಲಿ ರಂಗಭೂಮಿ ಬೆಳದು ಬಂದ ಬಗೆ ಮತ್ತು ಅದು ಸಮಾಜಕ್ಕೆ ನೀಡಿದ ಕಾಣಿಕೆ ಕುರಿತು ಮಾತನಾಡಿ, “ರಂಗಭೂಮಿ ಸಮಾಜದ ಕನ್ನಡಿ. ಅದು ನಮ್ಮ ಬಿಂಬವನ್ನು ಪ್ರತಿನಿಧಿಸುತ್ತದೆ. ಸಾಂಸ್ಕೃತಿಕ ನಿರ್ಮಾಣ ಮಾಡುವಲ್ಲಿ ರಂಗಭೂಮಿ ಪಾತ್ರ ದೊಡ್ಡದು” ಎಂದರು.
ಮುಖ್ಯ ಅತಿಥಿಯಾಗಿ ಡಾ ಸುಮಾ ಬೋಳರಡ್ಡಿ ಮಾತನಾಡಿ, “ಮಕ್ಕಳಲ್ಲಿ ಸಂಸ್ಕಾರ ನೀಡುವುದು ಬಹಳ ಮುಖ್ಯ. ಪರಿಷತ್ತು ಇಂತಹ ಕಾರ್ಯಕ್ರಮ ಹಮ್ಮಿಕೊಳುವುದರ ಮೂಲಕ ಸಮಾಜವನ್ನು ನೈತಿಕ ಮಾರ್ಗದಲ್ಲಿ ತರಲು ಸಾಧ್ಯವಾಗುತ್ತದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವಹಿಸಿ ಡಾ ಸಂಗಮೇಶ ಮೇತ್ರಿ ಮಾತನಾಡಿ, “ವಿಜಯಪುರ ಜಿಲ್ಲೆ ಜನಪದ ರಂಗಭೂಮಿಯ ಹೆಬ್ಬಾಗಿಲು. ಜನಪದ ಆಟಗಳು ಉತ್ತರ ಕರ್ನಾಟಕದ ತುಂಬ ಬೆಳಯಲು ಕಾರಣ ವಿಜಯಪುರ ಜಿಲ್ಲೆಯ ರಂಗ ಕಲಾವಿದರು. ಅದೃಷ್ಯಪ್ಪ ಮಾನ್ವಿ ಅಂತಹ ಕಲಾವಿದರ ಹುಟ್ಟೂರು ವಿಜಯಪುರ ಜಿಲ್ಲೆಯಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ-ಗೋವಾ ರಸ್ತೆ ದುರಸ್ತಿ ಕಾಮಗಾರಿ; ಸಚಿವ ಸತೀಶ್ ಜಾರಕಿಹೊಳಿ ಚಾಲನೆ
ವೇದಿಕೆ ಮೇಲೆ ದತ್ತಿ ದಾನಿಗಳಾದ ವಿವೇಕ ಹುಂಡೇಕಾರ, ವಿಜಯ ಹುಂಡೇಕಾರ, ಎಂ ಎ ಅವಟಿ ದತ್ತಿ ಸಂಚಾಲಕ ರಾಜಾಸಾಹೇಬ ಶಿವನಗುತ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಸುಖದೇವಿ ಅಲಬಾಳಮಠ, ವಿಜಯಪುರ ನಗರ ಘಟಕ ಅಧ್ಯಕ್ಷೆ ಅನ್ನಪೂರ್ಣ ಬೆಳ್ಳಣ್ಣವರ, ತಿಕೋಟಾ ತಾಲೂಕ ಅಧ್ಯಕ್ಷ ಸಿದ್ದ್ರಾಮಯ್ಯ ಲಕ್ಕುಂಡಿಮಠ, ಕಮಲಾ ಮುರಾಳಿ, ವಿದ್ಯಾವತಿ ಅಂಕಲಗಿ, ರಜಾಕ ಮುಲ್ಲಾ, ರಮೇಶ ಜಾದವ, ಜಿ ಎಸ್ ಬಳ್ಳೂರ, ರಾಮನಗೌಡ ಪಾಟೀಲ, ಸುನೀಲ್ ಒಣರೊಟ್ಟಿ, ಶಾಂತಾ ವಿಭೂತಿ, ಎಸ್ ಜಿ ಜಂಗಮಶೆಟ್ಟಿ, ಕೆ ಎಫ್ ಅಂಕಲಗಿ, ಗಂಗಮ್ಮ ರೆಡ್ಡಿ, ಎ ಜಿ ಪಾಟೀಲ, ಅಲಿಸಾಬ ಕಡಕೆ, ಅಹ್ಮದ ವಾಲೀಕಾರ, ಎಂ ಎಂ ಅಂದಾನಿಮಠ, ಅನಿತಾ ಕಾಂಬಳೆ, ಈರಣ್ಣಾ ಮಾಮನೆ, ಶರಣಪ್ಪ ಬಿರಾದಾರ ಇದ್ದರು.
