ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಅಕ್ರಮ ನಡೆಯದಂತೆ ತಡೆಯಿರಿ ಎಂದು ವಿಜಯಪುರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮನವಿ ಸಲ್ಲಿಸಿದೆ.
ಮನವಿ ಪತ್ರದಲ್ಲಿ, 2022-23ನೇ ಸಾಲಿನ ಜಲಜೀವನ್ ಮಿಷನ್ ಯೋಜನೆಯ ಅಡಿಯಲ್ಲಿ ಸರ್ಕಾರ ಪ್ರತಿಮನೆಗೆ ಶುದ್ಧ ಕುಡಿಯುವ ನೀರಿನ್ನು ಒದಗಿಸುವ ಉತ್ತಮ ಯೋಜನೆಯನ್ನು ಹಮ್ಮಿಕೊಂಡಿದೆ. ಆದರೆ, ಸರ್ಕಾರಿ ಅಧಿಕಾರಿಗಳ ಮತ್ತು ಶಾಸಕರ ದಿವ್ಯ ನಿರ್ಲಕ್ಷದಿಂದಾಗಿ ಈಗಾಗಲೇ ಕೆಲವೊಂದು ಹಳ್ಳಿಗಳಲ್ಲಿ ಕಾಮಗಾರಿ ಪ್ರಾರಂಭವಾಗಿದೆ ಇನ್ನು ಕೆಲವೊಂದು ಹಳ್ಳಿಗಳಲ್ಲಿ ಚಾಲನೆಗೊಳ್ಳುತ್ತಿದೆ.
ಈ ಯೋಜನೆ ಅತ್ಯಂತ ಕಳಪೆ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರವಾದ ಚರ್ಚೆಗೆ ಗ್ರಾಸವಾಗುತ್ತಿದೆ ಚಿಂತಕರ ವಲಯದಲ್ಲಿ ಆತಂಕದ ಕೂಗು ಮೂಡಿ ಬರುತ್ತದೆ. ಆದ್ದರಿಂದಾಗಿ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತಂದು ದೇವರಹಿಪ್ಪರಗಿ ಮತಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವುದರ ಮೂಲಕ ಬರಗಾಲದ ನಾಡಿಗೆ ಜೀವ ಜಲ ಒದಗಿಸಿದ ಪುಣ್ಯ ಸರ್ಕಾರಕ್ಕೆ ಮತ್ತು ಪ್ರಾಮಾಣಿಕ ಅಧಿಕಾರಿ ವರ್ಗಕ್ಕೆ ತಟ್ಟುತ್ತದೆ.
ಮತಕ್ಷೇತ್ರದಲ್ಲಿ ಕೈಗೊಳ್ಳಲಾದ ಬಹುತೇಕ ವಿವಿಧ ಕಾಮಗಾರಿಗಳು ಅತ್ಯಂತ ಕಳಪೆ ಮಟ್ಟದಲ್ಲಿ ನಿರ್ಮಾಣವಾಗಿರುವ ಉದಾರಣೆಗಳು ಇವೆ. ಜೀವ ಜಲದ ವಿಷಯದಲ್ಲಿ ಭ್ರಷ್ಟಾಚಾರದ ವಾಸನೆ ತಾಗದೆ ಪ್ರಾಮಾಣಿಕವಾದ ಕಾಯಕದಿಂದ ಈ ಯೋಜನೆ ಯಶಸ್ವಿಯಾಗಿ ಜನರ ಮನೆ ಮನಗಳಿಗೆ ಮುಟ್ಟುವಂತೆ ಮಾಡಬೇಕಾಗಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹ ಮಾಡಿದೆ.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಳ್ಳಿ, ರಾಕೇಶ್ ಇಂಗಳಗಿ, ಹಮೀದ್ ಇನಾಮ್ದಾರ್, ಪ್ರವೀಣ್ ಕಣಜ ಮತ್ತಿತರರು ಇದ್ದರು.